ಶಂಕರಾಚಾರ್ಯರ ಬಗ್ಗೆ ಅವಹೇಳನ ಖಂಡನೀಯ

ರಮೇಶ್ ಕುಲಕರ್ಣಿ
ರಮೇಶ್ ಕುಲಕರ್ಣಿ
Published on
ಬೀದರ್: ಇತ್ತೀಚಿನ ದಿನಗಳಲ್ಲಿ ಕೆಲವು ಸಾರ್ವಜನಿಕ ವೇದಿಕೆಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಜಗದ್ಗುರು ಆದಿ ಶಂಕರಾಚಾರ್ಯರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿರುವುದು ಅತ್ಯಂತ ಖಂಡನೀಯ ಹಾಗೂ ನೋವುಂಟು ಮಾಡುವ ಸಂಗತಿಯಾಗಿದೆ ಎಂದು ಅಖಿಲ ಭಾರತ ಬ್ರಾಹ್ಮಣ ಮಹಾಸಂಘದ ಜಿಲ್ಲಾಧ್ಯಕ್ಷ ರಮೇಶ್ ಕುಲಕರ್ಣಿ ಹೇಳಿದ್ದಾರೆ.
ಜಗದ್ಗುರು ಆದಿ ಶಂಕರಾಚಾರ್ಯರು ಸನಾತನ ಧರ್ಮದ ಪುನರುಜ್ಜೀವನಕ್ಕಾಗಿ ತಮ್ಮ ಸಂಪೂರ್ಣ ಜೀವನವನ್ನೇ ಸಮರ್ಪಿಸಿದ ಮಹಾನ್ ಯತಿಗಳು. ವೇದ, ಉಪನಿಷತ್ತು ಹಾಗೂ ಭಾರತೀಯ ಸಂಸ್ಕೃತಿಯ ಶಾಶ್ವತ ಮೌಲ್ಯಗಳನ್ನು ಪುನಃ ಪ್ರತಿಷ್ಠಾಪಿಸಿದ ಯುಗಪುರುಷರು. ದೇಶದ ನಾಲ್ಕು ದಿಕ್ಕುಗಳಲ್ಲಿ ಪೀಠಗಳನ್ನು ಸ್ಥಾಪಿಸುವ ಮೂಲಕ ರಾಷ್ಟ್ರೀಯ ಏಕತೆ, ಧಾರ್ಮಿಕ ಸಾಮರಸ್ಯ ಹಾಗೂ ಆಧ್ಯಾತ್ಮಿಕ ಜಾಗೃತಿಗೆ ಭದ್ರ ಬುನಾದಿ ಹಾಕಿದ ವಿಶ್ವವಂದ್ಯ ಮಹನೀಯರು.
ಅವರ ಜ್ಞಾನ, ಭಕ್ತಿ, ವೈರಾಗ್ಯ, ತ್ಯಾಗ ಹಾಗೂ ಅದ್ವೈತ ವೇದಾಂತದ ಸಂದೇಶ ಇಂದಿಗೂ ಕೋಟ್ಯಂತರ ಜನರಿಗೆ ದಾರಿದೀಪವಾಗಿದೆ. ಇಂತಹ ಮಹಾನ್ ಸಂತ, ದಾರ್ಶನಿಕ ಹಾಗೂ ಜಗದ್ಗುರುಗಳ ಬಗ್ಗೆ ಕೀಳುಮಟ್ಟದ, ಅವಹೇಳನಕಾರಿ ಮತ್ತು ಅವಮಾನಕಾರಿ ಹೇಳಿಕೆಗಳನ್ನು ನೀಡುವುದು ಭಾರತೀಯ ಸಂಸ್ಕೃತಿಗೆ, ಸನಾತನ ಧರ್ಮಕ್ಕೆ ಹಾಗೂ ಕೋಟ್ಯಂತರ ಭಕ್ತರ ಧಾರ್ಮಿಕ ಭಾವನೆಗಳಿಗೆ ಮಾಡಿದ ಅಪಮಾನವಾಗಿದೆ.
ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದು ಯಾವುದೇ ಧರ್ಮ, ದೇವರು, ಗುರುಗಳು ಅಥವಾ ಮಹಾಪುರುಷರನ್ನು ನಿಂದಿಸುವ ಸ್ವಾತಂತ್ರ್ಯವಲ್ಲ. ಸಂವಿಧಾನ ನೀಡಿರುವ ಹಕ್ಕುಗಳ ಜೊತೆಗೆ ಸಮಾಜದ ಶಾಂತಿ, ಸೌಹಾರ್ದತೆ ಹಾಗೂ ಪರಸ್ಪರ ಗೌರವವನ್ನು ಕಾಪಾಡುವ ಜವಾಬ್ದಾರಿಯೂ ಪ್ರತಿಯೊಬ್ಬ ನಾಗರಿಕನ ಮೇಲಿದೆ. ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸುವುದು ಪ್ರಜಾಪ್ರಭುತ್ವದ ಹಕ್ಕಾಗಿದ್ದರೂ, ಅದು ಯಾರೊಬ್ಬರ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಉಂಟುಮಾಡುವ ರೀತಿಯಲ್ಲಿ ಇರಬಾರದು.
ಆದಿ ಶಂಕರಾಚಾರ್ಯರು ಕೇವಲ ಬ್ರಾಹ್ಮಣ ಸಮುದಾಯದವರಿಗಷ್ಟೇ ಸೀಮಿತರಲ್ಲ; ಅವರು ಇಡೀ ಭಾರತೀಯ ಸಂಸ್ಕೃತಿಯ, ಆಧ್ಯಾತ್ಮಿಕ ಪರಂಪರೆಯ ಹಾಗೂ ವಿಶ್ವಮಾನವತೆಗೆ ಮಾರ್ಗದರ್ಶನ ನೀಡಿದ ಜಗದ್ಗುರುಗಳು. ಅವರ ಆದರ್ಶಗಳು ಸಮಾನತೆ, ಸತ್ಯ, ಜ್ಞಾನ, ಸಹಿಷ್ಣುತೆ ಮತ್ತು ಮಾನವೀಯತೆಯ ಪ್ರತೀಕವಾಗಿವೆ. ಅಂತಹ ಮಹಾನ್ ಸಂತನ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುವುದು ಇಡೀ ದೇಶದ ಸಂಸ್ಕೃತಿ ಮತ್ತು ಪರಂಪರೆಗೆ ಮಾಡಿದ ಅಪಚಾರವಾಗಿದೆ.
ಇಂತಹ ಪ್ರಚೋದನಕಾರಿ ಹೇಳಿಕೆಗಳು ಸಮಾಜದಲ್ಲಿ ಅಶಾಂತಿ, ದ್ವೇಷ ಹಾಗೂ ಗೊಂದಲವನ್ನು ಉಂಟುಮಾಡುವ ಸಾಧ್ಯತೆ ಇರುವುದರಿಂದ, ಸಂಬಂಧಪಟ್ಟವರು ಕೂಡಲೇ ತಮ್ಮ ಹೇಳಿಕೆಗಳನ್ನು ಹಿಂಪಡೆದು ಸಾರ್ವಜನಿಕರ ಕ್ಷಮೆಯಾಚಿಸಬೇಕು. ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇಂತಹ ಘಟನೆಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಪುನರಾವರ್ತನೆ ಆಗದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕೆಂದು ಅಖಿಲ ಭಾರತ ಬ್ರಾಹ್ಮಣ ಮಹಾಸಂಘ, ಬೀದರ ಜಿಲ್ಲಾ ಘಟಕ ಆಗ್ರಹಿಸಿದೆ.
ಸನಾತನ ಧರ್ಮದ ಮಹಾನ್ ಆಚಾರ್ಯರ ಗೌರವ, ಭಾರತೀಯ ಸಂಸ್ಕೃತಿಯ ಮೌಲ್ಯಗಳು ಹಾಗೂ ಸಮಾಜದ ಶಾಂತಿ, ಸೌಹಾರ್ದತೆ ಮತ್ತು ಪರಸ್ಪರ ಗೌರವವನ್ನು ಕಾಪಾಡುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ. ಆದ್ದರಿಂದ ಎಲ್ಲರೂ ಜವಾಬ್ದಾರಿಯುತವಾಗಿ ನಡೆದುಕೊಂಡು ಸಮಾಜದಲ್ಲಿ ಸೌಹಾರ್ದತೆ, ಸಹಬಾಳ್ವೆ ಹಾಗೂ ರಾಷ್ಟ್ರೀಯ ಏಕತೆಯನ್ನು ಬಲಪಡಿಸಬೇಕೆಂದು ಅಖಿಲ ಭಾರತ ಬ್ರಾಹ್ಮಣ ಮಹಾಸಂಘ, ಬೀದರ ಜಿಲ್ಲಾ ಘಟಕ ಮನವಿ ಮಾಡಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net