ಬೀದರ್: ಸೇವಾ ನಿರತ ಶಿಕ್ಷಕರ ಹಕ್ಕು ಹಾಗೂ ಉದ್ಯೋಗ ರಕ್ಷಣೆಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಆಗ್ರಹಿಸಿದೆ.
ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಭಾಲ್ಕಿಯಲ್ಲಿ ಶನಿವಾರ ಈ ಕುರಿತು ಸಂಸದ ಸಾಗರ್ ಖಂಡ್ರೆ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಶಿಕ್ಷಕರಿಗೆ ಶಿಕ್ಷಕರ ಅರ್ಹತಾ ಪರೀಕ್ಷೆ ಕಡ್ಡಾಯಗೊಳಿಸಿರುವ ಕಾರಣ ಗೊಂದಲ ಉಂಟಾಗಿದೆ. ಆರ್.ಟಿ.ಇ. ಹಾಗೂ ಟಿ.ಇ.ಟಿ. ಜಾರಿಯಾಗುವ ಮೊದಲು ಕಾನೂನು ಬದ್ಧವಾಗಿ ನೇಮಕಗೊಂಡಿರುವ ಶಿಕ್ಷಕರಿಗೆ ನಂತರದ ಅರ್ಹತಾ ಷರತ್ತುಗಳಿಂದ ವಿನಾಯಿತಿ ನೀಡಬೇಕು. ಶಿಕ್ಷಕರ ಸೇವಾ ಹಕ್ಕುಗಳು, ಉದ್ಯೋಗ ಭದ್ರತೆ, ಪಿಂಚಣಿ, ಬಡ್ತಿಗೆ ಯಾವುದೇ ಧಕ್ಕೆಯಾಗದಂತೆ ಕೇಂದ್ರ ಸರ್ಕಾರ ಸೂಕ್ತ ಕಾನೂನು ಹಾಗೂ ಆಡಳಿತಾತ್ಮಕ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಶಿಕ್ಷಕರ ಸಂಘಟನೆಗಳು ಹಾಗೂ ಶಿಕ್ಷಣ ತಜ್ಞರೊಂದಿಗೆ ಸಮಾಲೋಚನೆ ನಡೆಸಿ, ನ್ಯಾಯಸಮ್ಮತ ಹಾಗೂ ಮಾನವೀಯ ನೆಲೆಯಲ್ಲಿ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರದ ಗಮನ ಸೆಳೆಯಬೇಕು ಎಂದರು.
ಸೇವಾ ನಿರತ ಶಿಕ್ಷಕರ ಬೇಡಿಕೆಗೆ ಸ್ಪಂದಿಸಲಾಗುವುದು. ಬೇಡಿಕೆ ಕುರಿತು ಸಂಸತ್ತಿನಲ್ಲಿ ಕೇಂದ್ರದ ಗಮನ ಸೆಳೆಯಲಾಗುವುದು ಎಂದು ಭರವಸೆ ನೀಡಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರವೀಂದ್ರ ರೆಡ್ಡಿ, ಉಪಾಧ್ಯಕ್ಷ ಅಲ್ಲಾವುದ್ದಿನ್ ಪಟೇಲ್, ಸಮಿನಾ ಬೇಗಂ, ಅಶೋಕ ಪಾಟೀಲ, ಶರಣಪ್ಪ ಬಿರಾದಾರ, ಲಲಿತಾ, ಸೂರ್ಯಕಾಂತ ಸುಂಟೆ, ವೀರಶೆಟ್ಟಿ ಕೆಂಚಾ, ಸಂತೋಷ್ ಅಕ್ಕಣ್ಣ, ಬಸವರಾಜ ದಾನಾ, ಮಂಜುನಾಥ, ವಿಜಯಕುಮಾರ, ಗಜಾನನ ಮಲ್ಲಾ, ಸತೀಶ್ ಸ್ವಾಮಿ, ಸೋಮಶೇಖರ ಅಮಲಾಪುರ, ರಾಮ ಬಾನಾ, ಚಂದ್ರಕಾಂತ ತಳವಾಡೆ, ಸಂತೋಷ್ ವಾಡೆ, ಸತ್ಯವಾನ ಕಾಂಬಲೆ, ಕಿರಣ ಕೆ.ಪಿ. ಸುಧಾಕರ ಗಾಯಕವಾಡ್, ಅನ್ನಪೂರ್ಣಾ ಮೇತ್ರೆ, ರತ್ನಮ್ಮ ಹಾಲಕೂಡೆ, ನಿರಂಜಪ್ಪ ಪಾತ್ರೆ, ಸುಭಾಷ್ ಮೂಲಗೆ, ಸಂದೀಪ್ ವಾಡೆಕರ್, ಹಣಮಶೆಟ್ಟಿ, ಸಂತೋಷ್, ರಾಜಕುಮಾರ, ಪಂಢರಿ ಅಡೆ, ರಾಜಪ್ಪ ನಂದೋಡೆ ಮತ್ತಿತರರು ಇದ್ದರು.