ಭಿಕ್ಷಾಟನೆ ಮುಕ್ತ ಬೀದರ್ ಅಭಿಯಾನ

ಬೀದರ್‍ನ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಕಚೇರಿಯಲ್ಲಿ ಭಿಕ್ಷಾಟನೆ ಮುಕ್ತ ಬೀದರ್ ಅಭಿಯಾನ ಕುರಿತ ವಿಡಿಯೋ ಬಿಡುಗಡೆ ಮಾಡಲಾಯಿತು
ಬೀದರ್‍ನ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಕಚೇರಿಯಲ್ಲಿ ಭಿಕ್ಷಾಟನೆ ಮುಕ್ತ ಬೀದರ್ ಅಭಿಯಾನ ಕುರಿತ ವಿಡಿಯೋ ಬಿಡುಗಡೆ ಮಾಡಲಾಯಿತು
Published on
ಬೀದರ್: ಬೀದರ್ ಬೆಟರ್‍ಮೆಂಟ್ ಫೌಂಡೇಷನ್ ಹಾಗೂ ಬೀದರ್ ನಾಗರಿಕ ಸನ್ಮಾರ್ಗ ಸಮಿತಿ
ಭಿಕ್ಷಾಟನೆ ಮುಕ್ತ ಬೀದರ್‍ಗೆ ಅಭಿಯಾನ ಹಮ್ಮಿಕೊಂಡಿವೆ.
ನಗರದ ಶಹಾಪುರ ಗೇಟ್ ಸಮೀಪದ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಕಚೇರಿಯಲ್ಲಿ ನಡೆದ ಭಿಕ್ಷಾಟನೆ ಮುಕ್ತ ಬೀದರ್ ಅಭಿಯಾನ ಕುರಿತ ವಿಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಬೀದರ್ ಬೆಟರ್‍ಮೆಂಟ್ ಫೌಂಡೇಷನ್ ಹಾಗೂ ಬೀದರ್ ನಾಗರಿಕ ಸನ್ಮಾರ್ಗ ಸಮಿತಿಯ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಅವರು ಈ ಮಾಹಿತಿ ನೀಡಿದರು.
ಬೀದರ್ ಬೆಟರ್‍ಮೆಂಟ್ ಫೌಂಡೇಷನ್ ಎರಡು ವರ್ಷದಿಂದ ಭಿಕ್ಷಾಟನೆ ಮುಕ್ತ ಬೀದರ್‍ಗೆ ಅಭಿಯಾನ ನಡೆಸುತ್ತಾ ಬಂದಿದೆ. ಇದೀಗ ಬೀದರ್ ನಾಗರಿಕ ಸನ್ಮಾರ್ಗ ಸಮಿತಿಯೂ ಇದಕ್ಕೆ ಕೈಜೋಡಿಸಿದೆ. ಜಿಲ್ಲಾ ಆಡಳಿತ, ಪೊಲೀಸ್ ಇಲಾಖೆ, ವಿವಿಧ ಸಂಘ ಸಂಸ್ಥೆಗಳು ಅಭಿಯಾನದ ಯಶಸ್ವಿಗೆ ಸಹಕಾರ ನೀಡುತ್ತಿವೆ ಎಂದು ತಿಳಿಸಿದರು.
ಅಭಿಯಾನದ ಮೊದಲ ಹಂತದಲ್ಲಿ ನಗರದ ಪ್ರಾರ್ಥನಾ ಸ್ಥಳಗಳನ್ನು ಭಿಕ್ಷಾಟನೆ ಮುಕ್ತಗೊಳಿಸಲಾಗುತ್ತಿದೆ. ಪ್ರಾರ್ಥನಾ ಸ್ಥಳಗಳ ಪ್ರಮುಖರು ಹಾಗೂ ಸಾರ್ವಜನಿಕರಲ್ಲಿ ಭಿಕ್ಷೆ ಹಾಕದಂತೆ ಮನವಿ ಮಾಡಲಾಗುತ್ತಿದೆ. ವೃತ್ತಿ ಪರ ಭಿಕ್ಷುಕರಿಗೆ ಭಿಕ್ಷಾಟನೆ ಕೈಬಿಟ್ಟು, ಕಾಯಕದಲ್ಲಿ ತೊಡಗಿಸಿಕೊಳ್ಳುವಂತೆ ತಿಳಿವಳಿಕೆ ನೀಡಲಾಗಿದೆ. ಭಿಕ್ಷೆ ಬೇಡುವುದು ಹಾಗೂ ಭಿಕ್ಷೆ ಕೊಡುವುದು ಎರಡೂ ಪಾಪದ ಕೆಲಸಗಳಾಗಿವೆ ಎಂದು ಮನವರಿಕೆ ಮಾಡಲಾಗುತ್ತಿದೆ ಎಂದು ಹೇಳಿದರು.
ನಗರದಲ್ಲಿ ನಡೆಸಿದ ಸಮೀಕ್ಷೆ ವೇಳೆ 25 ಜನ ಮಾತ್ರ ಅಂಗವೈಕಲ್ಯ, ಮಾನಸಿಕ ಅಸ್ವಸ್ಥತೆ ಹಾಗೂ ಇತರ ಕಾರಣಕ್ಕಾಗಿ ಭಿಕ್ಷಾಟನೆಯಲ್ಲಿ ತೊಡಗಿರುವುದು ಕಂಡು ಬಂದಿದೆ. ವೃತ್ತಿಪರ ಭಿಕ್ಷುಕರು, ವೇಷ ಬದಲಿಸಿ ಭಿಕ್ಷೆ ಬೇಡುವವರ ಸಂಖ್ಯೆ ಹೆಚ್ಚಿದೆ ಎಂದು ತಿಳಿಸಿದರು.
ನಿಜವಾದ ಭಿಕ್ಷುಕರಿಗೆ ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ ಹಾಗೂ ಸಂಘ ಸಂಸ್ಥೆಗಳ ನೆರವಿನೊಂದಿಗೆ ವಿವಿಧ ಸೌಲಭ್ಯ ಕಲ್ಪಿಸಿಕೊಟ್ಟು, ಭಿಕ್ಷಾಟನೆ ಬಿಡಿಸಿ, ಸಮಾಜದ ಮುಖ್ಯ ವಾಹಿನಿಗೆ ತರಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.
ದಾನ ಮಾಡುವುದು ಮಾನವೀಯ ಗುಣವಾದರೂ, ವೃತ್ತಿ ಪರ ಭಿಕ್ಷಾಟನೆಗೆ ಪ್ರೋತ್ಸಾಹ ನೀಡುವುದು ಸಾಮಾಜಿಕ ಪ್ರಗತಿಯನ್ನು ಕುಂಠಿತಗೊಳಿಸುತ್ತದೆ. ಭಿಕ್ಷಾಟನೆಯನ್ನೇ ಒಂದು ಕಾಯಂ ಹಾಗೂ ಲಾಭದಾಯಕ ವೃತ್ತಿಯಾಗಿಸುತ್ತದೆ. ಜಿಲ್ಲೆಯ ಸಾಂಸ್ಕøತಿಕ ಹಾಗೂ ಪ್ರವಾಸಿ ವರ್ಚಸ್ಸಿಗೆ ಧಕ್ಕೆ ಉಂಟು ಮಾಡುತ್ತದೆ. ಹೀಗಾಗಿ ಜಿಲ್ಲೆಯ ಜನರು ಭಿಕ್ಷುಕರಿಗೆ ದಾನ ಕೊಡುವುದನ್ನು ನಿಲ್ಲಿಸಬೇಕು. ಈ ಮೂಲಕ ಭಿಕ್ಷಾಟನೆ ಮುಕ್ತ ಬೀದರ್ ಹಾಗೂ ಸ್ವಸ್ಥ ಸಮಾಜ ನಿರ್ಮಾಣಕ್ಕೆ
ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಭಿಕ್ಷೆಯನ್ನೇ ವೃತ್ತಿ ಮಾಡಿಕೊಂಡವರು ಕೂಡಲೇ ಅದನ್ನು ತೊರೆಯಬೇಕು. ಸತ್ಯ ಶುದ್ಧ ಕಾಯಕ ಮಾಡಿ, ಸ್ವಾಭಿಮಾನದ ಬದುಕು ಸಾಗಿಸಬೇಕು ಎಂದು ಸಲಹೆ ಮಾಡಿದರು.
ಫೌಂಡೇಷನ್ ಹಾಗೂ ಸಮಿತಿಯಿಂದ ಈಗಾಗಲೇ ಸಾರಾಯಿ, ಗುಟ್ಕಾ, ಸಿಗರೇಟ್ ಸೇರಿದಂತೆ ನಶೆ ಮುಕ್ತ ಬೀದರ್‍ಗೂ ಅಭಿಯಾನ ನಡೆಸಲಾಗುತ್ತಿದೆ. ಸಾರ್ವಜನಿಕರಿಂದ ಇದಕ್ಕೂ ವ್ಯಾಪಕ ಬೆಂಬಲ ದೊರೆಯುತ್ತಿದೆ. ಬರುವ ದಿನಗಳಲ್ಲಿ ಸಮಾಜ ದಲ್ಲಿನ ಕೆಡಕುಗಳನ್ನು ನಿವಾರಿಸುವ, ಒಳ್ಳೆಯದನ್ನು ಹರಡುವ ಇನ್ನಷ್ಟು ಕೆಲಸಗಳನ್ನು ಮಾಡಲು ಯೋಜಿಸಲಾಗಿದೆ ಎಂದು ತಿಳಿಸಿದರು.
ವಿಡಿಯೋ ಬಿಡುಗಡೆ ಮಾಡಿದ ಹೈದರಾಬಾದ್‍ನ ಮಲ್ಲಾರೆಡ್ಡಿ ವಿಶ್ವವಿದ್ಯಾಪೀಠದ ಉಪಾಧ್ಯಕ್ಷೆ ಡಾ. ಪ್ರೀತಿ ರೆಡ್ಡಿ ಅವರು, ಬೀದರ್ ಅನ್ನು ಭಿಕ್ಷಾಟನೆ ಮುಕ್ತಗೊಳಿಸಲು ಅಭಿಯಾನ ನಡೆಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಬೀದರ್ ನಾಗರಿಕ ಸನ್ಮಾರ್ಗ ಸಮಿತಿಯ ಕಾರ್ಯದರ್ಶಿ ಅಶೋಕ ವಡಗಾವೆ, ಪ್ರಮುಖರಾದ ರಫಿಕ್ ಅಹಮ್ಮದ್, ಶಂಭುಲಿಂಗ ವಾಲ್ದೊಡ್ಡಿ, ಸುನೀಲ್ ಟಿ. ಕಾಶೆಂಪುರ, ಬಲಜೀತ್ ಚಿಲ್ಲರ್ಗಿ, ಮಕ್ಸೂದ್ ಅಹಮ್ಮದ್ ಖಾನ್, ಮಹಮ್ಮದ್ ಅಶ್ಫಾಕ್ ಅಹಮ್ಮದ್, ಎಂ.ಡಿ. ಸುಲ್ತಾನ್, ರಾಮಕೃಷ್ಣ ರೆಡ್ಡಿ, ಮಹಮ್ಮದ್ ಖಾದರ್ ಮತ್ತಿತರರು ಇದ್ದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net