ಮೋದಿ ಸರ್ಕಾರಕ್ಕೆ ಖಂಡ್ರೆ ಕ್ಷಮೆಯಾಚಿಸಲಿ

ಭಗವಂತ ಖೂಬಾ
ಭಗವಂತ ಖೂಬಾ
Published on
ಬೀದರ್: ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಪ್ರಾಯೋಜಿತ ವಂಚನೆ ಎಂದು ಸುಳ್ಳು ಹೇಳಿ ಅದರ ವಿರುದ್ಧ ಅಪಪ್ರಚಾರ ನಡೆಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಅವರು ನರೇಂದ್ರ ಮೋದಿ ಸರ್ಕಾರದ ಕ್ಷಮೆಯಾಚಿಸಬೇಕು ಎಂದು ಕೇಂದ್ರದ ಮಾಜಿ ಸಚಿವ ಭಗವಂತ ಖುಬಾ ಆಗ್ರಹಿಸಿದ್ದಾರೆ.
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ 2025-26ನೇ ಸಾಲಿನಲ್ಲಿ 246.89 ಕೋಟಿ ರೂ. ಪರಿಹಾರ ಮಂಜೂರಾಗಿ, 155 ಕೋಟಿ ರೂ. ಈಗಾಗಲೇ ರೈತರ ಖಾತೆಗೆ ಜಮೆಯಾಗಿದೆ. ಇನ್ನುಳಿದ 91 ಕೊಟಿ ರೂ. ಪರಿಹಾರ ಮುಂದಿನ ಕೆಲ ದಿನಗಳಲ್ಲಿ ಜಮೆಯಾಗಲಿದೆ. ಮೋದಿ ಸರ್ಕಾರದ ಬದ್ದತೆ, ರೈತರ ಮೇಲಿನ ಕಾಳಜಿ ಹಾಗೂ ಯೋಜನೆಗಳ ಬಗ್ಗೆ ಇರುವ ಭರವಸೆ ಮತ್ತಷ್ಟು ಹೆಚ್ಚು ಮಾಡಿದೆ ಎಂದು ಇಲ್ಲಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸತ್ಯ ಹೀಗಿರುವಾಗ ಕಳೆದ 10 ವರ್ಷಗಳಿಂದ ಈ ಯೋಜನೆ ಬಗ್ಗೆ ಈಶ್ವರ ಖಂಡ್ರೆಯವರು ಅಪಪ್ರಚಾರ ಮಾಡಿದರು. ರೈತರಿಗೆ ಈ ಯೋಜನೆಯಿಂದ ದೂರ ಇರಿಸುವ ಪ್ರಯತ್ನ ಮಾಡಿದರು. ಖಂಡ್ರೆಯವರಿಗೆ ಸಿಕ್ಕ ಅಕಾರವನ್ನು ಸರಿಯಾಗಿ ಬಳಸಿಕೊಳ್ಳದೆ, ದುರಾಡಳಿತದ ಸರದಾರನಾಗಿ ತನ್ನ ವೈವಿಫಲ್ಯ ಮುಚ್ಚಿಕೊಳ್ಳುವ ಉದ್ದೇಶದಿಂದ ಮೇಲಿಂದ ಮೇಲೆ ಈ ಯೋಜನೆ ಬಗ್ಗೆ ಸುಳ್ಳು ಹೇಳಿದರು. ಇದೀಗ 246 ಕೋಟಿ ರೂ. ಪರಿಹಾರ ರೈತರಿಗೆ ಸಿಗುತ್ತಿದೆ. ಈಗ ಯಾವುದೇ ನಾಚಿಕೆಯಿಲ್ಲದೆ ತಮ್ಮ ಸಾಧನೆ ಎಂದು ಖಂಡ್ರೆ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಕುಟುಕಿದ್ದಾರೆ.
ಸ್ವಲ್ಪವಾದರು ರೈತರ ಬಗ್ಗೆ ಖಂಡ್ರೆಯವರಿಗೆ ಕಾಳಜಿಯಿದ್ದರೆ ಈ ಯೊಜನೆ ಬಗ್ಗೆ ಸುಳ್ಳು ಹೇಳಿದ್ದಕ್ಕಾಗಿ ಖಂಡ್ರೆಯವರು ಮೋದಿ ಸರ್ಕಾರಕ್ಕೆ ಕ್ಷಮೆ ಕೇಳಬೇಕು. ಮೋದಿ ಸರ್ಕಾರದ ಪ್ರತಿಯೊಂದು ಯೋಜನೆ ದೇಶದ ಪ್ರತಿಯೊಬ್ಬ ನಾಗರಿಕರ ರಕ್ಷಣೆ ಮತ್ತು ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗುತ್ತದೆ. ಅದರಂತೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯೂ ಒಂದಾಗಿದೆ ಎಂದು ಹೇಳಿದ್ದಾರೆ.
ಕಳೆದ 10 ವರ್ಷಗಳಲ್ಲಿ ಒಟ್ಟು 800 ಕೋಟಿ ರೂ.ಗೂ ಅಧಿಕ ಪರಿಹಾರ ಜಿಲ್ಲೆಯ ರೈತರಿಗೆ ಸಿಕ್ಕಿದೆ. ನನ್ನ ಅವಯಲ್ಲಿ ಯೋಜನೆ ಬಗ್ಗೆ ಜನರಿಗೆ ಅರಿವು ಮೂಡಿಸಿರುವ ಕಾರಣ, ರೈತರು ಇಂದು ಜಾಗೃತರಾಗಿದ್ದಾರೆ. ಈಶ್ವರ ಖಂಡ್ರೆಯವರ ನಿರಂತರ ಅಪಪ್ರಚಾರದ ಮಧ್ಯೆಯೂ ರೈತರು ನಿರಂತರವಾಗಿ ವಿಮೆ ಭರಿಸುತ್ತಿದ್ದಾರೆ. ಜತೆಗೆ ಪರಿಹಾರವೂ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಫಸಲ್ ಬಿಮಾ ಯೋಜನೆಯಿಂದ ಜಿಲ್ಲೆಯ ರೈತರು ಪರಿಹಾರ ಪಡೆದುಕೊಂಡು ಕೃಷಿ ನಷ್ಟ ಸರಿದೂಗಿಸಿಕೊಳ್ಳುತ್ತಿದ್ದರು ಸಹ ಈ ಯೋಜನೆಯನ್ನು ಈಶ್ವರ ಖಂಡ್ರೆ ಗೋಲ್ಮಾಲ್ ಎಂದಿದ್ದಾರೆ. 2025-26ನೇ ಸಾಲಿನಲ್ಲಿ ಜಿಲ್ಲೆಗೆ ಒಟ್ಟು 246 ಕೋಟಿ ರೂ. ಪರಿಹಾರ ಬಂದಿದೆ. ಖಂಡ್ರೆ ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net