ಬೀದರ್: ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಕುರಿ, ಮೇಕೆ ಘಟಕಗಳ ಫಲಾನುಭವಿಗಳ ಆಯ್ಕೆಗೆ ಶಾಸಕರ ಅಧ್ಯಕ್ಷತೆಯಲ್ಲಿ ರಚಿಸಿರುವ ಸಮಿತಿಯನ್ನು ರದ್ದುಪಡಿಸಬೇಕು ಎಂದು ಜಿಲ್ಲೆಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ಸಹಕಾರ ಸಂಘಗಳು ಆಗ್ರಹಿಸಿವೆ.
ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ನಗರದಲ್ಲಿ ಸೋಮವಾರ ರಾಜ್ಯ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ ಅವರಿಗೆ ಈ ಕುರಿತು ಮನವಿ ಪತ್ರ ಸಲ್ಲಿಸಿದರು.
ಶಾಸಕರು ಸಹಜವಾಗಿಯೇ ತಮ್ಮ ಬೆಂಬಲಿಗರನ್ನು ಯೋಜನೆಗೆ ಆಯ್ಕೆ ಮಾಡುತ್ತಾರೆ. ಹೀಗಾಗಿ ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗುತ್ತದೆ. ಕಾರಣ, ಜಿಲ್ಲಾಮಟ್ಟದ ಆಯ್ಕೆ ಸಮಿತಿ ಮೂಲಕವೇ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು ಎಂದು ಒತ್ತಾಯಿಸಿದರು.
Àಕುರಿಗಾರ ಸಹಕಾರ ಸಂಘಗಳ ಕಚೇರಿ ವೆಚ್ಚ ಭರಿಸಲು ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಸಹಾಯ ಧನ ನೀಡಬೇಕು. ಸಂಚಾರಿ ಕುರಿಗಾರರಿಗೆ ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ಕೊಡಬೇಕು. ನಾಡ ಬಂದೂಕು ಕೊಟ್ಟು, ಜಿಲ್ಲಾಮಟ್ಟದಲ್ಲಿ ತರಬೇತಿ ನೀಡಬೇಕು. ಪರಿಕರ ಕಿಟ್ ಕಲ್ಪಿಸಬೇಕು. ಎಲ್ಲ ಸಹಕಾರ ಸಂಘಗಳಿಂದ ಕುರಿಗಳಿಗೆ ಔಷಧಿ ವಿತರಿಸಬೇಕು. ಕುರಿಗಾರರ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ, ಮನೆ, ಸಾಲ, ನ್ಯಾಯ ಬೆಲೆ ಅಂಗಡಿ ಪರವಾನಗಿ ಕೊಡಬೇಕು. ಸಂಚಾರಿ ಕುರಿಗಾರರ ಮೇಲೆ ಹಲ್ಲೆ, ದೌರ್ಜನ್ಯ, ಅವಮಾನ ಪ್ರಕರಣಗಳ ಕುರಿತು ಪಶು ಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆಯಲ್ಲಿ ವಿಶೇಷ ಘಟಕ ತೆರೆಯಬೇಕು ಎಂದು ಬೇಡಿಕೆ ಮಂಡಿಸಿದರು.
ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಕುರಿಗಾರರ ಬೇಡಿಕೆ ಶೀಘ್ರದಲ್ಲೇ ಈಡೇರಿಕೆಗೆ ಪ್ರಯತ್ನಿಸಲಾಗುವುದು ಎಂದು ಎಚ್.ಎಂ. ರೇವಣ್ಣ ಭರವಸೆ ನೀಡಿದರು.
ರಾಜ್ಯ ಕುರಿ ಮಹಾ ಮಂಡಳದ ನಿರ್ದೇಶಕ ಪಂಡಿತರಾವ್ ಚಿದ್ರಿ, ಬಿಡಿಎ ಮಾಜಿ ಅಧ್ಯಕ್ಷ ಮುರಳಿಧರ ಎಕಲಾರಕರ್, ಪಶು ವೈದ್ಯ ಮತ್ತು ಪಶು ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಶಶಿಧರ ಅಲ್ಲೂರೆ, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ ಸಹಾಯಕ ನಿರ್ದೇಶಕ ಯೋಗೇಂದ್ರ ಕುಲಕರ್ಣಿ, ಪ್ರಮುಖರಾದ ಬಕ್ಕಪ್ಪ ಶೇರಿಕಾರ್, ಶಿವರಾಜ ಮಲೇಶಿ, ಬಾಬುರಾವ್ ಸಂಗೋಳಗಿ, ಶಾಮರಾವ್ ರಕ್ಷಾಳ್, ಸಂತೋಷ್ ಕುಪ್ಪೆ, ಅಶೋಕ್ ಅಲಿಯಂಬರ್, ಸಂಜುಕುಮಾರ ಅಲ್ಲೂರೆ, ಅಮೃತ ಧೂಪತಮಹಾಗಾಂವ್, ಶ್ರೀನಿವಾಸ್ ಭಾಲ್ಕಿ, ಝರೆಪ್ಪ ಭಾಲ್ಕಿ, ಸುರೇಶಕುಮಾರ ಕಂದಗೂಳ, ಕಿಲ್ಲಿಂಟನ್ ಚಿದ್ರಿ, ರಾಮಕೃಷ್ಣ ಸಿರ್ಸಿ, ಚಂದ್ರಕಾಂತ ಕಲವಾಡಿ, ಅಂಬಣ್ಣ ಸಂಗೋಳಗಿ, ಸಚಿನ್ ಶಹಾಪುರಗೇಟ್ ಇದ್ದರು.