ಬೀದರ್: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವರಾದ ನಂತರ ಮೊದಲ ಬಾರಿ ತವರು ಜಿಲ್ಲೆಗೆ ಆಗಮಿಸಿದ ಈಶ್ವರ ಖಂಡ್ರೆ ಅವರನ್ನು ಭಾಲ್ಕಿ ತಾಲ್ಲೂಕಿನ ಖಾನಾಪುರ ಗ್ರಾಮದಲ್ಲಿ ಯುವ ಮುಖಂಡ ಪಪ್ಪು ಪಾಟೀಲ ಖಾನಾಪುರ ನೇತೃತ್ವದಲ್ಲಿ ಬೆಂಬಲಿಗರು ಭಾನುವಾರ ಅದ್ಧೂರಿಯಾಗಿ ಸ್ವಾಗತಿಸಿದರು.
ಸಚಿವರು ಬೀದರ್-ಭಾಲ್ಕಿ ಮುಖ್ಯ ರಸ್ತೆಯಲ್ಲಿ ಇರುವ ಗ್ರಾಮಕ್ಕೆ ಬರುತ್ತಿದ್ದಂತೆಯೇ ಪಟಾಕಿ ಸಿಡಿಸಿ, ಡೊಳ್ಳು, ಬ್ಯಾಂಡ್ ಬಾಜಾದೊಂದಿಗೆ ಸ್ವಾಗತಿಸಿ ಬರಮಾಡಿಕೊಂಡರು. ಕ್ರೇನ್‍ನಿಂದ 40 ಅಡಿ ಉದ್ದದ ಹಾರ ಹಾಕಿದರು. ಎರಡು ಜೆಸಿಬಿಗಳಿಂದ ಪುಷ್ಪವೃಷ್ಟಿ ಮಾಡಿದರು. ಈಶ್ವರ ಖಂಡ್ರೆ ಅವರಿಗೆ ಜಯವಾಗಲಿ ಎಂಬ ಘೋಷಣೆಗಳನ್ನು ಮೊಳಗಿಸಿದರು.
ಬಳಿಕ ಪುಷ್ಪಗಳಿಂದ ಅಲಂಕೃತ ರಥದಲ್ಲಿ ಮೆರವಣಿಗೆ ಮಾಡಿ ಅಭಿಮಾನ ಮೆರೆದರು.
ಗ್ರಾಮಸ್ಥರು ನೀಡಿದ ಸ್ವಾಗತದಿಂದ ಹೃದಯ ತುಂಬಿ ಬಂದಿದೆ. ಸನ್ಮಾನದಿಂದ ನನ್ನ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ. ಇನ್ನೂ ಹೆಚ್ಚಿನ ಜನ ಸೇವೆಗೆ ಪ್ರೇರಣೆ ನೀಡಿದೆ ಎಂದು ಈಶ್ವರ ಖಂಡ್ರೆ ಅವರು ಹೇಳಿದರು.
ಪ್ರಮುಖರಾದ ಧನರಾಜ ಪಾಟೀಲ, ಪ್ರಭು ಪಾಟೀಲ, ಮಾಣಿಕ ಮೇತ್ರೆ, ಪ್ರಭು ತರನಳ್ಳಿ, ನಸೀರ್, ಸಿದ್ದು ಮಮದಾಪುರೆ, ಜೈಲೇಂದ್ರ, ಅಶೋಕ್ ರಾಠೋಡ್, ಗೋಪಿ ರಾಠೋಡ್, ಓಂಕಾರ, ಪ್ರಣವ್ ಶಿವಪೂಜೆ, ಕೃಷ್ಣ, ಅಹೆಮ್ಮದ್, ನಿತೀಶ್ ಪಾಟೀಲ, ಆನಂದ, ಧರ್ಮಜಿ, ಬಸು ಶೆಟಕಾರ್ ಮತ್ತಿತರರು ಇದ್ದರು.