ಅನುಮತಿ ನಿರಾಕರಿಸಿದ್ದಕ್ಕೆ ಸ್ವಾಗತ

ಬಸವರಾಜ ಧನ್ನೂರ
ಬಸವರಾಜ ಧನ್ನೂರ
Published on
ಬೀದರ್: ಬಸವಕಲ್ಯಾಣದಲ್ಲಿ ಜೂ. 28 ರಂದು ಹಮ್ಮಿಕೊಳ್ಳಲಾಗಿದ್ದ ಕನೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಅವರ ಕಾರ್ಯಕ್ರಮಕ್ಕೆ ಬಸವಕಲ್ಯಾಣ ತಾಲ್ಲೂಕು ಆಡಳಿತ ಅನುಮತಿ ನಿರಾಕರಿಸಿರುವುದನ್ನು ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಬಸವರಾಜ ಧನ್ನೂರ ಸ್ವಾಗತಿಸಿದ್ದಾರೆ.
ಆಡಳಿತದ ನಿರ್ಧಾರ ಸೂಕ್ತವಾಗಿದೆ. ಬಸವ ಭಕ್ತರನ್ನು ಬಸವ ತಾಲಿಬಾನಿಯೆಂದು ಅವಮಾನಿಸಿದ, ಬಸವ ತತ್ವ ಪ್ರಸಾರ ಕಾರ್ಯದಲ್ಲಿ ತೊಡಗಿಸಿಕೊಂಡ ಮಠಾಧೀಶರನ್ನು ನಿಂದಿಸಿದ ಹಾಗೂ ಸುಪ್ರೀಂಕೋರ್ಟ್‍ನಿಂದ ಛೀಮಾರಿ ಹಾಕಿಸಿಕೊಂಡ ಕನೇರಿ ಸ್ವಾಮೀಜಿ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿರುವುದು ಬಸವ ಭಕ್ತರಿಗೆ ಸಂತಸ ಉಂಟು ಮಾಡಿದೆ ಎಂದು ಹೇಳಿದ್ದಾರೆ.
ಕನೇರಿ ಸ್ವಾಮೀಜಿ ಅವರು ಬಸವಾದಿ ಶರಣರ ಪುಣ್ಯಭೂಮಿ ಬಸವಕಲ್ಯಾಣ ಪ್ರವೇಶಿಸುವುದನ್ನು ಜಿಲ್ಲೆಯ ಮಠಾಧೀಶರು, ಬಸವ ಪರ ಸಂಘಟನೆಗಳು ಹಾಗೂ ಬಸವ ಭಕ್ತರು ತೀವ್ರವಾಗಿ ವಿರೋಧಿಸಿದ್ದರು. ಅನುಮತಿ ನಿರಾಕರಣೆ ಮೂಲಕ ಆಡಳಿತ ಬಸವ ಭಕ್ತರ ಭಾವನೆಗೆ ಸ್ಪಂದಿಸಿದೆ ಎಂದು ತಿಳಿಸಿದ್ದಾರೆ.
ಕನೇರಿ ಸ್ವಾಮೀಜಿ ಬಸವಕಲ್ಯಾಣ ಪ್ರವೇಶ ವಿರೋಧಿಸಿ ಹೋರಾಟ ನಡೆಸಲು ಬಸವಕಲ್ಯಾಣದ ಬಸವ ಮಹಾಮನೆಯಲ್ಲಿ ಕರ್ನಾಟಕ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರ ನೇತೃತ್ವದಲ್ಲಿ ಜೂ. 14 ರಂದು ಮಧ್ಯಾಹ್ನ 2.30ಕ್ಕೆ ಹಮ್ಮಿಕೊಳ್ಳಲಾದ ಸಭೆ ಯಥಾವತ್ತಾಗಿ ನಡೆಯಲಿದೆ. ಜೂನ್ 28ಕ್ಕೆ ಕನೇರಿ ಸ್ವಾಮೀಜಿ ಅವರಿಗೆ ಯಾವ ಕಾರಣಕ್ಕೂ ಬಸವಕಲ್ಯಾಣ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net