ಗುರುನಾನಕ್ ಜಯಂತಿಗೆ ಮೆರವಣಿಗೆ ವೈಭವ

ಗುರುನಾನಕÀ ಜಯಂತಿ ನಿಮಿತ್ತ ಬೀದರ್‌ನಲ್ಲಿ ಬುಧವಾರ ಸಿಖ್ ಸಮುದಾಯದಿಂದ ಬೃಹತ್ ಮೆರವಣಿಗೆ ನಡೆಯಿತು.
ಗುರುನಾನಕÀ ಜಯಂತಿ ನಿಮಿತ್ತ ಬೀದರ್‌ನಲ್ಲಿ ಬುಧವಾರ ಸಿಖ್ ಸಮುದಾಯದಿಂದ ಬೃಹತ್ ಮೆರವಣಿಗೆ ನಡೆಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಗುರುದ್ವಾರ ಪರಿಸರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ
  • ದೇಶದ ವಿವಿಧೆಡೆಯ ಸಹಸ್ರಾರು ಸಿಖ್ಖರು ಭಾಗಿ
ಬೀದರ್: ಸಿಖ್ಖರ ಮೊದಲ ಗುರು ಮತ್ತು ಸಿಖ್ ಧರ್ಮ ಸಂಸ್ಥಾಪಕರಾದ ಶ್ರೀ ಗುರುನಾನಕ ದೇವ್ ಮಹಾರಾಜರ ಜಯಂತ್ಯುತ್ಸವ ಗುರುದ್ವಾರ ಪರಿಸರದಲ್ಲಿ ಬುಧವಾರ ಶ್ರದ್ಧೆ ಭಕ್ತಿಯೊಂದಿಗೆ ಜರುಗಿತು.
ನಾನಕ ಝಿರಾ ಪ್ರಬಂಧಕ ಸಮಿತಿಯಿಂದ ಬೆಳಗ್ಗಿನ ಜಾವದಿಂದ ತಡರಾತ್ರಿವರೆಗೆ ಸತ್ಸಂಗ, ಆರ್ಥಾ, ಅರ್ದಾಸ್, ಕೀರ್ತನ್, ಗುರುಗ್ರಂಥ ಸಾಹೀಬ್ ಪಠಣ ಸೇರಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಕರ್ನಾಟಕವಲ್ಲದೆ ನೆರೆಯ ಮಹಾರಾಷ್ಟçದ ನಾಂದೇಡ್, ಮುಂಬೈ, ಪಂಜಾಬ್ ಸೇರಿ ವಿವಿಧೆಡೆಯಿಂದ ಆಗಮಿಸಿದ ಸಹಸ್ರಾರು ಸಿಖ್ಖರು ಪಾಲ್ಗೊಂಡಿದ್ದರು.
ಗುರುದ್ವಾರದಲ್ಲಿ ದರ್ಶನ ಪಡೆದ ಭಕ್ತರು ಪವಿತ್ರ ಅಮೃತ ಕುಂಡದಲ್ಲಿನ ನೀರು (ತೀರ್ಥ) ಸೇವಿಸಿದರು. ಗುರುನಾನಕರು ದಕ್ಷಿಣ ಭಾರತ ಪ್ರವಾಸ (1512ರಲ್ಲಿ) ವೇಳೆ ಇಲ್ಲಿಗೆ ಬಂದಿದ್ದರು. ಆಗ ಇಲ್ಲಿ ಪಾದಸ್ಪರ್ಶಿಸಿದಾಗ ನೀರಿನ ಝರಿ ಚಿಮ್ಮಿತು ಎಂಬುದು ಇತಿಹಾಸ. ಹೀಗಾಗಿ ಸಿಖ್ಖರ ಪಾಲಿಗೆ ಈ ನೀರು ಅಮೃತಕ್ಕೆ ಸಮಾನ. ಈ ನೀರು ಪಡೆಯಲು ದೊಡ್ಡ ಸಾಲೇ ಕಂಡುಬAತು. ಅನೇಕರು ಕ್ಯಾನ್‌ಗಳಲ್ಲಿ ಕೊಂಡೊಯ್ಯುತ್ತಿರುವ ದೃಶ್ಯವೂ ಸಾಮಾನ್ಯವಾಗಿತ್ತು.
ಜಯಂತ್ಯುತ್ಸವದಲ್ಲಿ ಪಾಲ್ಗೊಳ್ಳಲು ಮಂಗಳವಾರ ಸಂಜೆಯಿAದಲೇ ಸಿಖ್ಖರ ತಂಡಗಳು ನಗರಕ್ಕೆ ಆಗಮಿಸಿದವು. ಬುಧವಾರ ಬೆಳಗ್ಗೆಯಿಂದ ತಡರಾತ್ರಿವರೆಗೆ ಸಹಸ್ರಾರು ವಾಹನಗಳಲ್ಲಿ ಬಂದ ಸಮಾಜದವರು ದರ್ಶನ ಪಡೆದು ಜಲಕುಂಡದಲ್ಲಿ ಪವಿತ್ರ ಸ್ನಾನ ಮಾಡಿದರು. ಭಕ್ತರಿಗೆ ಅನನುಕೂಲ ಆಗದಂತೆ ಸಮಿತಿ ಪ್ರಮುಖರು ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದರು. ಬಂದ ಎಲ್ಲ ಭಕ್ತರಿಗೂ ಅಚ್ಚುಕಟ್ಟಾಗಿ ವಿಶಿಷ್ಟ ಖಾದ್ಯಗಳ ಗುರು ಕಾಲ ಲಂಗರ್ (ಅನ್ನ ದಾಸೋಹ) ವ್ಯವಸ್ಥೆ ಮಾಡಲಾಗಿತ್ತು.
ಗುರುದ್ವಾರದಿಂದ ಸಂಜೆ ಆರಂಭವಾದ ವೈಭವದ ಮೆರವಣಿಗೆ ಉದಗೀರ್ ರಸ್ತೆಯ ಪ್ರಮುಖ ಮಾರ್ಗದಿಂದ ಡಾ.ಅಂಬೇಡ್ಕರ್ ವೃತ್ತದವರೆಗೆ ತೆರಳಿ ರಾತ್ರಿ ಪುನಃ ಗುರುದ್ವಾರ ತಲುಪಿ ಕೊನೆಗೊಂಡಿತು. ಮೆರವಣಿಗೆಯುದ್ದಕ್ಕೂ `ಬೋಲೆ ಸೋ ನಿಹಾಲ್ ಸತ್‌ಶ್ರೀ ಅಕಾಲ್', `ವಾಹೇ ಗುರೂಜಿ ಕಾ ಖಾಲ್ಸಾ ವಾಹೇ ಗುರೂಜಿಕಿ ಫತೇಹ್', `ಸತ್ ನಾಮ್ ವಾಹೇ ಗುರು' ಎಂಬಿತ್ಯಾದಿ ಘೋಷಣೆಗಳು ಮೊಳಗಿದವು. ಮುನ್ನೆಚ್ಚರಿಕೆಯಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಗುರುನಾನಕ ಝಿರಾ ಪ್ರಬಂಧಕ ಸಮಿತಿ ಅಧ್ಯಕ್ಷ ಸರ್ದಾರ್ ಬಲಬೀರ್‌ಸಿಂಗ್ ನೇತೃತ್ವದ ವಿವಿಧ ಕಾರ್ಯಕ್ರಮಗಳಲ್ಲಿ ಮನಪ್ರೀತಸಿಂಗ್ ಖನೂಜಾ ಬಂಟಿ, ಪುನೀತಸಿಂಗ್, ಜಸ್‌ಪ್ರೀತಸಿಂಗ್ ಮೊಂಟಿ ಇತರರು ಪಾಲ್ಗೊಂಡಿದ್ದರು.

ರೋಚಕ ಸಾಹಸಮಯ ಪ್ರದರ್ಶನ

ಸಿಖ್ ಸಮುದಾಯದ ಗುರುವೆನಿಸಿದ `ಗುರುಗ್ರಂಥ ಸಾಹೀಬ್' ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿತ್ತು. ಹೈದರಾಬಾದ್, ನಾಂದೇಡ್, ಕರೀಮನಗರ, ನಿಜಾಮಬಾದ್, ವಾರಂಗಲ್ ಸೇರಿ ದಕ್ಷಿಣ ಭಾರತದ 15ಕ್ಕೂ ಹೆಚ್ಚು ಗುರುದ್ವಾರಗಳಿಂದ ಆಗಮಿಸಿದ್ದ ನಿಶಾನ್‌ಸಾಬ್ (ಚೌಕಿ)ಗಳು ಮೆರವಣಿಗೆ ವೈಭವ ಹೆಚ್ಚಿಸಿದವು. ಮುಂಚೂಣಿಯಲ್ಲಿದ್ದ ಪಾಂಚ್‌ಪ್ಯಾರೇ ವೇಷಧಾರಿಗಳು ಗಮನಸೆಳೆದರು. ಯುವಕರು ಅಲ್ಲಲ್ಲಿ ತಲ್ವಾರ್, ಲಾಂಚಾ, ಲಾಠಿ ತಿರುಗಿಸಿ ಸಾಹಸ ಪ್ರದರ್ಶನ ನೀಡಿದ್ದು ನೋಡುಗರಲ್ಲಿ ರೋಮಾಂಚನ ಮೂಡಿಸಿತು. ತಲ್ವಾರ್ ಯುದ್ಧದ ಅಣಕು ಪ್ರದರ್ಶನವಂತೂ ಮೈನವೀರೇಳಿಸಿತು. ಮೆರವಣಿಗೆ ಆರಂಭದ ವೇಳೆ ಶಸ್ತಾçಸ್ತçಗಳನ್ನು ಕೈಯಲ್ಲಿ ಹಿಡಿದು ಗುರುನಾನಕ ಗೇಟ್‌ವರೆಗೆ ಹೋ ಎಂದು ಓಡುವ ದೃಶ್ಯ ನೋಡಲು ಜನ ಮುಗಿಬಿದ್ದಿದ್ದರು. 

ಗುರು ಸೇವಾ ಕಾರ್ಯಕ್ಕೆ ಸೈ

ನಾನಾ ಕಡೆಗಳಿಂದ ಆಗಮಿಸಿದ ಸಿಖ್ ಭಕ್ತಾದಿಗಳು ಗುರುದ್ವಾರ ಪರಿಸರದಲ್ಲಿ ವಿವಿಧ ಸೇವಾ ಕಾರ್ಯಗಳಲ್ಲಿ ಪಾಲ್ಗೊಂಡಿದ್ದು ವಿಶೇಷವೆನಿಸಿತು. ಸಿಖ್ಖರು ಜಯಂತಿ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ವೇಳೆ ಸ್ವಚ್ಛತೆ, ಅಡುಗೆ ಮಾಡುವುದು, ಊಟ ಬಡಿಸುವುದು, ಪ್ಲೇಟು ತೊಳೆಯುವಿಕೆ ಮತ್ತಿತರ ಸೇವೆ ಮಾಡುವುದು ಸಾಮಾನ್ಯ. ಮಹಿಳೆಯರು, ಮಕ್ಕಳು, ವೃದ್ಧರೆನ್ನದೆ ನೂರಾರು ಮಂದಿ ಸ್ವ ಇಚ್ಛೆಯಿಂದ ಸೇವಾ ಕಾರ್ಯಗಳÀಲ್ಲಿ ಭಾಗಿಯಾಗಿ ಧನ್ಯತೆ ಮೆರೆದರು. ಇಂಥ ಸೇವಾ ಕಾರ್ಯದಲ್ಲಿ ತೊಡಗಿದವರಲ್ಲಿ ಅನೇಕರು ಉನ್ನತ ಅಧಿಕಾರಿಗಳು, ಗಣ್ಯರು, ಉದ್ಯಮಿಗಳು, ರಾಜಕೀಯ ನೇತಾರರು ಸಹ ಸೇರಿರುವುದು ಗಮನಾರ್ಹ. ತಮ್ಮ ಹುದ್ದೆ ಮತ್ತು ಶ್ರೀಮಂತಿಕೆಯನ್ನು ಗುರು ಚರಣದಲ್ಲಿ ಸಮರ್ಪಿಸಿ ಸೇವಾಭಾವ ಮೆರೆದಿದ್ದು ವಿಶೇಷ ಹಾಗೂ ಮಾದರಿ. ಗುರುವಿಗಿಂತ ಶ್ರೇಷ್ಠ ಯಾರೂ ಇಲ್ಲ ಎಂಬ ಸಂದೇಶವನ್ನು ಈ ಮೂಲಕ ಸಾರಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net