

ಬೀದರ್: ಹಾಡಹಗಲೇ ಬೀದರ್ ತಹಸೀಲ್ದಾರ್ ಕಚೇರಿಯ ಶಿರಸ್ತೇದಾರನಿಗೆ ಚಾಕು ಇರಿದ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ಆಹಾರ ಶಾಖೆಯ ಶಿರಸ್ತೇದಾರ ಆಗಿರುವ ಅನಿಲ್‌ಕುಮಾರ್ ವ್ಯಾಸ್, ಚಾಕು ಇರಿತಕ್ಕೋಳಗಾದವರು. ಕರ್ತವ್ಯದಲ್ಲಿದ್ದ ವೇಳೆಯೇ ಅನೀಲ್ ಕುಮಾರಗೆ ಚಾಕು ಇರಿದು ವ್ಯಕ್ತಿ ಪರಾರಿಯಾಗಿದ್ದಾನೆ. ಕೂಡಲೇ ಗಾಯಾಳು ಅನೀಲ್ ಕುಮಾರ್ ಅವರನ್ನು ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ವ್ಯಕ್ತಿ ಅಧಿಕಾರಿಗೆ ಚಾಕುವಿನಿಂದ ಇರಿದು ಬೈಕ್‌ನಲ್ಲಿ ಪರಾರಿಯಾಗಿದ್ದಾನೆ. ಚಾಕುದಿಂದ ಅಧಿಕಾರಿ ತೋಳಿಗೆ ಗಾಯವಾಗಿದೆ. ಇರಿದ ಪರಿಣಾಮ ಅಧಿಕಾರಿ ರಕ್ತದ ಮಡುವಿನಲ್ಲಿ ತಪ್ಪಿಸಿಕೊಳ್ಳಲು ಓಡಾಡಿದ್ದು, ತಹಸೀಲ್ದಾರ್ ಕಚೇರಿಯಲ್ಲಿ ಸಿಕ್ಕ ಸಿಕ್ಕ ಕಡೆ ರಕ್ತ ಚಲ್ಲಾಡಿದೆ. ಘಟನೆಯಿಂದ ಭಯಗೊಂಡ ಅಧಿಕಾರಿಗಳು ಹಾಗೂ ಸಿಬ್ಬಂದಿ ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ.
ಆರೋಪಿ ಎಂಟ್ರಿ ಹಾಗೂ ಚಾಕುವಿನಿಂದ ಇರಿದ ಬಳಿಕ ಪರಾರಿಯಾಗುವ ದೃಶ್ಯಾವಳಿಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ. ಅಧಿಕಾರಿಯನ್ನು ಚಿಕಿತ್ಸೆಗಾಗಿ ಬ್ರೀಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವಿಷಯ ತಿಳಿದು ಸ್ಥಳಕ್ಕೆ ಮಾರ್ಕೆಟ್ ಪೊಲೀಸರು ದೌಡಾಯಿಸಿ ಪರಿಶೀಲನೆ ಮಾಡುತ್ತಿದ್ದಾರೆ.
ಈ ಕುರಿತು ಬೀದರ್‌ನ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಚಾಕು ಇರಿದ ಪರಾರಿಯಾದ ವ್ಯಕ್ತಿ ಅಮನ್ ಜುಬೇರ್ ಎಂದು ಗುರುತಿಸಲಾಗಿದ್ದು, ಪೊಲೀಸರು ಭೇಟಿ ನೀಡಿ ತನಿಖೆ ಶುರು ಮಾಡಿದ್ದಾರೆ.