

ಅಧಿಕಾರಿಗಳ ಕಾರುಬಾರು - ಇ ಖಾತೆಗೆ ಅಲೆದಾಟ ಜನರ ಹಿಡಿಶಾಪ
ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಪ್ರಕಟವಾಗದ ಮೀಸಲಾತಿ
ಚೇತನ್ ಚಕ್ಕೆರೆ ಬಿಡದಿ
ಪುರಸಭೆ ಹೆಸರಿಗಷ್ಟೇ ಆಗಿದೆ. ಕೆಲಸ ಕಾರ್ಯಗಳು ಆಗದೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ. ಅಧ್ಯಕ್ಷ& ಉಪಾಧ್ಯಕ್ಷರ ಮೀಸಲಾತಿ ಪ್ರಕಟವಾಗದ ಹಿನ್ನೆಲೆಯಲ್ಲಿ ಇಲ್ಲಿನ ಅಧಿಕಾರಿಗಳಿಗೆ ಹೇಳುವವರು ಕೇಳುವವರು ಇಲ್ಲದಂತಾಗಿ ಪುರಸಭೆ ಆಡಳಿತ ಜಡ್ಡುಗಟ್ಟಿದೆ.
ಸಿಲಿಕಾನ್ ಸಿಟಿಗೆ ಹತ್ತಿರವಿದ್ದರೂ ಅಭಿವೃದ್ಧಿ ಮಾತ್ರವಲ್ಲದೆ ಇತರ ಕೆಲಸ ಕಾರ್ಯಗಳಲ್ಲಿ ಹಿಂದೆ ಉಳಿದಿದೆ. ಮುಖ್ಯವಾಗಿ ಖಾತೆ ವಿಚಾರದಲ್ಲಿ ಜನ ಅಲೆದಾಡುವಂತಾಗಿದೆ. ಶಾಸಕರು ಸಹ ಪುರಸಭೆಗೆ ಚುರುಕು ಮುಟ್ಟಿಸುವ ಕೆಲಸ ಮಾಡುತ್ತಿಲ್ಲ ಎನ್ನುವ ಆರೋಪ ಸಾರ್ವಜನಿಕವಾಗಿ ಕೇಳಿ ಬರುತ್ತಿದೆ.
ಪುರಸಭೆ ವ್ಯಾಪ್ತಿಯಲ್ಲಿನ ಜನ ಪ್ರತಿನಿತ್ಯ ಖಾತೆ ಮಾಡಿಸಿಕೊಳ್ಳಲು ಅಲೆದಾಡುತ್ತಿದ್ದಾರೆ. ನಾಳೆ ಬನ್ನಿ, ನಾಡಿದ್ದು ಬನ್ನಿ ಎಂದು ಪುರಸಭೆ ಸಿಬ್ಬಂದಿ ಅಲೆದಾಡಿಸುತ್ತಿದ್ದಾರೆ. ಚಪ್ಪಲಿ, ಸಮಯ ಸವೆದಿದ್ದು ಬಿಟ್ಟರೆ ಇ&ಖಾತೆ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.
ಪುರಸಭೆಗೆ ಚುನಾವಣೆ ನಡೆದು ಎರಡು ವರ್ಷಗಳು ಮುಗಿಯುತ್ತ ಬಂದಿದೆ. ಇದುವರೆಗೂ ಅಧ್ಯಕ್ಷ & ಉಪಾಧ್ಯಕ್ಷರ ಸ್ಥಾನಕ್ಕೆ ಮೀಸಲಾತಿ ಪ್ರಕಟಗೊಂಡಿಲ್ಲ. ಹೀಗಾಗಿ ಚುನಾಯಿತ ಸದಸ್ಯರಿಗೆ ಅಧಿಕಾರ ಸಿಕ್ಕಿಲ್ಲ. ತಮ್ಮ ವಾರ್ಡ್ನಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಗೆದ್ದ ಸದಸ್ಯರಿಗೆ ಆಗುತ್ತಿಲ್ಲ. ಅಧಿಕಾರಿಗಳನ್ನು ಪ್ರಶ್ನಿಸುವ ಸ್ಥಿತಿ ಸದಸ್ಯರಿಗಿಲ್ಲದಂತಾಗಿದೆ. ಪುರಸಭೆಯಲ್ಲಿ ಆಡಳಿತ ಮಂಡಳಿ ಇರದ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ಲಗಾಮಿಲ್ಲದಂತಾಗಿದೆ. ರಾಮನಗರ ಉಪ ವಿಭಾಗಾಧಿಕಾರಿಯನ್ನು ಇಲ್ಲಿನ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ಆದರೆ, ಇವರು ಕೂಡ ಅಧಿಕಾರಿಗಳ ಸಭೆ ನಡೆಸಿ ಪುರಸಭೆ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಕೆಲಸ ಮಾಡುತ್ತಿಲ್ಲ.
ಪುರಸಭೆಯಲ್ಲಿ ಹಲವು ಅಕ್ರಮಗಳು ಸಹ ನಡೆಯುತ್ತಿವೆ ಎಂಬ ಆರೋಪ ಕೇಳಿ ಬರುತ್ತಿವೆ. ಹಣ ನೀಡಿದರೆ ಖಾತೆಗಳು ಸಲೀಸಾಗಿ ಆಗುತ್ತವೆ. ಹಣ ಕೊಡದಿದ್ದರೆ ತಿಂಗಳುಗಟ್ಟಲೇ ಅಲೆದಾಡಿಸುತ್ತಾರೆ ಎಂಬ ಆರೋಪಗಳು ದಟ್ಟವಾಗಿವೆ. ಗ್ರಾಮ ಪಂಚಾಯತಿಯಿಂದ ಪುರಸಭೆಯಾಗಿ ಮೇಲ್ದರ್ಜೆಗೆ ಏರಿದ ಸಮಯದಲ್ಲಿ ಖಾತೆಗಳನ್ನು ಮಾಡಿಸಿಕೊಂಡಿರುವವರು ಇಂದು ಇ&ಖಾತೆ ಪಡೆಯಲು ಅರ್ಜಿ ಹಾಕಿದರೆ ಇಲ್ಲಸಲ್ಲದ ದಾಖಲೆಗಳನ್ನು ಪುರಸಭೆ ಸಿಬ್ಬಂದಿ ಕೇಳುತ್ತಾರೆ. ಮಧ್ಯವರ್ತಿಗಳಿಗೆ ಹಣ ನೀಡಿದರೆ ಈ ಹಿಂದೆ ಇದ್ದ ಪೌರಾಯುಕ್ತರ ಸಹಿ ನಕಲು ಮಾಡಿ ಈ ಹಿಂದಿನ ವರ್ಷದಲ್ಲಿ ಖಾತೆ ಆಗಿರುವಂತೆ ದಾಖಲೆಗಳನ್ನು ಸೃಷ್ಟಿ ಮಾಡಿ ಸಬ್ರಿಜಿಸ್ಟ್ರಾರ್ ಕಚೇರಿಗೆ ನೀಡಿ ನಿವೇಶನಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪಗಳು ವ್ಯಾಪಕವಾಗಿವೆ.
ಕ್ಷೇತ್ರದ ಶಾಸಕ ಎಚ್.ಸಿ. ಬಾಲಕೃಷ್ಣ ಅವರು ಜಿಡ್ಡುಗಟ್ಟಿರುವ ಪುರಸಭೆ ಆಡಳಿತಕ್ಕೆ ಚುರುಕು ಮುಟ್ಟಿಸಬೇಕೆಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಮಾಜಿಯಾಗಿದ್ದಾಗ ಇದೇ ಪುರಸಭೆ ಆಡಳಿತ ವಿರುದ್ದ ರಸ್ತೆಗೆ ಇಳಿದು ಪ್ರತಿಭಟನೆ ನಡೆಸಿದ್ದೀರಿ. ಇದೀಗ ನೀವೇ ಶಾಸಕರಾಗಿದ್ದೀರಿ, ಪುರಸಭೆ ಆಡಳಿತಕ್ಕೆ ಬಿಸಿ ಮುಟ್ಟಿಸುತ್ತಿಲ್ಲವೇಕೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಪುರಸಭೆ ಆಡಳಿತ ಯಂತ್ರ ಸರಿಯಾಗಿ ನಡೆಯುತ್ತಿದೆ. ಎಲ್ಲ ವಾರ್ಡ್ಗಳಲ್ಲಿನ ಸಮಸ್ಯೆಗಳನ್ನು ನಿವಾರಣೆ ಮಾಡಲಾಗುತ್ತಿದೆ. ದಾಖಲೆಗಳು ಸರಿಯಾಗಿದ್ದ ನಿವೇಶನಗಳಿಗೆ ಇ& ಖಾತೆ ಮಾಡಿಕೊಡಲಾಗುತ್ತಿದೆ. ಕಸದ ಸಮಸ್ಯೆಗೆ ಮುಂದಿನ ದಿನಗಳಲ್ಲಿ ಸೂಕ್ತ ಜಾಗ ಗುರುತಿಸಿ ವಿಲೇವಾರಿ ಮಾಡುವ ಕೆಲಸ ಮಾಡಲಾಗುವುದು.
ಕೆ.ಜಿ.ರಮೇಶ್, ಪುರಸಭೆ ಮುಖ್ಯಾಧಿಕಾರಿ
ಪುರಸಭೆಯಲ್ಲಿನ ಆಡಳಿತ ಸಂಪೂರ್ಣ ಕುಸಿದಿದೆ. ಚುನಾವಣೆ ನಡೆದು 2 ವರ್ಷ ಕಳೆದರೂ ಮೀಸಲಾತಿ ಪ್ರಕಟ ಮಾಡಿಲ್ಲ. ಖಾತೆ ವಿಚಾರದಲ್ಲಿ ಜನರನ್ನು ಅಲೆದಾಡಿಸಲಾಗುತ್ತಿದೆ. ಬಿಎಂಐಸಿ ಹಾಗೂ ಬಿಎಂಆರ್ಡಿಯಿಂದ ಒಪ್ಪಿಗೆ ಪಡೆದಿರುವ ದಾಖಲೆಗಳನ್ನು ತನ್ನಿ ಇಲ್ಲವಾದರೆ ಖಾತೆ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ. ಈ ಹಿಂದೆ ಇದ್ಯಾವುದೂ ಇಲ್ಲದೆ ಖಾತೆಗಳನ್ನು ಮಾಡಿಕೊಡಲಾಗಿದೆ. ಈಗ ಕೇಳಿದರೆ ಎಲ್ಲಿಂದ ತರಲು ಸಾಧ್ಯ. ಕೆಲವರು ಬೆಂಗಳೂರಿಗೆ ಅಲೆದಾಡುವ ಸ್ಥಿತಿಯಲ್ಲಿಲ್ಲ. ಹಾಗಾಗಿ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಇಲ್ಲಿನ ಪುರಸಭೆಯಲ್ಲಿ ನಿಯೋಜಿಸಿ ಸಮಸ್ಯೆ ಬಗೆಹರಿಸಲಿ.
ಮುತ್ತಣ್ಣ, ಸಾಮಾಜಿಕ ಕಾರ್ಯಕರ್ತ, ಬಿಡದಿ