

ಪಾಂಡವಪುರ: ತಾಲೂಕಿನ ನಾರಾಯಣಪುರದಿಂದ ಕಾಮನಾಯಕನಹಳ್ಳಿ ಮಾರ್ಗವಾಗಿ ಸಣಬ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ಕಾವೇರಿಪುರ, ಅರಳಕುಪ್ಪೆ ಮತ್ತು ಕನಗನಮರಡಿ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗಳಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಬುಧವಾರ ಭೂಮಿಪೂಜೆ ನೆರವೇರಿಸಿದರು.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ನಾರಾಯಣಪುರ ಗ್ರಾಮದಿಂದ ಸಣಬ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಳೆದ ಹಲವು ವರ್ಷಗಳಿಂದ ಅಭಿವೃದ್ಧಿ ಕಾಣದೆ ಸಂಚಾರಕ್ಕೆ ದುಸ್ತರವಾಗಿತ್ತು. ಇದೀಗ ಲೋಕೋಪಯೋಗಿ ಇಲಾಖೆಯ 15 ಕೋಟಿ ರೂ.ಅನುದಾನದಲ್ಲಿ 10 ಮೀಟರ್ ವಿಸ್ತೀರ್ಣವಾದ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ರಸ್ತೆಯ ಇಕ್ಕೆಲಗಳು ಒತ್ತುವರಿಯಾಗಿದ್ದು, ಕೇವಲ 4 ಮೀಟರ್ ರಸ್ತೆ ಇದೆ. ಗ್ರಾಮಸ್ಥರು ಮತ್ತು ರೈತರು ಒತ್ತುವರಿ ತೆರವುಗೊಳಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಹಕರಿಸಬೇಕು. ಅಧಿಕಾರಿಗಳು ರಸ್ತೆ ಸರ್ವೇ ಮಾಡಿದ ಬಳಿಕ ಡಾಂಬರೀಕರಣ ಕಾರ್ಯ ಪ್ರಾರಂಭವಾಗಲಿದೆ. ಬಹಳ ವರ್ಷಗಳ ನಂತರ ರಸ್ತೆ ಅಭಿವೃದ್ಧಿ ನಡೆಯುತ್ತಿದೆ. ಕೆಲಸ ನಡೆಯುವಾಗ ಎಲ್ಲರೂ ಜತೆಗೂಡಿ ಗ್ರಾಮದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ತಾಲೂಕಿನ ಕಾವೇರಿಪುರದಲ್ಲಿ 28.50 ಲಕ್ಷ ರೂ, ಅರಳಕುಪ್ಪೆಯಲ್ಲಿ 18.21ಲಕ್ಷ ರೂ.ಹಾಗೂ ಕನಗನಮರಡಿಯ ಪರಿಶಿಷ್ಟ ಜಾತಿ ಕಾಲನಿಯಲ್ಲಿ ಕಾಂಕ್ರೀಟ್ ರಸ್ತೆ ಮತ್ತು ಕಾಂಕ್ರೀಟ್ ಚರಂಡಿ ಕಾಮಗಾರಿಗೆ ಸರ್ಕಾರ 1.4 ಕೋಟಿ ರೂ.ಅನುದಾನ ಮಂಜೂರು ಮಾಡಿದ್ದು, ಗುತ್ತಿಗೆದಾರರು ಗುಣಮಟ್ಟ ಕಾಯ್ದುಕೊಂಡು ಕಾಮಗಾರಿಯನ್ನು ತ್ವರಿತವಾಗಿ ಪೂರೈಸಬೇಕು ಎಂದು ಸಲಹೆ ನೀಡಿದರು.
ಚುನಾವಣೆ ಸಂದರ್ಭ ಬಂದಾಗ ರಾಜಕಾರಣ ಮಾಡುವುದು ಸಾಮಾನ್ಯ. ಆದರೆ ಅಭಿವೃದ್ಧಿ ವಿಚಾರದಲ್ಲಿ ಗ್ರಾಮಸ್ಥರು ಪಕ್ಷಾತೀತವಾಗಿ ಸಹಕಾರ ನೀಡಿ ಗ್ರಾಮಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು. ಕಾಮನಾಯಕನಹಳ್ಳಿ ಗ್ರಾಮಸ್ಥರು ಶಾಲೆಯ ಕೊಠಡಿ ಮತ್ತು ಕಾಂಪೌಂಡ್ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ನಿವೇಶನ ವಿತರಣೆಗೆ ಮನವಿ ಮಾಡಿದ್ದಾರೆ. ಎಲ್ಲ ವಿಚಾರಗಳ ಬಗ್ಗೆ ಗಮನಹರಿಸಿ ಹಂತ ಹಂತವಾಗಿ ಬಗೆಹರಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ತ್ಯಾಗರಾಜು, ಗುತ್ತಿಗೆದಾರ ರವಿಬೋಜೇಗೌಡ, ತಾಪಂ ಮಾಜಿ ಸದಸ್ಯ ಪುಟ್ಟೇಗೌಡ, ನಿವೃತ್ತ ಪೊಲೀಸ್ ಅಧಿಕಾರಿ ಸ್ವಾಮೀಗೌಡ, ಕಿಸಾನ್ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಸಿ.ಆರ್.ರಮೇಶ್ ಕಾಂಗ್ರೆಸ್ ಮುಖಂಡ ಕೆ.ಬಿ.ರಾಮು, ಕುರುಬರ ಸಂಘದ ಜಿಲ್ಲಾ ಉಪಾಧ್ಯಕ್ಷ ಬಿ.ಕೆ.ರೇವಣ್ಣ, ಬಿ.ಜೆ.ಸ್ವಾಮಿ ಇತರರಿದ್ದರು.