ಹವಗಿಯಲ್ಲಿ ಗುರುಕುಲಕ್ಕೆ ಭೂಮಿಪೂಜೆ ನಾಳೆ

manjunath maharaj
Published on

ಹಳಿಯಾಳ: ದೇಶದಲ್ಲಿ ಗುರುಕುಲ ಶಿಕ್ಷಣ ಮರೆಯಾದ ದಿನದಿಂದ ಪ್ರಸ್ತುತ ಪೀಳಿಗೆಯಲ್ಲಿ ವ್ಯಕ್ತಿತ್ವ ವಿಕಸನ, ಮುಖಂಡತ್ವ, ನೈತಿಕತೆ, ಆತ್ಮವಿಶ್ವಾಸ, ಉತ್ತಮ ಚಾರಿತ್ರ್ಯ ನಿರ್ವಣ, ಶಿಸ್ತು, ಗುರು ಹಿರಿಯರಿಗೆ ಗೌರವ, ಆಧ್ಯಾತ್ಮದ ಭಾವನೆಗಳ ಕಲ್ಪನೆಯೇ ಇಲ್ಲದಂತಾಗಿದೆ ಎಂದು ಬೆಂಗಳೂರು ಗೋಸಾಯಿ ಮಹಾಸಂಸ್ಥಾನದ ಮರಾಠಾ ಜಗದ್ಗುರು ವೇದಾಂತಾಚಾರ್ಯ ಶ್ರೀ ಮಂಜುನಾಥ ಭಾರತೀ ಸ್ವಾಮಿಜಿ ಆತಂಕ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಸ್ವಾಮೀಜಿಗಳು, ಸಮಾಜದ ಎಲ್ಲರ ಸಹಕಾರದೊಂದಿಗೆ ಹಳಿಯಾಳ ತಾಲೂಕಿನ ಹವಗಿಯಲ್ಲಿ ಗುರುಕುಲ ನಿರ್ವಣಕ್ಕೆ ಫೆ. 11ರಂದು ಭೂಮಿ ಪೂಜೆ ನಡೆಯಲಿದೆ ಎಂದರು.
ದೇಶದಲ್ಲಿ ಪ್ರಸ್ತುತ ಶಿಕ್ಷಣದ ಗುಣಮಟ್ಟ ಹೆಚ್ಚಿದೆ. ಪ್ರಾಚೀನ ಕಾಲದಿಂದಲೂ ಭಾರತವು ಶಿಕ್ಷಣ ಕ್ಷೇತ್ರದಲ್ಲಿ ಪ್ರಸಿದ್ಧವಾಗಿತ್ತು. ನಳಂದಾ ತಕ್ಷಶಿಲಾ ಮಹಾವಿದ್ಯಾಲಯ, ಗುರುಕುಲಗಳಲ್ಲಿ ಗುಣಮಟ್ಟದ ಸಂಸ್ಕಾರಯುತ ಶಿಕ್ಷಣ ಬೋಧಿಸಲಾಗುತ್ತಿತ್ತು. ಆದರೆ, ಕಾಲ ಕ್ರಮೇಣ ಆಧುನಿಕತೆ, ಸಂಸ್ಕಾರ, ಸಂಪ್ರದಾಯಗಳಿಗೆ ತಲೆಬಾಗಿ ಉನ್ನತ ವ್ಯಾಸಂಗ ಮಾಡಿ ಉತ್ತಮ ಹುದ್ದೆ, ಸ್ಥಾನಮಾನ ಪಡೆದರೂ ಯುವಪೀಳಿಗೆ ಬದುಕು, ಕುಟುಂಬವನ್ನು ಯಶಸ್ವಿಯಾಗಿ ಕಟ್ಟುವಲ್ಲಿ ಅಸಮರ್ಥರಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಹೀಗಾಗಿ ಶಾಲಾ ಶಿಕ್ಷಣದ ಜತೆಗೆ ಸಂಸ್ಕಾರ, ಸಂಸ್ಕೃತ, ಅಧ್ಯಾತ್ಮ, ಭಗವದ್ಗೀತೆ, ವಾರಕರಿ ಪದ್ಧತಿಯ ಕಲ್ಪನೆಯೊಂದಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಿ ವ್ಯಸನ ಮುಕ್ತ ಕುಟುಂಬ ಹಾಗೂ ಸಮಾಜ ನಿರ್ವಿುಸಲು ಗುರುಕುಲ ಮಾದರಿ ಶಿಕ್ಷಣದ ಅವಶ್ಯಕತೆಯಿದೆ. ಅದಕ್ಕಾಗಿ ಹವಗಿಯಲ್ಲಿ 3 ಎಕರೆ ಜಮೀನಿನಲ್ಲಿ ಶ್ರೀ ಹರಿ ಛತ್ರಪತಿ ಶಿವಾಜಿ ಮಹಾರಾಜ ಗುರುಕುಲ ನಿರ್ವಣದ ಸಂಕಲ್ಪ ಮಾಡಿ ಕಾರ್ಯಪ್ರವೃತ್ತರಾಗಿರುವುದಾಗಿ ಹೇಳಿದರು.
ಫೆ. 11ರಂದು ಬೆಳಗ್ಗೆ 10ಕ್ಕೆ ಭೂಮಿ ಪೂಜೆ ಸಮಾರಂಭ ಜತೆಗೆ ನಮ್ಮ ಪಟ್ಟಾಭಿಷೇಕದ 2ನೇ ವಾರ್ಷಿಕೋತ್ಸವ ಸಮಾರಂಭವನ್ನು ಶಿಷ್ಯವೃಂದದವರು ಹಮ್ಮಿಕೊಂಡಿದ್ದಾರೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net