

ಹನೂರು:ಕಾಮಗಾರಿಯಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳುವುದರ ಮೂಲಕ ಶೀಘ್ರ ಪೂರ್ಣಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಶಾಸಕ ಎಂ.ಆರ್ ಮಂಜುನಾಥ್ ಸೂಚಿಸಿದರು.
ತಾಲೂಕಿನ ಗಡಿ ಗೋಪಿನಾಥಂನಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ ಒಂದು ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿರುವ ರಸ್ತೆ ಡಾಂಬರೀಕರಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಗೋಪಿನಾಥಂ ತಾಲೂಕಿನ ಗಡಿ ಗ್ರಾಮವಾಗಿದೆ. ಆದರೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹದಗೆಟ್ಟಿತ್ತು. ಇದರಿಂದ ಸಾರ್ವಜನಿಕರ ಸಂಚಾರಕ್ಕೆ ತೊಡಕಾಗಿ ಪರಿಣಮಿಸಿತ್ತು. ರಸ್ತೆ ಅಭಿವೃದ್ಧಿ ಪಡಿಸುವಂತೆ ಈ ಭಾಗದ ಜನರು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳಿಂದ ಕ್ರಿಯಾಯೋಜನೆ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸದ್ಯಕ್ಕೆ ಬಿಡುಗಡೆಯಾದ 1 ಕೋಟಿ ರೂ. ಅನುದಾನದಲ್ಲಿ 4.2 ಕಿ.ಮೀ.ವರೆಗೆ ರಸ್ತೆ ಡಾಂಬರೀಕರಣ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸರ್ಕಾರದಿಂದ ಅನುದಾನ ತಂದು ಈ ಭಾಗದ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಇದಕ್ಕೆ ತಮ್ಮೆಲ್ಲರ ಸಹಕಾರ ಅಗತ್ಯ ಎಂದು ತಿಳಿಸಿದರು.
ಕಾಮಗಾರಿ ಪರಿಶೀಲನೆ: ಇದಕ್ಕೂ ಮುನ್ನ ಶಾಸಕರು ಅಂಬಿಕಾಪುರದಿಂದ ರಾಮಾಪುರದವರೆಗೆ 10 ಕೋಟಿ ರೂ. ವೆಚ್ಚದಲ್ಲಿ ಪ್ರಗತಿಯಲ್ಲಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಈ ಮಾರ್ಗ ಹಲವು ವರ್ಷಗಳಿಂದ ಸಂಪೂರ್ಣ ಹಾಳಾಗಿದ್ದು, ಸಾರ್ವಜನಿಕರು ಸಂಚರಿಸಲು ತುಂಬ ತೊಂದರೆ ಅನುಭವಿಸುತ್ತಿದ್ದರು. ಈ ಭಾಗದ ಜನರಿಗೆ ರಸ್ತೆಯದ್ದೇ ಒಂದು ದೊಡ್ಡ ಸಮಸ್ಯೆಯಾಗಿತ್ತು. ರಸ್ತೆ ಅಭಿವೃದ್ಧಿಯಾಗದ ಹಿನ್ನೆಲೆಯಲಿ ರೋಸಿ ಹೋಗಿದ್ದರು. ಇದೀಗ ಈ ರಸ್ತೆಗೆ ಮುಕ್ತಿ ದೊರಕಿದಂತಾಗಿದೆ. ಆದ್ದರಿಂದ ಕಾಮಗಾರಿಯನ್ನು ಶೀಘ್ರಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪಿಡಬ್ಲ್ಯುಡಿ ಎಇಇ ಚಿನ್ನಣ್ಣ, ಗ್ರಾಪಂ ಉಪಾಧ್ಯಕ್ಷ ನಾಗರಾಜರೆಡ್ಡಿ, ಸದಸ್ಯರಾದ ಸೋಮನಾಯಕ, ತಾಪಂ ಮಾಜಿ ಸದಸ್ಯ ರಾಜ, ಗ್ರಾಪಂ ಮಾಜಿ ಅಧ್ಯಕ್ಷ ಗೋವಿಂದರಾಜು, ಪಿಡಿಒ ರಾಜಕುಮಾರ್, ಮುಖಂಡರಾದ ಜಯರಾಮರೆಡ್ಡಿ, ಪೆರುಮಾಳ್, ಡಿ.ಕೆ ರಾಜು, ವಿಜಯಕುಮಾರ್ ಹಾಗೂ ಇನ್ನಿತರರು ಇದ್ದರು.