ಕಾಂಕ್ರೀಟ್ ಇಂಟರ್ ಸ್ಲಾೃಬ್ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ

IMG_20240708_130021
Published on

ಅರಸೀಕೆರೆ ಗ್ರಾಮಾಂತರ: ತಾಲೂಕಿನ ಸುಕ್ಷೇತ್ರ ಯಾದಪುರ ಶ್ರೀ ಜೇನುಕಲ್ ಸಿದ್ದೇಶ್ವರಸ್ವಾಮಿ ಕ್ಷೇತ್ರದ ಕಡೆ ಹಾಸನ ರಸ್ತೆಯಿಂದ ಸಾಗುವ ನಗರ ಪರಿಮಿತಿಯ ಎರಡು ಬದಿಗೆ ಕಾಂಕ್ರೀಟ್ ಇಂಟರ್ ಸ್ಲಾೃಬ್ ನಿರ್ಮಾಣ ಕಾಮಗಾರಿಗೆ ಸೋಮವಾರ ಶಾಸಕ ಕೆ.ಎಂ.ಶಿವಲಿಂಗೇಗೌಡ ಭೂಮಿಪೂಜೆ ನೆರವೇರಿಸಿದರು.


ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ರಾಜ್ಯದಾದ್ಯಂತ ಭಕ್ತ ವೃಂದವನ್ನು ಹೊಂದಿರುವ ಜೇನುಕಲ್ ಸಿದ್ದೇಶ್ವರಸ್ವಾಮಿ ಕ್ಷೇತ್ರದಲ್ಲಿ ಪ್ರತಿ ಹುಣ್ಣಿಮೆಯಂದು ನಡೆಯುವ ಮಹೋತ್ಸವದಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಾರಲ್ಲದೆ, ಪ್ರತಿದಿನ ಶ್ರೀಕ್ಷೇತ್ರಕ್ಕೆ ಸಾವಿರಾರು ಭಕ್ತರು ಬಂದು ಹೋಗುತ್ತಾರೆ. ಹಾಗಾಗಿ ನಗರದ ಮೂಲಕ ಸಾಗುವ ಭಕ್ತರಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಈಗಾಗಲೇ ರಸ್ತೆ ವಿಸ್ತರಣೆ ಮಾಡಲಾಗಿದೆ. ರಸ್ತೆಯ ಎರಡು ಬದಿ ಇರುವ ಖಾಸಗಿ ಒಡೆತನದ ಜಮೀನುಗಳ ಮಾಲೀಕರು ಜಮೀನು ಬಿಟ್ಟುಕೊಟ್ಟರೆ ಮತ್ತಷ್ಟು ರಸ್ತೆ ವಿಸ್ತರಿಸಿ ರಸ್ತೆ ಮಧ್ಯೆ ಡಿವೈಡರ್ ನಿರ್ಮಿಸಲು ಸಿದ್ಧವಾಗಿರುವುದಾಗಿ ತಿಳಿಸಿದರು


ಹಾಸನ ರಸ್ತೆ ಸಿದ್ದೇಶ್ವರಸ್ವಾಮಿ ಆರ್ಚ್‌ನಿಂದ ಜೇನುಕಲ್ ಸ್ಟೇಡಿಯಂ ವರೆಗೆ ನಿರ್ಮಾಣ ಮಾಡುತ್ತಿರುವ ಕಾಂಕ್ರೀಟ್ ಇಂಟರ್ ಸ್ಲಾೃಬ್ ಅಳವಡಿಕೆ ಕಾಮಗಾರಿ ಗುತ್ತಿಗೆ ಪಡೆದಿರುವ ಗುತ್ತಿಗೆದಾರರಿಂದ ಗುಣಮಟ್ಟ ಕೆಲಸ ಪಡೆದುಕೊಳ್ಳುವಂತೆ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ಗೆ ಸೂಚನೆ ನೀಡಿದರು.


ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಾಡಾಳು ಸ್ವಾಮಿ, ನಗರಸಭೆ ಸದಸ್ಯರಾದ ಮನೋಹರ್ ಮೇಸ್ತ್ರಿ, ಹರೀಶ್, ಕಾಂಗ್ರೆಸ್ ಮುಖಂಡರಾದ ಕೃಷ್ಣ, ಗಿರೀಶ್, ವಾಸು, ಲಯನ್ ಸಂಸ್ಥೆಯ ಮಾಜಿ ಅಧ್ಯಕ್ಷ ಎಂ.ವೈ.ಖಾನ್, ಲೋಕೋಪಯೋಗಿ ಇಲಾಖೆಯ ಎಇಇ ಮುನಿರಾಜು ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net