ಹೆಚ್ಚುವರಿ ಗ್ರಂಥಾಲಯ ಕಟ್ಟಡ ಕಾಮಗಾರಿಗೆ ಭೂಮಿಪೂಜೆ

7ark-2
ಅರಕಲಗೂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹೆಚ್ಚುವರಿ ಗ್ರಂಥಾಲಯ ಕಟ್ಟಡ ಕಾಮಗಾರಿಗೆ ಶಾಸಕ ಎ.ಮಂಜು ಭೂಮಿಪೂಜೆ ನೆರವೇರಿಸಿದರು. ಬಾಲಾಜಿ, ಚೌಡೇಗೌಡ, ಬಸವರಾಜು, ನಿರಂಜನ್ ಇತರರಿದ್ದರು.
Published on

ಅರಕಲಗೂಡು: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 1 ಕೋಟಿ ರೂ. ವೆಚ್ಚದ ಹೆಚ್ಚುವರಿ ಗ್ರಂಥಾಲಯ ಕಟ್ಟಡ ಕಾಮಗಾರಿಗೆ ಶಾಸಕ ಎ. ಮಂಜು ಶುಕ್ರವಾರ ಭೂಮಿಪೂಜೆ ನೆರವೇರಿಸಿದರು.

ಈ ಕಾಲೇಜಿನಲ್ಲಿ ಹೆಚ್ಚುವರಿ ಗ್ರಂಥಾಲಯ ಕಟ್ಟಡ ಹಾಗೂ ಕೊಣನೂರು ಬಿ.ಎಂ.ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹೆಚ್ಚುವರಿ ಕೊಠಡಿಯನ್ನು ತಲಾ 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು. ಕಟ್ಟಡ ಕಟ್ಟುವುದು ಮುಖ್ಯವಲ್ಲ. ಸದುಪಯೋಗ ಪಡಿಸಿಕೊಳ್ಳುವುದು ಬಹಳ ಮುಖ್ಯ. ತಾಲೂಕಿನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿದ್ದರೂ ವಿದ್ಯಾರ್ಥಿಗಳು ಬೇರೆ ತಾಲೂಕುಗಳಿಗೆ ವ್ಯಾಸಂಗ ಮಾಡಲು ತೆರಳುತ್ತಿರುವುದು ಬೇಸರ ತರಿಸಿದೆ. ಇಲ್ಲಿಯೂ ಉತ್ತಮ ಶಿಕ್ಷಕರು, ಕೊಠಡಿ, ಸೌಲಭ್ಯಗಳಿವೆ ಎಂದರು.

ನಾವು ವ್ಯಾಸಂಗ ಮಾಡುವಾಗ ಯಾವುದೇ ಸೌಕರ್ಯಗಳಿರಲಿಲ್ಲ. ಇಂದು ಹಾಸ್ಟೆಲ್ ವ್ಯವಸ್ಥೆ ಇದೆ. ಕೊಠಡಿಗಳಿವೆ, ಆದರೆ ಮಕ್ಕಳಿಲ್ಲ. ಆ ಪರಿಸ್ಥಿತಿಯಾಗಿದೆ. ನನ್ನ ಅವಧಿಯಲ್ಲಿ ಆರಂಭಿಸಿದ ವಿಜ್ಞಾನ ಕಾಲೇಜಿಗೆ ವಿದ್ಯಾರ್ಥಿಗಳು ಬರುತ್ತಿಲ್ಲ. ವ್ಯವಸ್ಥೆಯನ್ನು ಉತ್ತಮವಾಗಿ ಉಪಯೋಗಿಸಿಕೊಂಡರೆ ಸರ್ಕಾರ ಸೌಕರ್ಯ, ಸೌಲಭ್ಯ ನೀಡುತ್ತದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಆರ್ಥಿಕವಾಗಿ ಸಬಲರಾಗುವ ವ್ಯವಸ್ಥೆ ಕೃಷಿ ಕ್ಷೇತ್ರಕ್ಕಿದೆಯೇ ಹೊರತು ಕೈಗಾರಿಕೆಗಳಿಗಿಲ್ಲ ಎಂದು ಹೇಳಿದರು.

ಕೊಣನೂರು ಬಿ.ಎಂ.ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಬಸವರಾಜು, ಪ್ರಾಂಶುಪಾಲೆ ತಾರಾದೇವಿ, ಸಿಡಿಸಿ ಸಮಿತಿ ಉಪಾಧ್ಯಕ್ಷ ಬಾಲಾಜಿ, ಸದಸ್ಯರಾದ ನಿರಂಜನ್, ರವಿಕುಮಾರ್, ಉದಯ್, ಉಪೇಂದ್ರ, ಶಕೀಬ್, ಅ.ರಾ. ಸುಬ್ಬರಾವ್, ಚಿದಂಬರ, ನಿರ್ಮಲಾ, ಪಪಂ ಸದಸ್ಯ ಹೂವಣ್ಣ, ಗೀತಾ, ಕೊಣನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಿಡಿಸಿ ಉಪಾಧ್ಯಕ್ಷ ಚೌಡೇಗೌಡ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net