ಹೈನುಗಾರರಿಗೆ ಭೂಹಳ್ಳಿ ಸುಜಾತಾ ಮಾದರಿ

sujatha receiving best Dairy woman award
Published on

ಉಪಕಸುಬಾಗಿ ಆರಂಭಿಸಿದ್ದು ಮುಖ್ಯ ಕಸುಬಾಯಿತು

ಪ್ರತಿನಿತ್ಯ 190 ಲೀಟರ್ ಹಾಲು ಉತ್ಪಾದನೆ

ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ
ಹೈನುಗಾರಿಕೆ, ಹಲವು ರೈತ ಕುಟುಂಬಗಳಿಗೆ ವರವಾಗಿರುವ ಉಪಕಸುಬು. ಪ್ರಸ್ತುತ ಹೈನುಗಾರಿಕೆಯನ್ನೇ ನಂಬಿ ಜೀವನ ಸಾಗಿಸುತ್ತಿರುವ ಕುಟುಂಬಗಳು ನಮ್ಮ ಕಣ್ಣ ಮುಂದಿವೆ. ಕ್ಷೀರಕ್ಷೇತ್ರ ಮಹಿಳಾ ಸಬಲೀಕರಣಕ್ಕೂ ಕಾರಣವಾಗಿದೆ. ಅದಕ್ಕೆ ಉದಾಹರಣೆ ಚನ್ನಪಟ್ಟಣ ತಾಲೂಕಿನ ಭೂಹಳ್ಳಿಯ ಸುಜಾತಾ ವೆಂಕಟೇಶ್.


ಹೌದು...ಸುಜಾತಾ ಅವರು ಹೈನುಗಾರಿಕೆಯಲ್ಲಿ ತೊಡಗಿದ್ದು, ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚು ಹಾಲು ಉತ್ಪಾದನೆ ಮಾಡುವ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಹೈನುಗಾರಿಕೆಯಲ್ಲಿ ಆಧುನಿಕ ತಂತ್ರಜ್ಞಾನ ಹಾಗೂ ವೈಜ್ಞಾನಿಕ ಕ್ರಮಗಳನ್ನು ಅಳವಡಿಸಿಕೊಂಡು ಯಶಸ್ವಿಯಾಗಿದ್ದಾರೆ. ಪತಿ ವೆಂಕಟೇಶ್ ಹಾಗೂ ಪುತ್ರ ಹೇಮಂತ್ ಇವರಿಗೆ ಸಾಥ್ ನೀಡಿದ್ದಾರೆ.

ವೀಳ್ಯದೆಲೆಯ ತವರೂರು ಎಂಬ ಹೆಸರು ಪಡೆದಿರುವ ತಾಲೂಕಿನ ಭೂಹಳ್ಳಿಯ ಸುಜಾತಾ ಅವರು 7 ಎಕರೆ ಜಮೀನಿನಲ್ಲಿ ತೆಂಗು, ವೀಳ್ಯದೆಲೆ ತೋಟ, ಜೋಳ ಸೇರಿ ವಿವಿಧ ಬೆಳೆಗಳನ್ನು ಬೆಳೆಯುತ್ತಾರೆ. ಆದರೆ, ಇವರಿಗೆ ಆಸರೆಯಾಗಿದ್ದು ಮಾತ್ರ ಹೈನುಗಾರಿಕೆ. ಎರಡು ರಾಸುಗಳಿಂದ ಹೈನುಗಾರಿಕೆ ಆರಂಭಿಸಿದ ಇವರ ಬಳಿ ಪ್ರಸ್ತುತ 15ಕ್ಕೂ ಹೆಚ್ಚು ರಾಸುಗಳಿವೆ. ಪ್ರತಿನಿತ್ಯ 190 ಲೀಟರ್ ಹಾಲು ಉತ್ಪಾದನೆಯಾಗುತ್ತದೆ.

ಹಸು ಫಾರಂ


ಜಮೀನಿನಲ್ಲಿ ಹಸು ಫಾರಂ ನಿರ್ಮಿಸಿಕೊಂಡಿದ್ದು, ಸದ್ಯ ಎಚ್‌ಎಫ್, ಜೆರ್ಸಿ, ಹಾಲ್ ಬ್ಲಾಕ್ ತಳಿಯ ರಾಸುಗಳಿವೆ. ಜತೆಗೆ 4 ಪಡ್ಡೆ ಕರುಗಳಿವೆ. ಹತ್ತು ವರ್ಷದ ಹಿಂದೆ ಕೇವಲ ಕೃಷಿ ಜತೆಗೆ ಉಪಕಸುಬಾಗಿ ಹೈನುಗಾರಿಕೆ ಆರಂಭಿಸಿದರು. ನಂತರ ಇದರಲ್ಲೂ ಲಾಭ ಗಳಿಸಬಹುದು ಎಂದು ಅರಿತು ಸದ್ಯ ಹೈನುಗಾರಿಕೆಯನ್ನೇ ಪ್ರಮುಖ ಕಸುಬಾಗಿಸಿಕೊಂಡಿದ್ದಾರೆ. ಇವರ ಜಮೀನಿನಲ್ಲಿ ರಾಸುಗಳಿಗೆ ಬೇಕಾದ ಮೇವು ಹಾಗೂ ನೀರು ಲಭ್ಯವಿರುವ ಕಾರಣ ಅನುಕೂಲವಾಗಿದೆ.

ವೈಜ್ಞಾನಿಕತೆ ಅಳವಡಿಕೆ!

ಹೈನುಗಾರಿಕೆಯಲ್ಲಿ ವೈಜ್ಞಾನಿಕತೆ ಅಳವಡಿಸಿಕೊಂಡಿರುವುದು ಇವರ ಸಾಧನೆಗೆ ಕಾರಣ ಎನ್ನಬಹುದಾಗಿದೆ. ಸುಸಜ್ಜಿತ ಕೊಟ್ಟಿಗೆಯಲ್ಲಿ ರಾಸುಗಳಿಗೆ ರಬ್ಬರ್ ನೆಲಹಾಸು ಹಾಕಿದ್ದಾರೆ. ಮೇವು ಕತ್ತರಿಸುವ ಯಂತ್ರ, ಹಾಲು ಕರೆಯುವ ಯಂತ್ರ ಬಳಸುತ್ತಾರೆ. ಇದರಿಂದ ಇವರಿಗೆ ಶ್ರಮದ ಜತೆಗೆ ಸಮಯದ ಉಳಿತಾಯ ಆಗುತ್ತಿದೆ. ಇವರಿಗೆ ಪತಿ ಹಾಗೂ ಪುತ್ರ ಸಾಥ್ ನೀಡುತ್ತಿದ್ದು, ಮಾದರಿ ರೈತ ಮಹಿಳೆ ಎನಿಸಿಕೊಳ್ಳಲು ಕಾರಣವಾಗಿದೆ.

ಬೆಸ್ಟ್ ವುಮೆನ್ ಡೇರಿ ಫಾರ್ಮರ್!

ಸುಜಾತಾ ಅವರ ಹೈನುಗಾರಿಕೆಯ ಸಾಧನೆ ಗುರುತಿಸಿ ಇಂಡಿಯನ್ ಡೇರಿ ಅಸೋಸಿಯೇಷನ್ ವತಿಯಿಂದ 2023ರ ಬೆಸ್ಟ್ ವುಮೆನ್ ಡೇರಿ ಫಾರ್ಮರ್ ಅವಾರ್ಡ್ ನೀಡಲಾಗಿದೆ. ಗುಜರಾತ್‌ನ ಅಹಮದಬಾದ್‌ನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಹಾಲು ಉತ್ಪಾದನೆ ಮಾಡಿರುವ ಕಾರಣಕ್ಕೆ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ.


ಈ ಹಿಂದೆ ಇವರು ಪ್ರತಿನಿತ್ಯ 250ಕ್ಕೂ ಹೆಚ್ಚು ಲೀಟರ್ ಹಾಲು ಉತ್ಪಾದನೆ ಮಾಡುತ್ತಿದ್ದರು. ಸದ್ಯ ಬೆಳಗ್ಗೆ 100 ಹಾಗೂ ಸಂಜೆ 90 ಲೀಟರ್ ಹಾಲು ಉತ್ಪಾದನೆ ಮಾಡುತ್ತಿದ್ದಾರೆ. ಬಮುಲ್ ಒಕ್ಕೂಟದಿಂದಲೂ ಇವರಿಗೆ ಗೌರವ ಪುರಸ್ಕಾರ ದೊರಕಿದೆ. ಹೈನುಗಾರಿಕೆಯಿಂದ ಉತ್ತಮ ಬದುಕು ರೂಪಿಸಿಕೊಂಡಿರುವ ಸುಜಾತಾ ಇತರ ರೈತ ಮಹಿಳೆಯರಿಗೆ ಮಾದರಿಯಾಗಿದ್ದಾರೆ.

Hemanth Bamul Officer
ನಮ್ಮ ಶಿಬಿರ ವ್ಯಾಪ್ತಿಯ ಭೂಹಳ್ಳಿಯ ಸುಜಾತಾ ಅವರು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಹೈನುಗಾರಿಕೆಯಲ್ಲಿ ಯಶಸ್ವಿಯಾಗಿದ್ದಾರೆ. ಒಕ್ಕೂಟದಿಂದ ಸಬ್ಸಿಡಿಯಲ್ಲಿ ನೀಡುವ ರಬ್ಬರ್ ಮ್ಯಾಟ್, ಮೇವು ಕತ್ತರಿಸುವ, ಹಾಲು ಕರೆಯುವ ಯಂತ್ರದ ಸೌಲಭ್ಯ ನೀಡಿದ್ದೇವೆ. ಜತೆಗೆ ರಾಸು ವಿಮೆ ಒದಗಿಸಲಾಗಿದೆ.
ಡಾ. ಹೇಮಂತ್, ಬಮುಲ್ ಚನ್ನಪಟ್ಟಣ ಶಿಬಿರ ವ್ಯವಸ್ಥಾಪಕ
HC Jayamuttu Bamul Director
ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಹೈನುಗಾರಿಕೆ ಅತ್ಯುತ್ತಮ ಕ್ಷೇತ್ರವಾಗಿದೆ. ಇದಕ್ಕೆ ಭೂಹಳ್ಳಿಯ ಸುಜಾತಾ ಉದಾಹರಣೆ. ತಾಲೂಕಿನಲ್ಲಿ ಇದೇ ರೀತಿಹಲವರು ಹೈನುಗಾರಿಕೆಯನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ. ತಾಲೂಕು ಇಂದು ಹಾಲು ಉತ್ಪಾದನೆಯಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ. ಅದಕ್ಕೆ ಕಾರಣ ಉತ್ಪಾದಕರು. ಅವರ ಹಿತಕಾಯಲು ಒಕ್ಕೂಟ ಸದಾ ಸಿದ್ಧವಾಗಿದೆ.

ಎಚ್.ಸಿ. ಜಯಮುತ್ತು, ಬಮುಲ್ ನಿರ್ದೇಶಕ, ಚನ್ನಪಟ್ಟಣ

Sujatha Dairy running Woman

ಏಳು ಎಕರೆ ಜಮೀನಿದೆ. ಈ ಮೊದಲು ವ್ಯವಸಾಯವನ್ನೇ ನೆಚ್ಚಿಕೊಂಡಿದ್ದವು. ತದನಂತರ ನಮಗೆ ವರವಾಗಿದ್ದೇ ಹೈನುಗಾರಿಕೆ. ರಾಸು ಸಾಕಣೆಯಲ್ಲಿ ಶ್ರಮಕ್ಕೆ ತಕ್ಕ ಪ್ರತಿಫಲವಿದೆ. ಸದ್ಯ ಎಲ್ಲ ಖರ್ಚುಗಳನ್ನು ಕಳೆದು ತಿಂಗಳಿಗೆ 40ರಿಂದ 50 ಸಾವಿರ ರೂ. ಸಂಪಾದಿಸುತ್ತಿದ್ದೇವೆ. ಕುಟುಂಬದ ಎಲ್ಲರೂ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದೇವೆ. ಒಕ್ಕೂಟದಿಂದಲೂ ಸವಲತ್ತುಗಳನ್ನು ಪಡೆದುಕೊಂಡಿದ್ದೇವೆ. ಹೈನುಗಾರಿಕೆಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡರೆ, ಶ್ರಮ ಹಾಗೂ ಬಂಡವಾಳ ಕಡಿಮೆಯಾಗಿ ಲಾಭ ಹೆಚ್ಚಾಗಲಿದೆ.

ಸುಜಾತಾ ವೆಂಕಟೇಶ್, ಭೂಹಳ್ಳಿ, ರೈತ ಮಹಿಳೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net