ಮಾರುಕಟ್ಟೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ

ಮಾರುಕಟ್ಟೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ
Published on

ಬೇಲೂರು: ವಾರದ ಸಂತೆಯಲ್ಲಿ ಭಾಗವಹಿಸುವ ಎಲ್ಲ ವರ್ತಕರಿಗೂ ಮೂಲಸೌಕರ್ಯ ಕಲ್ಪಿಸುವ ಮೂಲಕ ಸಂತೆಗೆ ಮೀಸಲಾದ ಜಾಗದಲ್ಲೇ ವ್ಯಾಪಾರ ವಹಿವಾಟು ನಡೆಸಲು ಅನುಕೂಲ ಮಾಡಿಕೊಡಲಾಗುವುದು ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.

ಪಟ್ಟಣದ ಶ್ರೀ ಚನ್ನಕೇಶವಸ್ವಾಮಿ ದೇಗುಲದ ಹಿಂಭಾಗ ನಡೆಯುವ ವಾರದ ಸಂತೆ ಜಾಗದಲ್ಲಿ 14 ಲಕ್ಷ ರೂ. ಅಭಿವೃದ್ಧಿ ಕಾಮಗಾರಿಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಪುರಸಭೆಯಿಂದ ವಾರದ ಸಂತೆಗೆ ಬೇಕಾದ ಎಲ್ಲ ರೀತಿಯ ಸಹಕಾರ ನೀಡಲಾಗುತ್ತಿದೆ. ಆದರೆ, ಕೆಲವರು ಆಹಾರ ಪದಾರ್ಥಗಳನ್ನು ರಸ್ತೆ ಇಕ್ಕೆಲಗಳಲ್ಲೂ ಮಾರಾಟ ಮಾಡುತ್ತಿರುವುದರಿಂದ ಈ ರಸ್ತೆಯಲ್ಲಿ ಸಂಚರಿಸುವ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಪುರಸಭೆ ಅಧ್ಯಕ್ಷರ ಮನವಿ ಮೇರೆಗೆ ಸಂತೆಗೆ ಕಾಯಕಲ್ಪ ನೀಡಲಾಗುತ್ತಿದೆ ಎಂದರು.

ಈಗಾಗಲೇ ಪುರಸಭೆಗೆ ಹೆಚ್ಚುವರಿ ಹಣಕಾಸು ಯೋಜನೆಯಡಿ, 7 ಕೋಟಿ ರೂ., ನಗರೋತ್ಥಾನದಲ್ಲಿ 3 ಕೋಟಿ ರೂ., 15 ನೇ ಹಣಕಾಸು ಯೋಜನೆಯಲ್ಲಿ 1 ಕೋಟಿ ರೂ. ಬರಲಿದೆ. ಪಟ್ಟಣದ ಅಭಿವೃದ್ಧಿ ಜತೆಗೆ ಕುಡಿಯುವ ನೀರು, ಶೌಚಗೃಹಕ್ಕೆ ಆದ್ಯತೆ ನೀಡಲಾಗುತ್ತದೆ. ಸಂತೆ ಮೈದಾನ ಸಮತಟ್ಟು ಮಾಡಿದ ನಂತರ ಸಂಪೂರ್ಣವಾಗಿ ಎಲ್ಲರನ್ನೂ ಸ್ಥಳಾಂತರಿಸಲಾಗುವುದು. ಜೆಪಿ ನಗರದ ಒಂದು ಭಾಗದಲ್ಲಿ ಒಳಚರಂಡಿ ಸಮಸ್ಯೆ ಇದ್ದು, ಅದನ್ನು ಪರಿಹರಿಸಲು ಮುಂದಾಗಿದ್ದೇವೆ ಎಂದರು.

ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ಮಾತನಾಡಿ, ಹಲವು ವರ್ಷಗಳಿಂದ ವಾರದ ಸಂತೆ ನಡೆಯುವ ಸ್ಥಳದಲ್ಲಿ ಗುಂಡಿ ಇರುವುದರಿಂದ ಮಳೆಗಾಲದಲ್ಲಿ ತೊಂದರೆಯಾಗುತ್ತಿದೆ ಎಂದು ವರ್ತಕರು, ರೈತರು ರಸ್ತೆ ಬದಿಯಲ್ಲಿ ಮಾರಾಟ ಮಾಡುತ್ತಿದ್ದರು. ಇದರಿಂದ ಸಾರ್ವಜನಿಕರು ಓಡಾಡಲು ಸಮಸ್ಯೆಯಾಗುತಿತ್ತು. ವರ್ತಕರ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕೆಲಸ ಕೈಗೊಳ್ಳಲಾಗಿದೆ ಎಂದರು.

ಪುರಸಭೆ ಮುಖ್ಯಾಧಿಕಾರಿ ಸುಜಯ್ ಕುಮಾರ್, ಇಂಜಿನಿಯರ್ ಮೋಹನ್, ಆರೋಗ್ಯಾಧಿಕಾರಿ ಲೋಹಿತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net