ಭೂ ವಂದನ - 6 : ನದಿಯ ತೀರವನ್ನು ಕಾಡುವ ಬಟ್ಟೆ ತ್ಯಾಜ್ಯ! Clothes waste

Clothes waste
Published on
Nandini Lakshmikanth

Clothes waste : ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ ನರ್ಮದೇ ಸಿಂಧು ಕಾವೇರೀ ಜಲೇಸ್ಮಿನ್ ಸನ್ನಿಧಿಮ್ ಕುರು|| ಈ ಶ್ಲೋಕ ದಿನ ನಿತ್ಯ ಸ್ನಾನ ಮಾಡುವ ಸಮಯದಲ್ಲಿ ಪಠಿಸುವುದು ಸಾಮಾನ್ಯ. ವಿಶ್ವದ ಅನೇಕ ನದಿಗಳ ದಡದಲ್ಲಿ ನಾಗರೀಕತೆ ಬೆಳೆದ ಬಗ್ಗೆ ಇತಿಹಾಸದ ಪುಟಗಳು ನಮಗೆ ತಿಳಿಸುತ್ತವೆ. ಅತಿ ಪ್ರಾಚೀನವೆನ್ನಿಸಿಕೊಂಡ ಸಿಂಧೂ ನದಿಯ ನಾಗರಿಕತೆ ನಮ್ಮ ಇತಿಹಾಸ. ನೀರಿನ ಪ್ರತಿ ಹನಿಯಲ್ಲೂ ನಾವೂ ಪವಿತ್ರ ನದಿಗಳಾದ ಗಂಗೆ, ಯಮುನೆ, ಗೋದಾವರಿ, ಸರಸ್ವತಿ, ನರ್ಮದೆ, ಸಿಂಧು ಮತ್ತು ಕಾವೇರಿ ಸನ್ನಿಧಿಯನ್ನು ಅಪೇಕ್ಷಿಸುತ್ತೇವೆ. ಹೀಗೆ ಪವಿತ್ರ ನದಿಯಗಳ ಸನ್ನಿಧಿಯನ್ನು ಪ್ರತಿದಿನವೂ ಅಪೇಕ್ಷಿಸುವ ನಾವು, ಈ ಪವಿತ್ರ ನದಿಗಳ ತೀರಕ್ಕೇ ಹೋದರೆ, ಇನ್ನೆಷ್ಟು ಭಕ್ತಿಯಿಂದ ನದಿಯನ್ನು ನಾವು ಅನುಭವಿಸಬಹುದು, ಪೂಜಿಸಬಹುದು! ಅದರಲ್ಲೂ ಇದೀಗ ಮಳೆಗಾಲ, ತುಂಬಿ ಹರಿಯುತ್ತಿರುವ ನದಿಗಳ ಪೂಜಿಸಿ ಬಾಗಿನ ಅರ್ಪಿಸುವ ಸಮಯ. ಭಕ್ತಿ ಭಾವದಿ೦ದ ನದಿಯ ತೀರಕ್ಕೆ ಹೋದರೆ ನಮಗೆ ಕಾಣುವುದೇನು? ಎಲ್ಲೆಲ್ಲೂ ರಾಶಿ ರಾಶಿಯಾಗಿ ಬಿದ್ದ ಬಟ್ಟೆಗಳು. ಹೇಗೋ ದಡದಲ್ಲಿರುವ ಬಟ್ಟೆಗಳನ್ನು ಸರಿಸಿ ನದಿಯೊಳಗೆ ಕಾಲಿಟ್ಟಿರೋ ಅಲ್ಲಿಯೂ ಸೀರೆ, ಅಧವಾ ಇನ್ನಾವುದೋ ಕೊಳೆತ ಬಟ್ಟೆ ನಮ್ಮ ಕಾಲಿಗೆ ಸಿಕ್ಕಿ ಹಾಕಿಕೊoಡು ಕಾಲು ಜಾರಿ ನೀವು ನೀರೊಳಗೆ ಬಿದ್ದರೂ ಅಚ್ಚರಿಯಿಲ್ಲ.

ವಿಶ್ವದ ಅನೇಕ ರಾಷ್ಟ್ರಗಳ ಫ್ಯಾಷನ್ ಪ್ರಿಯರ ಬಟ್ಟೆಗಳ ತ್ಯಾಜ್ಯ ಪರಿಸರದ ಮೇಲೆ ತನ್ನ ತೀವ್ರ ಪ್ರಭಾವವನ್ನು ಬೀರುತ್ತಿದೆ. ವಿಶೇಷವಾಗಿ ನದಿಯ ತೀರದಲ್ಲಿ ಮಾಡುವ ಬಟ್ಟೆಗಳ ತ್ಯಾಜ್ಯ ಭಾರತವೂ ಸೇರಿದಂತೆ ಘನಾ, ಚಿಲಿ, ಕೀನ್ಯಾ ದೇಶಗಳಲ್ಲಿ ಕಂಡುಬರುತ್ತದೆ. ಕೇವಲ ನದಿಗಳ ಸ್ವಚ್ಛತೆಗಷ್ಟೇ ಅಲ್ಲದೇ ಪರಿಸರ ಹಾಗೂ ಆರೋಗ್ಯಕ್ಕೂ ಹಾನಿಕರ ಈ ವರ್ತನೆ. ಇತರ ದೇಶಗಳಲ್ಲಿ ಜನರ 'ಫ್ಯಾಷನ್ ಡಿಸ್ಕಾಡ್' ಕಾರಣವನ್ನು ಮುಂದಿಟ್ಟರೆ, ನದಿಗಳನ್ನು ಪೂಜಿಸುವ ಭಾರತದಲ್ಲಿ ಆಚರಣೆ ಅಥವಾ ನಂಬಿಕೆ ಕಾರಣವಾಗುತ್ತದೆ. ಅದರಲ್ಲೂ ಪವಿತ್ರ ಕ್ಷೇತ್ರಗಳಿಗೆ ಹೋಗಿ ಅಲ್ಲಿ ನದಿಯ ದಡವಿದ್ದರೆ, ಮುಳಿಗೆದ್ದು ದೇವರ ದರ್ಶನ ಮಾಡುವುದು ನಮ್ಮ ವಾಡಿಕೆ. ನದಿಯ ದಡದಲ್ಲಿ ಧಾರ್ಮಿಕ ವಿಧಿ ಮತ್ತು ಆಚರಣೆಗಳ ನಂತರ ಅಥವಾ ಮೊದಲು ನದಿಯ ದಡದಲ್ಲಿ ಮುಳಗೇಳುವುದೂ ಸಾಮಾನ್ಯ. ನದಿ ಸ್ನಾನ ಕುರಿತ ನಂಬಿಕೆಗೆ ದೇವರು ಮತ್ತು ಹಿರಿಯರ ಕುರಿತಿರುವ ಭಕ್ತಿಯೇ ಆಧಾರ. ಹೀಗೆ ನದಿ ಸ್ನಾನವನ್ನು ಪೂಜಾವಿಧಿಯ ಭಾಗವಾಗಿ ಆಚರಿಸುವ ನಾವು ನದಿಯಲ್ಲಿ ಮುಳಿಗೆದ್ದರೆ ಪರಿಸರಕ್ಕೆ ಯಾವ ರೀತಿಯಲ್ಲೂ ಹಾನಿಯಿಲ್ಲ. ಆದರೆ, ಈ ಪ್ರಕ್ರಿಯಲ್ಲಿ ಭಾಗವಹಿಸುವ ನಮ್ಮ ನಂತರದ ನಡವಳಿಕೆಗಳು ಕಳವಳಕಾರಿ. ಕಾರಣ ಕೇವಲ ನಾವು ನದಿಯಲ್ಲಿ ಮುಳಗೇಳುವುದಿಲ್ಲ, ಹಲವಾರು ರೀತಿಯ ತ್ಯಾಜ್ಯಗಳನ್ನೂ ನದಿಗೆ ಸಮರ್ಪಿಸಿ ಬರುತ್ತೇವೆ. ಅದರಲ್ಲೂ ನದಿಯ ದಡದಲ್ಲಿ ನಾವು ತ್ಯಜಿಸಿ ಬರುವ ಬಟ್ಟೆಗಳು. ನಿಜ ಈ ಕ್ರಿಯೆಯಿಂದ ಕೆಲವರಿಗೆ ಪಾಪ ಪರಿಹಾರದ ಭಾವನೆಯಾದರೆ ಇನ್ನು ಕೆಲವರಿಗೆ ಪವಿತ್ರ ಕಾರ್ಯವನ್ನು ಕೈಗೊಂಡ ತೃಪ್ತಿ! ಆದರೆ, ನಮ್ಮಾಚರಣೆ ಪ್ರಕೃತಿಯ ಮೇಲೆ ಯಾವ ರೀತಿಯ ಭಾರವನ್ನು ಹೇರಬಹುದೆಂದು ನಾವು ಯೋಚಿಸಬೇಕಾದ್ದೂ ನಮ್ಮ ಕರ್ತವ್ಯವಲ್ಲವೇ? ಅದರಲ್ಲೂ ಬಹುತೇಕರು ತ್ಯಾಜ್ಯ ಮಾಡುವ ಸಿಂಥೆಟಿಕ್ ಬಟ್ಟೆಗಳು ಕೊಳೆಯಲು ಬಹಳಷ್ಟು ವರ್ಷಗಳೇ ಬೇಕು ಮತ್ತು ಸಿಂಥೆಟಿಕ್ ಬಟ್ಟೆಗಳನ್ನು ಉತ್ಪಾದಿಸಲು ಬಳಸುವ ದಾರಗಳು ಜಲಚರಗಳಿಗೆ ಮತ್ತು ಪರಿಸರ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತದೆ.

ಪ್ರತಿ ನದಿಯ ದಡದಲ್ಲಿಯೂ 'ನದಿಯ ದಂಡೆಯನ್ನು ಸ್ವಚ್ಛವಾಗಿಡಿ, ಬಟ್ಟೆಗಳನ್ನು ಬಿಸುಡಬೇಡಿ' , 'ನಿಯಮಗಳನ್ನು ಉಲ್ಲಂಘಿಸಿದವರು ಶಿಕ್ಷಾರ್ಹರು" ಎಂಬ ಫಲಕಗಳು ಅಲ್ಲಲ್ಲಿ ಕಂಡುಬಂದರೂ ಯಾರಿಗೂ ಯಾವ ದಂಡವನ್ನಾಗಲೀ, ಶಿಕ್ಷೆಯನ್ನಾಗಲೀ ನೀಡಿದ ಬಗ್ಗೆ ವರದಿಯಾಗಿಲ್ಲ. ಎಲ್ಲವೂ ಕಣ್ಣೊರೆಸುವ ನಾಟಕ. ಆದರೆ, ಜಿಲ್ಲಾಧಿಕಾರಿಗಳನ್ನಾಗಲೀ ಅಥವಾ ಸಂಬಂಧಪಟ್ಟ ಅಧಿಕಾರಿಗಳನ್ನು ಯಾವುದೇ ಕ್ರಮ ತೆಗೆದುಕೊಳ್ಳದಿರುವುದಕ್ಕಾಗಿ ಟೀಕಿಸುವ ಅಧಿಕಾರ ನಮಗಿಲ್ಲ. ಕಾರಣ, "ನಮ್ಮಪ್ಪ - ನಮ್ಮಜ್ಜನ ಕಾಲದಿಂದ ಮಾಡಿಕೊಂಡು ಬಂದಿದ್ದೇವೆ ಈಗೇನು ನಿಮ್ಮ ಹೊಸ ವರಸೆ" ಎಂದು ವಾದಿಸುವವರೂ, ನಿಯಮಗಳನ್ನು ಉಲ್ಲಂಘಿಸುವವರೂ ನಾವೇ!

ನದಿಗಳ ದಡದಲ್ಲಿ ಬೀಸಾಡಿದ ಬಟ್ಟೆಗಳ ತೆರವುಗೊಳಿಸಿ ಸ್ವಚ್ಛಗೊಳಿಸುವ ಕಾರ್ಯವನ್ನು ಹಲವಾರು ಸ್ವಯಂ ಸೇವಾ ಸoಸ್ಥೆಗಳು ಕೈಗೆತ್ತಿಕೊಂಡಿರುವುದು ಶ್ಲಾಘನೀಯ. ಟ್ರಕ್​ಗಳಲ್ಲಿ ತುಂಬಿಸಿ ಕಳಿಸಲಾಗುವ ಈ ಬಟ್ಟೆಗಳು ಪುನರ್ ಬಳಕೆಯ ಸ್ಥಿತಿಯಲ್ಲಂತೂ ಇರುವುದಿಲ್ಲ. ಈ ರೀತಿಯ ಬಟ್ಟೆ ತ್ಯಾಜ್ಯವನ್ನು 'ಭೂ ಭರ್ತಿ'ಗಾಗಿಯೇ ಬಳಸುವುದನ್ನು ನಾವು ಹೆಚ್ಚಾಗಿ ನೋಡುತ್ತೇವೆ. ಕೊಳೆತ ಬಟ್ಟೆಗಳಿ೦ದ ತುಂಬಿದ ಭೂಮಿ ಅದಿನ್ನೆಷ್ಟು ವಿಧದಲ್ಲಿ ಪರಿಸರಕ್ಕೆ ಹಾನಿ ಮಾಡೀತೆಂದು ಮುಂದಿನ ಸಂಚಿಕೆಯಲ್ಲಿ ಯೋಚಿಸೋಣ. ಪ್ರಸ್ತುತವಾಗಿ ತು೦ಬಿ ಹರಿಯುತ್ತಿರುವ ನದಿಗಳಲ್ಲಿ ಸ್ನಾನ ಮಾಡುವ ಆನಂದವನ್ನು ಅನುಭವಿಸುತ್ತಿರುವ ನಾವು, ಈ ಪ್ರಕ್ರಿಯೆಯ ಸುತ್ತದ ನಮ್ಮ ನಂಬಿಕೆಗಳು ಮತ್ತದರ ಆಚರಣೆ ಮುಖ್ಯ ನಾವದನ್ನು ಪಾಲಿಸುವ ಭರದಲ್ಲಿ ನಾವು ಪೂಜ್ಯ ಸ್ಥಾನದಲ್ಲಿಟ್ಟು, ಅರಿಷಿಣ ಕುಂಕುಮ ಬಾಗಿನ ನೀಡಿ ಪೂಜಿಸುವ ನದಿಯನ್ನು, ಜಲಚರಗಳನ್ನು, ಮತ್ತು ನದಿಯ ಹರಿವಿನ ಸುತ್ತಲಿನ ಪರಿಸರವನ್ನು ಸಂರಕ್ಷಿಸುವತ್ತಲೂ ಗಮನ ಹರಿಸಬೇಕಾದ್ದು ನಮ್ಮ ಕರ್ತವ್ಯವೆನ್ನುವುದನ್ನು ಮರೆಯದಿರೋಣ.

ನಾವು ನದಿಯಲ್ಲಿ ಬಿಟ್ಟು ಬರುವ ಬದಲು ಬಟ್ಟೆಗಳನ್ನು ಒಣಗಿಸಿ ಜವಾಬ್ದಾರಿಯಿಂದ ತಂದು ಅಗತ್ಯವಿರುವ ಯಾರಿಗಾದರೂ ದಾನ ಮಾಡಬಹುದು. ವಿವಿಧ ರೀತಿಯಲ್ಲಿ ಮರುಬಳಕೆ ಮಾಡುವ/ ಹೊಸ ಉತ್ಪನ್ನಗಳನ್ನು ಸೃಷ್ಠಿಸುವ ಸಂಸ್ಥೆಗಳಿಗೆ ನೀಡಬಹುದು. ಉದಾಹರಣೆಗೆ ಡೆನಿಮ್ ಬಟ್ಟೆಗಳನ್ನು ವಿವಿಧ ರೀತಿಯ ಕಲೆಗಳಿಗೆ, ಪ್ಯಾಚ್ ವರ್ಕ್​ ಕೆಲಸಗಳಿಗೆ, ಸೀರೆಗಳನ್ನು ಹೊದಿಕೆಗಳಿಗೆ, ಟಿ ಶರ್ಟ್​ಗಳನ್ನು ಕಾಲೊರೆಸುವ ಬಟ್ಟೆಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಬಟ್ಟೆಗಳ ಮೆಕಾನಿಕಲ್ ಪುನರ್ ಬಳಕೆ ಕೂಡ ನಡೆಯುತ್ತದೆ. ಇಲ್ಲಿ ಸ್ವಾಭಾವಿಕ ನೂಲುಗಳಿಂದ ತಯಾರಾದ ಹತ್ತಿ ಮತ್ತು ಅರಳೆಯ ಬಟ್ಟೆಗಳಿಂದ ನೂತನವಾಗಿ ನೂಲನ್ನು ತಗೆದು ನೂತನ ಬಟ್ಟೆಗಳಿಗೆ ಆ ನೂಲನ್ನು ಬಳಸುತ್ತಾರೆ. ಅದೇ ರೀತಿ ಪಾಲಿಯಸ್ಟರ್ ಬಟ್ಟೆಗಳನ್ನು ಕೂಡ 'ರಾಸಾಯನಿಕ ಪುನರ್ ಬಳಕೆ' ಕ್ರಮದಲ್ಲಿ ಹೊಸ ನೂಲನ್ನಾಗಿ ಪರಿವರ್ತಿಸುತ್ತಾರೆ. ಅದೇ ರೀತಿ ಹಳೆ ಬಟ್ಟೆಗಳನ್ನು ಹೊಸ ಮಾದರಿಯಲ್ಲಿ ಸಿದ್ಧ ಪಡಿಸುವ ವೃತ್ತಿಯೂ ಚಾಲ್ತಿಯಲ್ಲಿದೆ.

ನೆನಪಿಡೋಣ ನದಿ 'ನಮ್ಮದು', ಎನ್ನುವ ಸ್ವಂತಿಕೆ ಭಾವ ಅತಿ ಹಿರಿದು. ಹಾಗೆಯೇ ನದಿಯನ್ನು ಸ್ವಚ್ಛವಾಗಿರಿಸಿಕೊಂಡು ರಕ್ಷಿಸುವ ಜವಾಬ್ದಾರಿಯೂ ನಮ್ಮದೇ. ನಮ್ಮ ಈ ಭಾವದ ಬದಲಾವಣೆಗೆ ಸ್ವ ಪ್ರಯತ್ನ ಮುಖ್ಯವೇ ಹೊರತು ಸರ್ಕಾರ ಯಾವ ಕಾನೂನೂ ಅಲ್ಲ . ಅಲ್ಲವೇ?

ಲೇಖಕರ ಪರಿಚಯ

ಲೇಖಕರು ನoದಿನಿ ಲಕ್ಷ್ಮೀಕಾಂತ್. ಆರೋಗ್ಯ ಸoಶೋಧಕರು, ಬರಹಗಾರರು ಮತ್ತು ಸಂವಹನಕಾರರು. ICSSR ಇವರನ್ನು ಹಿರಿಯ ಸoಶೋಧಕಿಯೆಂದು ಗುರುತಿಸಿದೆ. ಶ್ರೀ ಚಿದಂಬರ ರಿಸಚ್೯ ಮತ್ತು ಡೆವಲಪ್ಮೆಂಟ್, ಗುಬ್ಬಿ, ಇದರ ಕಾಯ೯ನಿವಾ೯ಹಕರು. ರಚಯಿತಾ ಟ್ರಸ್ಟ್​ನ ಸಂಸ್ಥಾಪಕರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net