ಹೊಸ ರಥದಲ್ಲಿ ಭೋಗ ನಂದೀಶ್ವರನ ಮೆರವಣಿಗೆ

FotoJet
ಭೋಗ ನಂದೀಶ್ವರ ರಥೋತ್ಸವದಲ್ಲಿ ಸೇರಿದ್ದ ಜನಸಾಗರ.
Published on

ಚಿಕ್ಕಬಳ್ಳಾಪುರ: ಕೋಟ್ಯಂತರ ರೂ. ವೆಚ್ಚದ ಹೊಸ ರಥದ ಸಂಚಾರದ ವಿಶೇಷತೆಯಲ್ಲಿ ತಾಲೂಕಿನ ನಂದಿ ಗ್ರಾಮದ ಶ್ರೀ ಭೋಗನಂದಿಶ್ವರಸ್ವಾಮಿ ಬ್ರಹ್ಮರಥೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಗುರುವಾರ ವಿಜೃಂಭಣೆಯಿಂದ ನೆರವೇರಿತು.

ರಥೋತ್ಸವಕ್ಕೂ ಮೊದಲು ಪ್ರತಿವರ್ಷದಂತೆ ಬೆಳಗ್ಗೆ ದೇವಾಲಯದಲ್ಲಿ ದೇವರಿಗೆ ಅಲಂಕಾರ, ಪೂಜೆ, ಹೋಮ ಹವನ ನಡೆದವು. ಚಿಕ್ಕ ರಥದಲ್ಲಿ ಅಂಬಿಕಾ, ಗಣಪತಿ, 2.5 ಕೋಟಿ ರೂ. ವೆಚ್ಚದ ಹೊಸ ದೊಡ್ಡ ರಥದಲ್ಲಿ ಗಿರಿಜಾಂಬಾ ಸಮೇತ ಶ್ರೀ ಭೋಗನಂದೀಶ್ವರಸ್ವಾಮಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಮೆರವಣಿಗೆ ನಡೆಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್​, ಶಾಸಕ ಪ್ರದಿಪ್​ ಈಶ್ವರ್​ ಮತ್ತಿತರ ಗಣ್ಯರು ರಥೋತ್ಸವಕ್ಕೆ ಚಾಲನೆ ನೀಡಿದರು.

ಮಹಾಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ಜಾಗರಣೆಗೆ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಜಿಲ್ಲೆ ಹಾಗೂ ನೆರೆ ರಾಜ್ಯ ಆಂಧ್ರದಿಂದಲೂ ಆಗಮಿಸಿದ್ದ ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಭಾಗಿಯಾದರು.

ಜಿಲ್ಲಾಧಿಕಾರಿ ಪಿ.ಎನ್​.ರವೀಂದ್ರ, ಜಿಪಂ ಸಿಇಒ ಪ್ರಕಾಶ್​ ನಿಟ್ಟಾಲಿ, ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಖಾದಿ ಹಾಗೂ ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಯಲುವಹಳ್ಳಿ ಎನ್​.ರಮೇಶ್​, ಹಾಪ್​ಕಾಮ್ಸ್​ ಮಾಜಿ ಅಧ್ಯಕ್ಷ ಜಿ.ಆರ್​.ಶ್ರೀನಿವಾಸ್​, ಗ್ರಾಪಂ ಉಪಾಧ್ಯಕ್ಷ ಸಿ.ಕೆ.ಮಲ್ಲಪ್ಪ ಮತ್ತಿತರರು ಭಾಗವಹಿಸಿದ್ದರು.

ಜನಸಮೂಹ ಕಡಿಮೆ: ಕಳೆದ ವರ್ಷಕ್ಕೆ ಹೋಲಿಸಿದ್ದಲ್ಲಿ ಜಾತ್ರೆಗೆ ಆಗಮಿಸಿದ್ದವರ ಪ್ರಮಾಣ ಕಡಿಮೆ ಇತ್ತು. ಇದರ ನಡುವೆಯೂ ಸಂಭ್ರಮಕ್ಕೇನೂ ಕಡಿಮೆ ಇರಲಿಲ್ಲ. ಪೊಲೀಸರು ನಿರಂತರವಾಗಿ ಧ್ವನಿವರ್ಧಕದ ಮೂಲಕ ಎಚ್ಚರದಿಂದಿರುವ ಸಂದೇಶ ಸಾರುವ, ಕಾಣೆಯಾದವರ ಮಾಹಿತಿ ನೀಡುತ್ತಿದ್ದ ದೃಶ್ಯ ಕಂಡು ಬಂತು.

ದಣಿವು ನೀಗಿಸುವ ಕೆಲಸ: ಜಾತ್ರೆ ಹಿನ್ನೆಲೆಯಲ್ಲಿ ವಿವಿಧ ಸಂ ಸಂಸ್ಥೆಗಳು, ಸಮಾಜ ಸೇವಕರು, ದಾನಿಗಳು ಕೊಳವನಹಳ್ಳಿ, ತಿರ್ನಹಳ್ಳಿ, ಮುದ್ದೇನಹಳ್ಳಿ, ನಂದಿ, ಯಲುವಹಳ್ಳಿ ಸೇರಿ ವಿವಿಧ ಗ್ರಾಮಗಳ ಬಳಿ ನೀರು, ಹೆಸರುಬೇಳೆ, ಮಜ್ಜಿಗೆ, ಪಾನಕ ವಿತರಿಸಿ ಜನರ ದಾಹ ನೀಗಿಸಿದರು. ಹಲವೆಡೆ ಬಿಸಿ ಬೇಳೆಬಾತ್​, ತರಕಾರಿ ಪಲಾವ್​, ಮೊಸರನ್ನ ವಿತರಿಸಲಾಯಿತು.

ಹರಕೆ ಹೊತ್ತ ಭಕ್ತರು: ಹಿಂದಿನ ಮಾದರಿಯಲ್ಲಿ ರಥೋತ್ಸವದಲ್ಲಿ ವಿಶೇಷ ಹರಕೆಯ ಮೂಲಕ ಭಕ್ತರು ಗಮನ ಸೆಳೆದಿದ್ದಾರೆ. ಭಗತ್​ ಸಿಂಗ್​ ಚಾರಿಟಬಲ್​ ಟ್ರಸ್ಟ್​ ಅಧ್ಯಕ್ಷ ಸಂದೀಪ್​ ರೆಡ್ಡಿ ಅವರು ಮುಂದಿನ ದಿನಗಳಲ್ಲಿ ಶಾಸಕರಾಗಿ ಆಯ್ಕೆಯಾಗಲಿ, ಶಾಸಕ ಪ್ರದಿಪ್​ ಈಶ್ವರ್​ ಉತ್ತಮ ಆಡಳಿತದ ಮೂಲಕ ಜನಮೆಚ್ಚುಗೆಗೆ ಗಳಿಸಲಿ, ಸಂಸದ ಡಾ ಕೆ.ಸುಧಾಕರ್​ ಬಲ ವೃದ್ಧಿಯಾಗಲಿ ಎನ್ನುವುದು ಸೇರಿ ವಿವಿಧ ಹರಕೆಯ ಬರಹವಿರುವ ದವನ, ಬಾಳೆಹಣ್ಣನ್ನು ತೇರಿನ ಮೇಲೆ ಎಸೆದರು.

ಜಾತ್ರೆಯ ಖುಷಿ: ಜಾತ್ರೆಯ ವೇಳೆ ಅಗತ್ಯ ವಸ್ತುಗಳ ಖರೀದಿ, ಮನರಂಜನೆಯ ಆಟಗಳಲ್ಲಿ ಭಾಗಿಯಾಗಿ ಅನೇಕರು ಖುಷಿಪಟ್ಟರು. ರಂಗಿನಾಟ, ಬೈಕ್​ ರೈಡಿಂಗ್​ ಸೇರಿ ಸಾಹಸ ವಿವಿಧ ಪ್ರದರ್ಶನಗಳು ಗಮನ ಸೆಳೆದವು. ಇದೇ ವೇಳೆ ಹಲವರು ಸಂಬಂಧಿಕರು ಮತ್ತು ಗೆಳೆಯರೊಂದಿಗೆ ವೀಕ್ಷಣೆಯ ಜತೆಗೆ ಸೆಲ್ಫಿ ಪೋಟೋ ಕ್ಲಿಕ್ಕಿಸಿಕೊಂಡರು.

ದೇವಾಲಯ ಪ್ರದಣೆ: ಮೆರವಣಿಗೆ ವೇಳೆ ಜನಜಂಗುಳಿಯಲ್ಲಿ ನೂಕುನುಗ್ಗಲಿನಿಂದ ಅಹಿತಕರ ಟನೆಗೆ ಆಸ್ಪದವಾಗದಂತೆ ಬಂದೋಬಸ್ತ್​ ಏರ್ಪಡಿಸಲಾಗಿತ್ತು. ನಂದಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಯುವ ಕಾರ್ಯಕರ್ತರು ದೇವರ ನಾಮಸ್ಮರಣೆಯೊಂದಿಗೆ ರಥವನ್ನು ಎಳೆದರು. ಎರಡೂ ರಥಗಳು ದೇವಾಲಯದ ಪ್ರದಣೆ ಹಾಕಿದವು. ಭಕ್ತರು ದವನ ಸಮೇತ ಬಾಳೆಹಣ್ಣನ್ನು ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net