

ಕೊಳ್ಳೇಗಾಲ: ಭೀಮನ ಅಮಾವಾಸ್ಯೆ ಪ್ರಯುಕ್ತ ತಾಲೂಕಿನ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯ ನೆರವೇರಿತು.
ಶ್ರೀ ಕ್ಷೇತ್ರ ಕುರುಬನ ಕಟ್ಟೆಯಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆ ಕೈಂಕರ್ಯಗಳು ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಹೂ, ಹಣ್ಣು, ಕಾಯಿ, ದೂಪ ಸಮರ್ಪಿಸಿದರು. ಪಟ್ಟಣದ ಮರಡಿಗುಡ್ಡದ ಶೀ ಮಹದೇಶ್ವರ ದೇವಾಲಯಕ್ಕೆ ಅಧಿಕ ಸಂಖ್ಯೆಯಲ್ಲಿ ಜನರು ತೆರಳಿ ಪೂಜೆ ಸಲ್ಲಿಸಿದರು. ಬಂದ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಅಂತೆಯೇ, ಶ್ರೀ ಮರಳೇಶ್ವರ ದೇವಾಲಯ, ಬಸ್ ನಿಲ್ದಾಣ ಸಮೀಪದ ವರಸಿದ್ಧಿ ವಿನಾಯಕ ದೇವಾಲಯ, ಭೀಮನಗರದ ಬಸವನಗುಡಿ, ಶ್ರೀ ಕಾಶಿ ವಿಶ್ವನಾಥೇಶ್ವರ ದೇವಾಲಯ, ಸತ್ತೇಗಾಲ ಶಿವನ ಸಮುದ್ರದ ಸೋಮೇಶ್ವರ ದೇವಾಲಯ ಸೇರಿದಂತೆ ತಾಲೂಕಿನ ವಿವಿಧ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು.