

ಬ್ಯಾಡಗಿ: ಧಾರ್ವಿುಕ ಉತ್ಸವ, ಹಬ್ಬ ಹರಿದಿನಗಳಿಂದ ಸಾರ್ವಜನಿಕರಲ್ಲಿ ಭಾವೈಕ್ಯ ಮೂಡಿಸುವ ಮೂಲಕ ಸಮಾಜಕ್ಕೆ ಉಪಯುಕ್ತ ಸಂದೇಶ ನೀಡಬೇಕಿದೆ ಎಂದು ಕಾಗಿನೆಲೆ ಕನಕಗುರುಪೀಠದ ನಿರಂಜನಾನಂದ ಶ್ರೀಗಳು ಹೇಳಿದರು.
ತಾಲೂಕಿನ ಕಾಗಿನೆಲೆ ಗ್ರಾಮದ ಗುರುಪೀಠದಲ್ಲಿ 533ನೇ ಕನಕ ಜಯಂತ್ಯುತ್ಸವ ಹಾಗೂ 20ನೇ ರಥೋತ್ಸವ ಅಂಗವಾಗಿ ಬುಧವಾರ ಆಯೋಜಿಸಿದ್ದ ಧ್ವಜಾರೋಹಣ, ಜಾತ್ರಾ ಮಹೋತ್ಸವ ಹಾಗೂ ಹೊಳೆ ಪೂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಾಚೀನ ಕಾಲದಿಂದಲೂ ಜಾತ್ರೆ, ಹಬ್ಬ, ಹರಿದಿನ ಹಾಗೂ ಧಾರ್ವಿುಕ ಉತ್ಸವ ಗಳು ಜನರಲ್ಲಿ ಭಾವೈಕ್ಯ ಮೂಡಿಸುವ ಮೂಲಕ ಸಮಾಜಮುಖಿ ಸಂದೇಶಗಳನ್ನು ಸರ್ವರಿಗೂ ತಿಳಿಸುತ್ತಿವೆ. ಒಂದೊಂದು ಹಬ್ಬ, ಉತ್ಸವಗಳು ವಿಶಿಷ್ಟವಾದ ಆಚರಣೆ ಮೂಲಕ ನಾಡಿಗೆ ಉತ್ತಮ ಸಂದೇಶ ನೀಡಲಿವೆ ಎಂದರು.
ಕನಕದಾಸರು ಶತಮಾನಗಳ ಹಿಂದೆ ಕುಲಕುಲವೆಂದು ಬಡಿದಾಡದಿರಿ, ನಿಮ್ಮ ಕುಲವೇನಾದರೂ ಬಲ್ಲೀರಾ ಎಂದು ಪ್ರಶ್ನಿಸಿದ್ದಾರೆ. ಪ್ರಸಕ್ತ ಸಮಾಜಕ್ಕೆ ಅವರ ಸಂದೇಶಗಳು ತೀರಾ ಅಗತ್ಯವಾಗಿವೆ ಎಂದರು.
ಕಾಗಿನೆಲೆ ಕನಕದಾಸರ ಕರ್ಮಭೂಮಿಯಾಗಿದ್ದು, ದೇಶದಲ್ಲಿ ಪ್ರಸಿದ್ಧ ಪ್ರವಾಸಿ ತಾಣವಾಗಲಿದೆ. ಕನಕರ ಜೀವನ ಚರಿತ್ರೆಗಳ ಸಂದೇಶಗಳ ಬರಹ, ಘಟನಾವಳಿ, ಮೂರ್ತಿಗಳನ್ನು ಉದ್ಯಾನದಲ್ಲಿ ನಿರ್ವಿುಸಲಾಗಿದೆ. ಸುಮಾರು 90 ಅಡಿ ಎತ್ತರದಲ್ಲಿ ಕನಕರ ಕಲ್ಲಿನ ಗೋಪುರ ನಿರ್ವಿುಸಿ ಅಲ್ಲಿ ನೈಜ ಜೀವನ ಘಟನಾವಳಿಗಳನ್ನು ಬಿಂಬಿಸಲಾಗಿದೆ. ಶರಣರ ನಡೆ ನುಡಿಯನ್ನು ಪಾಲಿಸುತ್ತ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕಿದೆ ಎಂದರು. ಇದಕ್ಕೂ ಮುನ್ನ ಶ್ರೀಗಳು ರೇವಣಸಿದ್ಧೇಶ್ವರ, ಬೀರಲಿಂಗೇಶ್ವರ, ಮೈಲಾರಲಿಂಗೇಶ್ವರ, ಮಹಾಸಿದ್ಧದೇವರು, ಕನಕಾದಿಕೇಶವ ದೇವರಿಗೆ ರುದ್ರಾಭಿಷೇಕ, ವಿಶೇಷ ಪೂಜೆ ನಡೆಸಿದರು. ಶ್ರೀಮಠದ ಭಕ್ತರೊಂದಿಗೆ ಶ್ರೀಗಳು ಹೊಳೆ ಪೂಜೆ ನೇರವೇರಿಸಿ, ರಥೋತ್ಸವಕ್ಕೆ ಚಾಲನೆ ನೀಡಿದರು.
ಗುರುಪೀಠದ ಮುಖ್ಯಸ್ಥರಾದ ಎಸ್.ಎಫ್.ಎನ್. ಗಾಜೀಗೌಡ್ರ, ಶಂಕ್ರಣ್ಣ ಮಾತನವರ, ಮಾರುತಿ ಹರಿಹರ, ರಾಜೇಂದ್ರ ಹಾವೇರಣ್ಣನವರ, ಮಾಲತೇಶ ಬಣಕಾರ, ಸದಾನಂದಣ್ಣ ಗೌಡರ, ಅಮೋಘಸಿದ್ಧೇಶ್ವರ ಶ್ರೀಗಳು, ಎಂ.ಬೀರಪ್ಪ, ಎಸ್.ಎ. ಬನ್ನಿಮಟ್ಟಿ ಇದ್ದರು.