ಮುಂಬೈನಲ್ಲಿ ಪತ್ತೆಯಾದ ಭಟ್ಕಳದ ವೈದ್ಯ

Dr.H.T.Umesh_
Published on

ಭಟ್ಕಳ:ಕರ್ತವ್ಯಕ್ಕೆ ಹೋಗುತ್ತೇನೆ ಎಂದು ಮನೆಯಿಂದ ತೆರಳಿ ನಾಪತ್ತೆಯಾಗಿದ್ದ ಇಲ್ಲಿನ ಸರ್ಕಾರಿ ಆಸ್ಪತ್ರೆಯ ಚರ್ಮರೋಗ ತಜ್ಞ ಡಾ. ಉಮೇಶ ಎಚ್.ಟಿ. ಶುಕ್ರವಾರ ಸಂಜೆ ಭಟ್ಕಳ ಗ್ರಾಮೀಣ ಠಾಣೆಗೆ ತಮ್ಮ ಕುಟುಂಬದ ಸದಸ್ಯರೊಂದಿಗೆ ಹಾಜರಾಗಿದ್ದಾರೆ.
ಮೂಲತಃ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಹಾಲಿ ಪಟ್ಟಣದ ಡಿ.ಪಿ. ಕಾಲನಿ ನಿವಾಸಿ ಡಾ. ಎಚ್.ಟಿ ಉಮೇಶ ಕಳೆದ 10 ದಿನಗಳಿಂದ ನಾಪತ್ತೆಯಾಗಿದ್ದರು. ಈ ಸಂಬಂಧ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಅ.10 ರ ಬೆಳ್ಳಗ್ಗೆ ತನ್ನ ಮನೆಯಿಂದ ಆಸ್ಪತ್ರೆಗೆ ಕರ್ತವ್ಯಕ್ಕೆ ತೆರಳುತ್ತೇನೆಂದು ಹೇಳಿ ಹೋದವರು ಮರಳಿ ಮನೆಗೆ ಬಾರದೆ ಸಂಬಂಧಿಕರ ಮನೆಗೂ ಹೋಗದೆ ನಾಪತ್ತೆಯಾಗಿದ್ದರು. ಈ ಕುರಿತು ವೈದ್ಯರ ಪತ್ನಿ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರ ಸತತ ಪರಿಶ್ರಮದ ಪರಿಣಾಮ ವೈದ್ಯ ಡಾ. ಉಮೇಶ ಎಚ್.ಟಿ ಮುಂಬೈನಲ್ಲಿ ಇರುವದು ಪತ್ತೆ ಹಚ್ಚಲಾಗಿತ್ತು.

ಗ್ರಾಮೀಣ ಠಾಣೆಯ ಸಿಪಿಐ ಗೋಪಾಲ ಚಂದನ ವೈದ್ಯರನ್ನು ಸಂಪರ್ಕಿಸಿದ್ದು, ಬಳಿಕ ಕುಟುಂಬದ ಸದಸ್ಯರೊಂದಿಗೆ ಗ್ರಾಮೀಣ ಠಾಣೆಗೆ ಹಾಜರಾಗಿದ್ದಾರೆ. ಈ ಮೂಲಕ ಭಟ್ಕಳದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ವೈದ್ಯರ ನಾಪತ್ತೆ ಪ್ರಕರಣಕ್ಕೆ ಸುಖ ಅಂತ್ಯ ದೊರಕಿದಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net