ಭಾರತ್ ಬಂದ್​: ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ ವಕೀಲರು

bharath
Published on

ಬೆಂಗಳೂರು: ಕಗ್ಗಂಟಾಗುತ್ತಲೇ ಬಂದಿರುವ ರೈತರ ಪ್ರತಿಭಟನೆ ಭಾರತ್ ಬಂದ್ ಆಗುವ ಮಟ್ಟಕ್ಕೆ ಬಂದಿದ್ದು, ಮಂಗಳವಾರ(ಡಿ.8) ದೇಶಾದ್ಯಂತ ಬಂದ್ ನಡೆಸಲು ರೈತ ಸಂಘಟನೆಗಳು ಕರೆ ನೀಡಿವೆ. ರೈತರ ಹೋರಾಟಕ್ಕೆ ವಕೀಲರೂ ಬೆಂಬಲ ಸೂಚಿಸಿದ್ದಾರೆ.

ಡಿಸೆಂಬರ್​ 8ರ ಭಾರತ ಬಂದ್​ಗೆ ಬೆಂಗಳೂರು ವಕೀಲರ ಸಂಘವು ನೈತಿಕ ಬೆಂಬಲ ಸೂಚಿಸಿದ್ದು, ಮಂಗಳವಾರ ಬೆಳಗ್ಗೆ 11 ಗಂಟೆಗೆ ಸಿಟಿ ಸಿವಿಲ್ ಕೋರ್ಟಿನ ಎಕ್ಸಿಟ್​ ಗೇಟ್​ನ ಮುಂಭಾಗ ವಕೀಲರು ಸಾಂಕೇತಿಕ ಪ್ರತಿಭಟನೆ ನಡೆಸಲಿದ್ದಾರೆ.

ರೈತರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕಾಯ್ದೆಗಳನ್ನು ವಾಪಸ್ ಪಡೆದುಕೊಳ್ಳುವಂತೆ ಆಗ್ರಹಿಸಿ ದೇಶದ ಸುಮಾರು 40 ರೈತ ಸಂಘಟನೆಗಳು ಬಂದ್​ಗೆ ಕರೆನೀಡಿದೆ.

ಕೇಂದ್ರ ಸರ್ಕಾರವು ರೈತರ ಎಲ್ಲ ಬೇಡಿಕೆಗಳನ್ನು ತುರ್ತಾಗಿ ಈಡೇರಿಸಬೇಕು. ಹಾಗೂ ರೈತರಿಗೆ ಮಾರಕವಾಗಿರುವ ವಿಧೇಯಕಗಳನ್ನು ಹಿಂಪಡೆಯಬೇಕು ಎಂದು ಬೆಂಗಳೂರು ವಕೀಲರ ಸಂಘ ಆಗ್ರಹಿಸಿದೆ. ಸಾಂಕೇತಿಕ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಮೂಲಕ ರೈತರ ಹೋರಾಟಕ್ಕೆ ಬೆಂಬಲ ನೀಡುವಂತೆ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ​ ಅವರು ಸದಸ್ಯರನ್ನು ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net