ಭರತನಾಟ್ಯ ಶಾಲೆ ಆರಂಭಿಸುವ ಭರವಸೆಯಿತ್ತ ಶಾಸಕ ದೇವೇಂದ್ರಪ್ಪ

Bharatanatyam, School, Hope, MLA,
Published on

ಜಗಳೂರು: ಜಗಳೂರು ಹಿಂದುಳಿದ ತಾಲೂಕಾಗಿದ್ದರೂ ಶೈಕ್ಷಣಿಕ, ಕಲೆ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತನ್ನದೇ ಆದ ಇತಿಹಾಸ ಹೊಂದಿದೆ. ಆದ್ದರಿಂದ ಮಕ್ಕಳ ಭವಿಷ್ಯಕ್ಕಾಗಿ ಪಟ್ಟಣದಲ್ಲಿ ಭರತ ನಾಟ್ಯ ಶಾಲೆ ಆರಂಭಿಸುವ ಚಿಂತನೆ ಇದೆ ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಹೇಳಿದರು.

ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳ ಕಾರ್ಯಕ್ರಮ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ತಾಲೂಕಿನಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ತಾಲೂಕಿನ ಕೀರ್ತಿ ತಂದಿದ್ದಾರೆ. ನನ್ನ ಅವಧಿಯಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ಮೊದಲ ಆದ್ಯತೆ ನೀಡಲಾಗುವುದು. ಶೀಘ್ರ ಹೈಟೆಕ್ ಗ್ರಂಥಾಲಯ ನಿರ್ಮಿಸಲಾಗುವುದು ಎಂದರು.

ವೀರಪ್ಪ ಮೋಯ್ಲಿ ಅವರು ಸಿಎಂ ಆಗಿದ್ದಾಗ ಶೈಕ್ಷಣಿಕ ಕ್ಷೇತ್ರಕ್ಕೆ ಉತ್ತಮವಾದ ಕೊಡುಗೆ ನೀಡಿ ಕ್ರಾಂತಿಕಾರಿ ನಾಯಕ ಎನಿಸಿಕೊಂಡಿದ್ದಾರೆ. ಪಿಯುಸಿ ನಂತರ ಸಿಇಟಿ ಪರೀಕ್ಷೆಯನ್ನು ಜಾರಿಗೆ ತಂದಿದ್ದರಿಂದ ಸಾವಿರಾರು ಜನರು ಐಎಎಸ್ ಅಧಿಕಾರಿಗಳಾಗಿದ್ದಾರೆ ಎಂದರು.

ಸಿಪಿಐ ಎಂ. ಶ್ರೀನಿವಾಸ್ ಮಾತನಾಡಿ, ವಿದ್ಯೆಗೆ ವಯಸ್ಸಿನ ಬೇಧಭಾವವಿಲ್ಲ. ಮುಪ್ಪಿನವರೆಗೂ ವಿದ್ಯಾಭ್ಯಾಸ ಮಾಡಬಹುದು. ವಿದ್ಯೆ ನಿರಂತರವಾಗಿ ಹರಿಯುವ ನೀರಾಗಬೇಕು ಎಂದರು.

ಜೂನಿಯರ್ ವಿಷ್ಣುವರ್ಧನ್ ಮಹಮದ್ ಅಲಿ ಅವರಿಂದ ಸಂಗೀತ, ಸ್ಫೂರ್ತಿ ಅವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.

ಸಿ.ಪಿ. ಜಗದೀಶ್, ಉಪನಿರ್ದೇಶಕ ಎಂ. ಶಿವರಾಜ್, ಉಪ ಪ್ರಾಚಾರ್ಯ ಡಿ.ಡಿ. ಹಾಲಪ್ಪ, ಪಪಂನ ಲೋಕ್ಯಾನಾಯ್ಕ, ಕೆಪಿಸಿಸಿ ಸದಸ್ಯ ಕಲ್ಲೇಶ್‌ರಾಜ್ ಪಟೇಲ್, ನಿವೃತ್ತ ಉಪನ್ಯಾಸಕ ಷಂಷೀರ್ ಅಹಮದ್, ಪಪಂ ಸದಸ್ಯರಾದ ಶಕೀಲ್, ಮಹಮದ್, ಮಂಜುನಾಥ್, ಅಲ್ಪಸಂಖ್ಯಾತ ವರ್ಗದ ಅಧ್ಯಕ್ಷ ಅಹಮದ್ ಅಲಿ, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಪಲ್ಲಾಗಟ್ಟೆ ಶೇಖರಪ್ಪ, ಉಪನ್ಯಾಸಕ ಮಂಜುನಾಥ್ ರೆಡ್ಡಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net