ಉತ್ತಮ ಸಂಸ್ಕಾರದಿಂದ ಯೋಗ್ಯತೆ ಪ್ರಾಪ್ತಿ : ಉಜಿರೆ ಅಶೋಕ್ ಭಟ್ ಅನಿಸಿಕೆ

New Project (15)
Published on

ಬೆಳ್ತಂಗಡಿ: ಸಂಸ್ಕಾರವೆಂಬುದು ಶಿಶುವಿಗೆ ಗರ್ಭಾಂಕುರದಿಂದ ಆರಂಭವಾಗುತ್ತದೆ. ಗರ್ಭದಲ್ಲಿನ ಕಲಿಕೆ ಅಕ್ಷರಾಭ್ಯಾಸದ ಜತೆ ಮುಂದುವರಿದು ಕುಟುಂಬ ಸಂಸ್ಕಾರದ ಜತೆ ಬೆರೆತು ಭವಿಷ್ಯದಲ್ಲಿ ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಕಾರಣವಾಗುತ್ತದೆ ಎಂದು ಹವ್ಯಾಸಿ ಯಕ್ಷಗಾನ ಕಲಾವಿದ ಉಜಿರೆ ಅಶೋಕ್ ಭಟ್ ಹೇಳಿದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಆಯೋಜಿಸಿರುವ 27ನೇ ವರ್ಷದ ಭಜನಾ ತರಬೇತಿ ಕಮ್ಮಟದ 3ನೇ ದಿನದ ಕಾರ್ಯಾಗಾರದಲ್ಲಿ ‘ಯುವಕರಲ್ಲಿ ಸಂಸ್ಕಾರ ಸಂಸ್ಕೃತಿ ಅರಿವು’ ಎಂಬ ವಿಚಾರದ ಕುರಿತು ಉಪನ್ಯಾಸ ನೀಡಿದರು.

ಯುವಕರಲ್ಲಿ ಆಧ್ಯಾತ್ಮಿಕ, ಭೌತಿಕ ಮತ್ತು ಧಾರ್ಮಿಕ ಚಿಂತನೆಗಳು ಮುಖ್ಯ. ಇವೆಲ್ಲದರ ಬೆಳವಣಿಗೆಯ ಮೊದಲ ಹೆಜ್ಜೆ ನಮ್ಮ ಮನೆಯಂಗಳದಲ್ಲಿ ಆರಂಭವಾಗಬೇಕು. ‘ವಸುದೈವ ಕುಟುಂಬಕಂ’ ಪರಿಕಲ್ಪನೆ ಪರಿಪೂರ್ಣವಾಗಲು ಯುವ ಮನಸ್ಸುಗಳನ್ನು ಸದೃಢಗೊಳಿಸುವಲ್ಲಿ ಭಜನೆ, ಹಬ್ಬ, ಆಚರಣೆ, ನಂಬಿಕೆ ಮತ್ತು ಕಲಿಕೆ ಅನುಷ್ಠಾನವಾದಾಗ ಮಾತ್ರ ಸಾಧ್ಯ ಎಂದರು.

ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತ್ತು ಡಾ.ಹೇಮಾವತಿ ಹೆಗ್ಗಡೆ ಭಜನಾ ಕಮ್ಮಟಕ್ಕೆ ಭೇಟಿ ನೀಡಿ ಶುಭ ಹಾರೈಸಿದರು.

ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಕಣಿಯೂರಿನ ಮಾರುತಿಪುರದ ರೈತಬಂಧು ಮಾಲೀಕ ಶಿವಶಂಕರ್ ನಾಯಕ್, ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್, ಕಾರ್ಯದರ್ಶಿ ಎ.ವಿ.ಶೆಟ್ಟಿ, ಭಜನಾ ಪರಿಷತ್ ಅಧ್ಯಕ್ಷ ಚಂದ್ರಶೇಖರ ಸಾಲ್ಯಾನ್, ಉಪಾಧ್ಯಕ್ಷ ರಾಜೇಂದ್ರ ಕುಮಾರ್ ಉಪಸ್ಥಿತರಿದ್ದರು. ಪೂರ್ಣಿಮಾ ಜೋಶಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net