ದೇವತಾರಾಧನೆಯಿಂದ ನೆಮ್ಮದಿ, ಆತ್ಮಶಾಂತಿ : ಮಾಣಿಲ ಶ್ರೀ ಆಶೀರ್ವಚನ

manila
ಭಜನಾ ಮಹಾಮಂಗಳೋತ್ಸವ ಧಾರ್ಮಿಕ ಸಭೆಯಲ್ಲಿ ಶ್ರೀ ಧಾಮ ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಿದರು.
Published on

ವಿಜಯವಾಣಿ ಸುದ್ದಿಜಾಲ ಕಡಬ

ಪ್ರಾತಃಕಾಲ ಮತ್ತು ಸಂಧ್ಯಾಕಾಲ ಎರಡೂ ಹೊತ್ತು ದೇವರನ್ನು ಭಕ್ತಿಯಿಂದ ಪೂಜಿಸುವುದರಿಂದ ನಮ್ಮ ಮನಸ್ಸನ್ನು ಶುದ್ಧಿಯಾಗಿಡಬಹುದು, ದೇವತಾರಾಧನೆಯಿಂದ ಆತ್ಮಶಾಂತಿ ಮತ್ತು ನೆಮ್ಮದಿಯಿಂದ ಜೀವನ ಮಾಡಲು ಸಾಧ್ಯ ಎಂದು ಶ್ರೀ ಧಾಮ ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ ಹೇಳಿದರು.

ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿ ಸುವರ್ಣ ಮಹೋತ್ಸವ ಪ್ರಯುಕ್ತ ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿ ವತಿಯಿಂದ ಬುಧವಾರ ಭಜನಾ ಮಹಾಮಂಗಳೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ಪ್ರಸಕ್ತ ಧಾರ್ಮಿಕತೆ ಮಹತ್ವ ಗೊತ್ತಿಲ್ಲದೆ ನಮ್ಮ ಸಂಸ್ಕೃತಿ ಮರೆಯಾಗುತ್ತಿದೆ. ಭಜನೆಯಿಂದ ಭಕ್ತಿ ಭಾವದ ಆರಾಧನೆಯಿಂದ ಮನಃಶಾಂತಿ ಸಿಗುತ್ತದೆ. ನಮ್ಮಲ್ಲಿರುವ ರಾಜಕೀಯ, ಜಾತಿ ವ್ಯವಸ್ಥೆಯನ್ನು ದೇವಸ್ಥಾನದ ಒಳಗೆ ತರದೆ ನಾವೆಲ್ಲಾ ಒಂದೇ ಎಂಬ ಭಾವನೆಯೊಂದಿಗೆ ದೇವರ ಸ್ಮರಣೆಯ ಪುಣ್ಯ ಕಾರ್ಯದಲ್ಲಿ ಭಾಗಿಯಾದಾಗ ನಮ್ಮ ಸನಾತನ ಹಿಂದು ಧರ್ಮ ಉಳಿಯುವ ಜತೆಗೆ ದೇಗುಲಗಳಲ್ಲಿ ಸಾನಿಧ್ಯ ವೃದ್ಧಿಯಾಗಲು ಸಾಧ್ಯ ಎಂದರು.

ಮದ್ವಾಧೀಶ ವಿಠಲದಾಸ ನಾಮಾಂಕಿತ ರಾಮಕೃಷ್ಣ ಕಾಟುಕುಕ್ಕೆ ಮಾತನಾಡಿದರು. ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿಯ ಅಧ್ಯಕ್ಷ ಪುಟ್ಟಣ್ಣ ಗೌಡ ಮುಗರಂಜ ಅಧ್ಯಕ್ಷತೆ ವಹಿಸಿದ್ದರು. ಮಂಡಳಿ ಕಾರ್ಯದರ್ಶಿ ಜಯಂತ ಅಬೀರ, ಕೋಶಾಧಿಕಾರಿ ಕೀರ್ತಿಕುಮಾರ್ ಏಳುವೆ ಉಪಸ್ಥಿತರಿದ್ದರು.
ಭಜನಾ ಮಂಡಳಿ ಗೌರವಾಧ್ಯಕ್ಷ ಚಿದಾನಂದ ಉಪಾಧ್ಯಾಯ ಕಲ್ಪಡ ಸ್ವಾಗತಿಸಿ. ಸುವರ್ಣ ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ಪದ್ಮಯ್ಯ ಗೌಡ ಅನಿಲ ವಂದಿಸಿ, ಭಜನಾ ಮಂಡಳಿಯ ಉಪಾಧ್ಯಕ್ಷ ಬಾಬು ಮಾದೋಡಿ ಕಾರ್ಯಕ್ರಮ ನಿರೂಪಿಸಿದರು. ಮಾಜಿ ಅಧ್ಯಕ್ಷ ಪರಮೇಶ್ವರ ಅನಿಲ ಸಹಕರಿಸಿದರು.

ಭಜನಾ ಮಂಡಳಿಯಿಂದ ಸಮಾಜದ ವಿಕಾಸ

ಹಿರಿಯರ ಸಂಪ್ರಾದಾಯಗಳು ನಡೆದುಕೊಂಡು ಬಂದ ಹಾಗೇ ಪ್ರತಿ ಮನೆ ಮನೆಗಳಲ್ಲಿಯೂ ನಿತ್ಯ ಭಜನೆ ನಡೆಯಬೇಕು. ಈ ನಿಟ್ಟಿನಲ್ಲಿ ಮುಂದಿನ ಪೀಳಿಗೆ ಭಜನೆಗಳಲ್ಲಿ ಭಾಗವಹಿಸುವಂತೆ ಪಾಲಕರು ಮಾಡಬೇಕು. ನಿತ್ಯ ನಿರಂತರ ಭಜನೆಗಳಲ್ಲಿ ಭಾಗಿಯಾದಾಗ, ಭಕ್ತಿಯಿಂದ ದೇವರನ್ನು ಪೂಜಿಸಿದಾಗ ಸಾತ್ವಿಕ ಬದುಕು ನಿರ್ಮಾಣವಾಗುತ್ತದೆ. ಭಜನಾ ಮಂಡಳಿಗಳು ಸಮಾಜದ ವಿಕಾಸದಲ್ಲಿ ಮಹತ್ತರ ಪಾತ್ರ ವಹಿಸುತ್ತಿವೆ. ಅವುಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ ಎಂದು ರಾಮಕೃಷ್ಣ ಕಾಟುಕುಕ್ಕೆ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net