ಗರಿಗೆದರಿದ ಕೃಷಿ ಚಟುವಟಿಕೆ : ಬೆಳ್ತಂಗಡಿ ತಾಲೂಕಿನಾದ್ಯಂತ ಉತ್ತಮ ಮಳೆಯಿಂದ ಉತ್ಸಾಹ : ಉಳುಮೆಗೆ ದಿನ ನಿಗದಿ

neji
ಬೆಳ್ತಂಗಡಿಯಲ್ಲಿ ಉತ್ತಮ ಮಳೆಯಿಂದ ಕೃಷಿ ಚಟುವಟಿಕೆ ಆರಂಭಗೊಂಡಿರುವುದು.
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಉತ್ತಮ ಮಳೆ ಸುರಿಯುತ್ತಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ. ಕಳೆದ ತಿಂಗಳು ಒಂದೆರಡು ಮಳೆ ಬಿದ್ದಾಗಲೇ ಸುಗ್ಗಿ ಬಿತ್ತನೆಗೆ ಗದ್ದೆಗಳನ್ನು ಉತ್ತು ಹದ ಮಾಡಿಟ್ಟಿದ್ದ ಕೃಷಿಕರು ಇದೀಗ ಅವುಗಳಿಗೆ ತರಗೆಲೆ, ಗೊಬ್ಬರ ಇತ್ಯಾದಿ ನೀಡುತ್ತಿದ್ದಾರೆ. ಗದ್ದೆಯ ಬದುಕಟ್ಟುವ, ಬಿಡಿಸುವ ಕೆಲಸವು ಆರಂಭವಾಗಿದೆ.

ಕಳೆದ ವರ್ಷ ತಡವಾಗಿ ಮಳೆ ಆದ ಕಾರಣ ಗದ್ದೆ ಕೆಲಸಗಳು ಜೂನ್ 15ರ ಬಳಿಕ ಆರಂಭವಾಗಿದ್ದರೆ ಈ ಬಾರಿ ಒಂದು ತಿಂಗಳು ಮೊದಲು ಪ್ರಾರಂಭವಾಗಿವೆ. ಮಳೆ ಹೀಗೆ ಮುಂದುವರಿದರೆ ಜೂನ್ ತಿಂಗಳ ಮೊದಲ ವಾರ ಬಿತ್ತನೆ ಕೆಲಸ ಪೂರ್ಣಗೊಳಿಸಲು ಕೃಷಿಕರು ಮುಂದಾಗಿದ್ದಾರೆ.

ಕೃಷಿ ಇಲಾಖೆಗಳಲ್ಲಿ ಬಿತ್ತನೆ ಬೀಜ ಲಭ್ಯವಿದ್ದು ಈಗಾಗಲೇ ಹಲವಾರು ರೈತರು ರಿಯಾಯಿತಿ ದರದಲ್ಲಿ ಅವುಗಳನ್ನು ಪಡೆದಿದ್ದರೆ, ಕೆಲವು ರೈತರು ಈಗ ಪಡೆಯಲು ಮುಂದಾಗಿದ್ದಾರೆ. ಉಳುಮೆಗೆ ಟಿಲ್ಲರ್, ಟ್ರ್ಯಾಕ್ಟರ್ ಮೊದಲಾದ ಯಂತ್ರಗಳನ್ನು ಸಿದ್ಧಪಡಿಸಲಾಗುತ್ತಿದೆ. ಬಾಡಿಗೆ ಯಂತ್ರೋಪಕರಣಗಳನ್ನು ಕಾಯ್ದಿರಿಸಲಾಗಿದ್ದು ಉಳುಮೆಗೆ ದಿನ ನಿಗದಿಪಡಿಸಲಾಗಿದೆ.

ಔಷಧ ಸಿಂಪಡಣೆಗೆ ಪೂರ್ವ ತಯಾರಿ

ಅಡಕೆಗೆ ಜೂನ್ ಮೊದಲ ವಾರದಲ್ಲಿ ಹೆಚ್ಚಿನ ಕಡೆ ಬೋರ್ಡೋ ಮಿಶ್ರಣ ಸಿಂಪಡಣೆ ಆರಂಭಿಸಲಾಗುತ್ತಿದೆ. ಒಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದು ಕೃಷಿಕರು ಸಿಂಪಡಣೆಯ ಪೂರ್ವ ತಯಾರಿಯಲ್ಲಿ ತೊಡಗಿದ್ದಾರೆ. ಔಷಧ ಸಿಂಪಡಿಸುವ ನುರಿತ ಕಾರ್ಮಿಕರ ಸಂಖ್ಯೆಯು ತೀರ ಕಡಿಮೆ ಇದ್ದು ಅವರನ್ನು ಬುಕ್ ಮಾಡುವ ಕೆಲಸ ಆರಂಭವಾಗಿದ್ದು ಸಿಂಪಡಣೆಗೂ ದಿನ ನಿಗದಿಪಡಿಸಲಾಗಿದೆ. ಅಡಕೆ ತೋಟಗಳನ್ನು ಬಹುವಾಗಿ ಕಾಡಿದ್ದ ನಳ್ಳಿ ಉದುರುವಿಕೆಯು ಕೊಂಚ ತಹಬದಿಗೆ ಬಂದಿದೆ. ತೋಟಗಳಲ್ಲಿ ತುಂಬಿರುವ ಗಿಡಗಂಟಿ, ಹುಲ್ಲು ತೆರವು ಕೆಲಸವನ್ನು ಆರಂಭಿಸಲಾಗಿದೆ. ಹೆಚ್ಚಿನ ಕಡೆಗಳಲ್ಲಿ ನೀರಿನ ಅಭಾವದಿಂದ ತತ್ತರಿಸಿದ್ದ ತೋಟಗಳು ಮಳೆ ಸುರಿದ ಕಾರಣ ಹಿಂದಿನ ಸ್ಥಿತಿಗೆ ಮರಳಿದ್ದು ಹಸಿರಾಗಿ ಕಂಗೊಳಿಸುತ್ತಿವೆ.

ಉತ್ತಮ ಮಳೆ

ಕಳೆದ ಒಂದು ವಾರದಿಂದ ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದೆ. ಮಳೆಯ ಜತೆ ಬೀಸಿದ ಗಾಳಿಯ ಕಾರಣ ಹಲವು ತೋಟಗಳಲ್ಲಿ ಅಡಕೆ, ರಬ್ಬರ್ ಗಿಡಗಳು ಮುರಿದುಬಿದ್ದಿವೆ. ನದಿ, ಕೆರೆ, ಬಾವಿ ಮೊದಲಾದ ಜಲಮೂಲಗಳಲ್ಲಿ ನೀರು ತುಂಬಿಕೊಂಡಿರುವುದು ಕೃಷಿ ಚಟುವಟಿಕೆಗಳಿಗೆ ಅನುಕೂಲ ನೀಡಿದೆ. ಆದರೆ ಇನ್ನೊಂದೆಡೆ ಮಳೆ ಆರಂಭವಾಗುತ್ತಿದ್ದಂತೆ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಾಗಿದೆ. ಸಣ್ಣ ಪ್ರಮಾಣದ ಗಾಳಿ, ಗುಡುಗು ಬಂದರೂ ದಿನಗಟ್ಟಲೆ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದೆ. ಗ್ರಾಮೀಣ ಭಾಗಗಳಲ್ಲಿ ಸಂಜೆ ಮಳೆಯಾಗುತ್ತಿದ್ದಂತೆ ವಿದ್ಯುತ್ ಹೋದರೆ ಬಳಿಕ ಮರುದಿನ ಬೆಳಗ್ಗೆ 8ರ ನಂತರ ಪ್ರತ್ಯಕ್ಷವಾಗುವುದು ಮಾಮೂಲಾಗಿದೆ. ಗ್ರಾಮಾಂತರ ಭಾಗದ ಜನರು ಚಿಮಣಿ ದೀಪ, ಕ್ಯಾಂಡಲ್ ಸಹಾಯದಿಂದ ರಾತ್ರಿ ಕಳೆಯುವಂತಾಗಿದೆ.

ರಬ್ಬರ್‌ಗೆ ಪ್ಲಾಸ್ಟಿಕ್

ರಬ್ಬರ್‌ಗೆ ಈ ವರ್ಷ ಕೊಂಚ ಉತ್ತಮ ದರವಿರುವ ಕಾರಣ ರಬ್ಬರ್ ಕೃಷಿಕರು ಮಳೆಗಾಲದಲ್ಲಿಯೂ, ಟ್ಯಾಪಿಂಗ್ ನಡೆಸಲು ಮುಂದಾಗಿದ್ದು, ಮರಗಳಿಗೆ ಪ್ಲಾಸ್ಟಿಕ್ ಅಳವಡಿಸಲು ಮನಸ್ಸು ಮಾಡಿದ್ದಾರೆ. ಈ ಕೆಲಸ ಆರಂಭವಾಗಿದ್ದು, ಕೆಲವು ಕಡೆ ರಬ್ಬರ್ ಟ್ಯಾಪಿಂಗ್ ಗೆ ಬಳಸುವ ಕಪ್‌ಗಳಲ್ಲಿ ನೀರು ತುಂಬಿದ್ದು ಇದನ್ನು ತೆರವುಗೊಳಿಸುವ ಅಗತ್ಯವಿದೆ. ಇಲ್ಲದಿದ್ದರೆ ಇದು ಡೆಂೆ, ಮಲೇರಿಯಾ ಮೊದಲಾದ ರೋಗಗಳಿಗೆ ಕಾರಣವಾಗುವ ಸಾಧ್ಯತೆ ಇದೆ.

ಕೂಲಿ ಕಾರ್ಮಿಕರ ಸಮಸ್ಯೆ

ಕೃಷಿಕರ ಮುಂದಿದೆ ಕೂಲಿ ಕಾರ್ಮಿಕರ ಸಮಸ್ಯೆ, ಅಗತ್ಯ ಗೊಬ್ಬರಗಳ ಅಲಭ್ಯತೆ, ಮಧ್ಯಾಹ್ನದ ಹೊತ್ತು ಆರಂಭವಾಗುವ ಮಳೆ ಕೆಲಸಗಳಿಗೆ ಅಡ್ಡಿ, ಕೃಷಿ ಸಂಬಂಧಿ ಸಾಮಗ್ರಿಗಳ ಬೆಲೆ ಗಗನಕ್ಕೆ, ಬಗೆಹರಿದ ನೀರಾವರಿ ಸಮಸ್ಯೆ, ಕಿಂಡಿ ಅಣೆಕಟ್ಟುಗಳ ಹಲಗೆ ತೆರವಿಗೆ ಮುಂದಾದ ಫಲಾನುಭವಿಗಳು, ಕೃಷಿಯಲ್ಲಿ ಯಂತ್ರೋಪಕರಣ ಬಳಕೆಗೆ ಒತ್ತು.

ಬಿತ್ತನೆಯ ಪೂರ್ವಭಾವಿ ತಯಾರಿ ಆರಂಭಿಸಲಾಗಿದ್ದು ಗದ್ದೆಗಳಲ್ಲಿ ಸಾಕಷ್ಟು ನೀರು ತುಂಬಿದ ಕೂಡಲೇ ಬಿತ್ತನೆ ಕಾರ್ಯ ಆರಂಭಿಸಲಿದ್ದೇವೆ. ಅಡಕೆ ತೋಟಕ್ಕೆ ಔಷಧ ಸಿಂಪಡಣೆಯನ್ನು ಜೂನ್ ಪ್ರಥಮ ವಾರ ಆರಂಭಿಸಲು ಯೋಚಿಸಲಾಗಿದೆ. ಔಷಧ ಸಿಂಪಡಣೆಗೆ ನುರಿತ ಕಾರ್ಮಿಕರ ಸಮಸ್ಯೆಯೂ ಇದೆ. ಸಿಂಪಡಣೆಗೆ ಯಂತ್ರಗಳಿದ್ದರೂ ಅವು ತಂತ್ರಜ್ಞಾನವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬೇಕಾದ ಅಗತ್ಯವಿದೆ.- ಬಂಡ್ರತ್ತಿಲ್ ರಮಾನಂದ ಭಟ್ಕೃಷಿಕರು, ಗುರಿಪಳ್ಳ, ನಡ ಗ್ರಾಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net