ನಿದ್ರಿಸುತ್ತಿದ್ದ ಬಾಲಕಿಯ ಅಪಹರಿಸಿದಾತ ಸೆರೆ, ಆಂಧ್ರದಿಂದ ಕೊಡಗು ನಿವಾಸಿ ಆರೋಪಿ ಸಲೀಂ ವಶಕ್ಕೆ

Pocso case
Published on

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಹೊಸದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯ ಪಡನ್ನಕ್ಕಾಡಿನ ಮನೆಯೊಳಗೆ ನಿದ್ರಿಸುತ್ತಿದ್ದ ಒಂಬತ್ತರ ಹರೆಯದ ಬಾಲಕಿಯನ್ನು ಅಪಹರಿಸಿ, ಚಿನ್ನಾಭರಣ ಕಸಿದು ದೌರ್ಜನ್ಯ ಎಸಗಿದ್ದ ಆರೋಪಿ, ಕೊಡಗು ನಾಪೊಕ್ಲು ನಿವಾಸಿ ಸಲೀಂ ಎಂಬಾತನನ್ನು ಆಂಧ್ರಪ್ರದೇಶದಿಂದ ವಶಕ್ಕೆ ಪಡೆದುಕೊಳ್ಳಲಾಗಿದೆ.
ಮೇ 15ರಂದು ನಸುಕಿನ ವೇಳೆ ಬಾಲಕಿಯ ಅಜ್ಜ ಹಾಲು ಕರೆಯಲು ಹೊರಗೆ ತೆರಳಿದ್ದಾಗ ಆರೋಪಿ ಮನೆಯೊಳಗೆ ನುಗ್ಗಿ, ನಿದ್ರಿಸುತ್ತಿದ್ದ ಬಾಲಕಿಯನ್ನು ಸುಮಾರು 500 ಮೀ. ದೂರದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಚಿನ್ನಾಭರಣ ಕಸಿದು, ದೌರ್ಜನ್ಯವೆಸಗಿ ರಸ್ತೆ ಬದಿ ಬಿಟ್ಟು ಪರಾರಿಯಾಗಿದ್ದ. ಅಲ್ಲಿಂದ ಬಾಲಕಿ ಸಮೀಪದ ಮನೆಗೆ ತೆರಳಿ ಈ ಬಗ್ಗೆ ಮಾಹಿತಿ ನೀಡಿದ್ದು, ಮನೆಯವರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ, ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣದ ತನಿಖೆಯ ವೇಳೆ 165ಕ್ಕೂ ಹೆಚ್ಚು ಸಿಸಿ ಕ್ಯಾಮರಾ ದೃಶ್ಯಾವಳಿ ಸಂಗ್ರಹಿಸಿ, ಇವುಗಳಲ್ಲಿ ಲಭಿಸಿದ ಚಿತ್ರ ಕೇಂದ್ರೀಕರಿಸಿ ಪೊಲೀಸರು ಆರೋಪಿಯ ರೇಖಾಚಿತ್ರ ತಯಾರಿಸಿ ಬಿಡುಗಡೆಗೊಳಿಸಿದ್ದರು. ಚಿತ್ರದಲ್ಲಿ ಮುಖದ ಚಹರೆ ಗೊತ್ತಾಗದಿದ್ದರೂ, ಆರೋಪಿ ಧರಿಸಿದ್ದ ಬಟ್ಟೆ ಹಾಗೂ ಆತನ ನಡಿಗೆಯಿಂದ ಸುಳಿವು ಪತ್ತೆಹಚ್ಚಲು ಸಹಕಾರಿಯಾಗಿತ್ತು. ವಶಕ್ಕೆ ಪಡೆದುಕೊಂಡಿರುವ ಆರೋಪಿ ಹಾಗೂ ರೇಖಾಚಿತ್ರಕ್ಕೆ ಸಾಮ್ಯತೆಯಿರುವುದನ್ನೂ ಪೊಲೀಸರು ಖಚಿತಪಡಿಸಿಕೊಂಡಿದ್ದಾರೆ.

ಕೇರಳದಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಚಿನ್ನಾಭರಣ ಕಳವು, ಕೊಲೆ ಇತ್ಯಾದಿ ಬಹುತೇಕ ಪ್ರಕರಣಗಳಲ್ಲಿ ಇತರ ರಾಜ್ಯಗಳ ಆರೋಪಿಗಳೇ ಹೆಚ್ಚಾಗಿದ್ದು, ಕೇರಳ ಇವರಿಗೆ ಸುರಕ್ಷಿತ ತಾಣವಾಗಿ ಬದಲಾಗಿದೆ. ಕೇರಳದಲ್ಲಿ ಇತರ ರಾಜ್ಯಗಳ ಕಾರ್ಮಿಕರಿಗೆ ನೀಡುತ್ತಿರುವ ಪರಿಗಣನೆ ದುರುಪಯೋಗಪಡಿಸಿಕೊಳ್ಳುತ್ತಿರುವುದಾಗಿಯೂ ಆರೋಪ ಕೇಳಿಬರುತ್ತಿದೆ.

ಮೊಬೈಲ್ ಬಳಸದ ಆರೋಪಿ

ಪ್ರಕರಣದ ನಂತರ ತಲೆಮರೆಸಿಕೊಂಡಿದ್ದ ಆರೋಪಿ, ಮೊಬೈಲ್ ಬಳಸುತ್ತಿರಲಿಲ್ಲ. ಕೊಡಗಿಗೆ ತೆರಳಿದರೆ ತಾಯಿಯ ಮೊಬೈಲ್ ಹಾಗೂ ಕಾಞಂಗಾಡಿನಲ್ಲಿ ಪತ್ನಿಯ ಮೊಬೈಲ್ ಮಾತ್ರ ಬಳಸುತ್ತಿದ್ದ. ಪತ್ನಿಯ ಜತೆ ರಾತ್ರಿ ವೇಳೆ ಮೊಬೈಲ್‌ನಲ್ಲಿ ಮಾತನಾಡಿದ್ದಾಗ ಪೊಲೀಸರು ಲೊಕೇಶನ್ ಕೇಂದ್ರೀಕರಿಸಿ ನಡೆಸಿದ ಕಾರ್ಯಾಚರಣೆಯಿಂದ ಆರೋಪಿಯ ಪತ್ತೆ ಸಾಧ್ಯವಾಗಿದೆ.

ಇನ್ನೊಂದು ಪೋಕ್ಸೋ ಕೇಸು

14 ವರ್ಷಗಳಿಂದ ಕಾಞಂಗಾಡಿನಲ್ಲಿ ವಾಸಿಸುತ್ತಿರುವ ಸಲೀಂ, ಇದೇ ಪ್ರದೇಶದ ಯುವತಿಯನ್ನು ವಿವಾಹವಾಗಿದ್ದ. ಪತ್ನಿಯ ಮನೆ ಬಾಲಕಿಯ ಮನೆಯ ಬಳಿಯೇ ಇದ್ದುದರಿಂದ ಆಕೆಯ ಬಾಲಕಿಯ ಚಲನವಲನದ ಬಗ್ಗೆ ಸಲೀಂಗೆ ಸಮಗ್ರ ಮಾಹಿತಿ ಇತ್ತೆನ್ನಲಾಗಿದೆ. ಆರೋಪಿ ವಿರುದ್ಧ ಮೇಲ್ಪರಂಬ ಪೊಲೀಸ್ ಠಾಣೆಯಲ್ಲಿ ಎರಡು ವರ್ಷದ ಹಿಂದೆ, ಈತನ ಸಂಬಂಧಿ ಬಾಲಕಿಗೆ ಕಿರುಕುಳ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿ ಪೋಕ್ಸೋ ಕೇಸು ದಾಖಲಾಗಿದೆ. ಆಗ ಬಾಲಕಿಯನ್ನು ಸ್ಕೂಟರಲ್ಲಿ ಕರೆದೊಯ್ದು, ಆದೂರು ಅರಣ್ಯ ಪ್ರದೇಶದಲ್ಲಿ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ದೂರು ದಾಖಲಾಗಿತ್ತು. ಸುಳ್ಯ, ಕೊಡಗು ಠಾಣೆಗಳಲ್ಲಿ ಚಿನ್ನಾಭರಣ ಕಸಿದ ಪ್ರಕರಣಗಳಿಗೂ ಸಂಬಂಧಿಸಿ ಈತನ ವಿರುದ್ಧ ಕೇಸುಗಳಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net