

ವಿರಾಜಪೇಟೆ: ಶ್ರೀ ಕೃಷ್ಣನ ಉಪದೇಶಾಮೃತವಾದ ಭಗವದ್ಗೀತೆ ಸರ್ವಕಾಲಿಕ ಸತ್ಯ. ಸನಾತನ ಧರ್ಮದಲ್ಲಿ ಭಗವದ್ಗೀತೆಯನ್ನು ಪವಿತ್ರ ಗ್ರಂಥವೆಂದು ಪರಿಗಣಿಸಲಾಗಿದೆ ಎಂದು ಹಿರಿಯ ಸಾಹಿತಿ ಕಿಗ್ಗಾಲು ಗಿರೀಶ್ ಅಭಿಪ್ರಾಯಪಟ್ಟರು.
ಕಾವೇರಿ ಗಣೇಶೊತ್ಸವ ಸಮಿತಿ ಮೂರ್ನಾಡು ರಸ್ತೆ ಹಾಗೂ ವಿರಾಜಪೇಟೆ ಲೇಖಕಿಯರ ಬಳಗದ ವತಿಯಿಂದ ಗಣೇಶೋತ್ಸವ ಸಮಿತಿ ವೇದಿಕೆಯಲ್ಲಿ ಗುರುವಾರ ನಡೆದ ಭಗವದ್ಗೀತೆ ಶ್ಲೋಕ ಮತ್ತು ಭಾವಾರ್ಥ ಪಠಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶ್ರೀ ಕೃಷ್ಣ ಕುರುಕ್ಷೇತ್ರದಲ್ಲಿ ಅರ್ಜುನನಿಗೆ ಗೀತೆಯನ್ನು ಉಪದೇಶಿಸಿದನೆಂಬ ನಂಬಿಕೆಯಿದೆ. ಈ ಮೂಲಕ ಅವರು ಜೀವನದ ಸಾರವನ್ನು ಜನರಿಗೆ ವಿವರಿಸಲು ಪ್ರಯತ್ನಿಸಿದರು. ಯಾವಾಗ ಅರ್ಜುನ ಕೌರವರ ವಿರುದ್ಧ ಹೋರಾಡಲು ಬಯಸಲಿಲ್ಲವೋ ಆಗ ಶ್ರೀ ಕೃಷ್ಣ ನೀನು ನಿರ್ಭಯವಾಗಿ ಹೋರಾಡು ಎಂದು ಹೇಳಿದನೆಂದು ಈ ಗೀತೆಯಲ್ಲಿ ಹೇಳಲಾಗಿದೆ. ಕೊಂದರೆ ಸ್ವರ್ಗ ಸಿಗುತ್ತದೆ, ಗೆದ್ದರೆ ಭೂಮಿಯನ್ನು ಆಳುವಿರಿ. ಯಾವುದೇ ಕೆಲಸದಲ್ಲಿ ಯಶಸ್ಸು ಸಿಗಬೇಕಾದರೆ ಮನಸ್ಸಿನಿಂದ ಭಯವನ್ನು ತೊಲಗಿಸಬೇಕು ಎಂದು ಹೇಳುತ್ತಾನೆ. ಗೀತೆಯ ಕೆಲವು ಶ್ಲೋಕಗಳನ್ನು ಅನುಸರಿಸಿದರೆ, ಜೀವನದಲ್ಲಿ ಅಪಾರ ಯಶಸ್ಸು ಸಾಧಿಸಬಹುದು. ಭಗವದ್ಗೀತೆ ಎಲ್ಲ ಧರ್ಮದವರಿಗೂ ಪ್ರೇರಣೆಯಾಗುವ ಗ್ರಂಥ ಎಂದರು.
ಉಪನ್ಯಾಸಕ ಎಸ್.ರಘುನಾಥ್ ಮಾತನಾಡಿ ಶ್ರೀ ಕೃಷ್ಣ ಹಾಗೂ ಸುಧಾಮನ ಬಾಂಧವ್ಯ, ಗೆಳೆತನಕ್ಕೆ ಮಾದರಿಯಾಗಿದೆ. ದೇಶದಲ್ಲಿ ಆದ್ಯ ದೇವತೆಯಾಗಿ ಪೂಜಿಸಲ್ಪಡುವ ಶ್ರೀ ಕೃಷ್ಣನ ಸಂದೇಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ವಿರಾಜಪೇಟೆ ಕಾವೇರಿ ಕಾಲೇಜು ಪ್ರಾಂಶುಪಾಲ ಡಾ. ಆನಂದ್ ಕಾರ್ಲಾ ಮಾತನಾಡಿ, ಗೀತೆಯನ್ನು ಜೀವನದ ಮಾರ್ಗದರ್ಶನ ಮತ್ತು ಮೋಕ್ಷ ಸಾಧನೆಗಾಗಿ ಅರ್ಥ ತಿಳಿದು ಪಠಿಸಬೇಕೆಂಬುದು ಪ್ರಾಜ್ಞರ ಅಭಿಮತವಾಗಿದೆ. ಶ್ರದ್ಧಾಭಕ್ತಿಯಿಂದ ಪಠಿಸುವುದು ಮೊದಲಿನಿಂದ ನಡೆದು ಬಂದ ಪದ್ಧತಿ. ಇದರಿಂದ ಬದುಕಿನ ದಾರಿ ಯಾವ ರೀತಿಯಲ್ಲಿ ಸನ್ಮಾರ್ಗದಲ್ಲಿ ನಡೆಸಬೇಕೆಂದು ತಿಳಿಯುತ್ತದೆ ಎಂದರು.
ಪತ್ರಕರ್ತ ಮುಲ್ಲೇಂಗಡ ಮಧೋಶ್ ಪೂವಯ್ಯ, ಕಾವೇರಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ಆನಂದ್ ರಾಜಪ್ಪ, ಸಾಹಿತಿ ರಜಿತಾ ಕಾರ್ಯಪ್ಪ, ವಿ.ಜಿ. ರಾಕೇಶ್, ಪುಷ್ಪಲತಾ ಶಿವಪ್ಪ ವಿಮಲಾ ದಶರಥ, ವಿದುಷಿ ಪ್ರೇಮಾಂಜಲಿ ಆಚಾರ್ಯ ಹರ್ಷಕೀರ್ತಿ, ಪ್ರಿಯಾಂಕಾ, ಅನುಷಾ ಸೇರಿದಂತೆ ಸಮಿತಿಯ ಆಡಳಿತ ಮಂಡಳಿ ಪದಾಧಿಕಾರಿಗಳು, ಶಾಲಾ, ಕಾಲೇಜಿನ ವಿದ್ಯಾರ್ಥಿಗಳು, ಪೋಷಕರು, ಸಾರ್ವಜನಿಕರು ಇದ್ದರು.
ಸಭಾ ಕಾರ್ಯಕ್ರಮದ ಬಳಿಕ ಶಾಲಾ, ಕಾಲೇಜು ಹಾಗೂ ಸಾರ್ವಜನಿಕ ವಿಭಾಗದಲ್ಲಿ ಭಗವದ್ಗೀತೆ ಶ್ಲೋಕ ಮತ್ತು ಭಾವಾರ್ಥ ಪಠಣ ಸ್ಪರ್ಧಾ ಕಾರ್ಯಕ್ರಮ ನಡೆಯಿತು. ಗಿರೀಶ್ ಕಿಗ್ಗಾಲು, ಎಸ್.ರಘುನಾಥ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.