

ದಾವಣಗೆರೆ: ತಾಲೂಕಿನ ಬಾಡಾ ಗ್ರಾಮದ ಶ್ರೀ ಮರುಳಸಿದ್ದೇಶ್ವರ ದೇವಸ್ಥಾನದಲ್ಲಿ ಜು.21 ರಂದು ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಅತ್ತಿಗೆರೆ ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷ ಎ.ಒ. ರವಿ ಹೇಳಿದರು.
ಭಾನುವಾರ ಬೆಳಗ್ಗೆ 11 ಗಂಟೆಗೆ ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಮಳೆಗಾಲದ ಬೆಳೆಗೆ ನಾಲೆಯಲ್ಲಿ ನೀರು ಹರಿಸುವ ಕುರಿತು ಚರ್ಚಿಸಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಭದ್ರಾ ಜಲಾನಯನ ಪ್ರದೇಶದಲ್ಲಿ ಸತತ ಮಳೆಯಾಗುತ್ತಿದ್ದು, ಜಲಾಶಯದ ನೀರಿನ ಮಟ್ಟ ಗಣನೀಯ ಏರಿಕೆಯಾಗುತ್ತಿದೆ. ಸರ್ಕಾರ ತಕ್ಷಣ ಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ಕರೆದು ನೀರು ಬಿಡುವ ದಿನಾಂಕ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.
ರೈತರು ಆಗಸ್ಟ್ 20 ರೊಳಗೆ ಭತ್ತದ ನಾಟಿ ಮಾಡಿದರೆ ಉತ್ತಮ ಇಳುವರಿ ಬರಲು ಸಾಧ್ಯ. ಹೀಗಾಗಿ, ಸರ್ಕಾರ ಐಸಿಸಿ ಸಭೆ ನಡೆಸುವುದರ ಬಗ್ಗೆ ನಿರ್ಲಕ್ಷೃ ವಹಿಸದೆ ಡ್ಯಾಂನಲ್ಲಿರುವ ನೀರಿನ ಲಭ್ಯತೆಗೆ ಅನುಗುಣವಾಗಿ ನೀರು ಹರಿಸಲು ತೀರ್ಮಾನಿಸಬೇಕು ಎಂದರು.
ಭದ್ರಾ ರಿವರ್ ಸ್ಲಿವ್ ಗೇಟ್‌ನಿಂದ ಸಾವಿರಾರು ಕ್ಯೂಸೆಕ್ ನೀರು ಪೋಲಾಗುತ್ತಿದ್ದು, ತಕ್ಷಣ ನೀರು ಸೋರಿಕೆ ತಡೆಗಟ್ಟಲು ಕ್ರಮ ವಹಿಸಬೇಕು. ಭದ್ರಾ ನಾಲೆಗಳ ದುರಸ್ತಿಪಡಿಸಬೇಕು ಹಾಗೂ ತುಂಗಾ ಬೈಪಾಸ್‌ನಿಂದ ಭದ್ರಾ ಡ್ಯಾಂಗೆ ಸೇರಿಸುವ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.
ಸಿದ್ದೇಶ್, ಶರಣಪ್ಪ, ಸಿ.ಡಿ. ಮಹೇಂದ್ರ ರಾಮಗೊಂಡನಹಳ್ಳಿ, ಕೆ.ಜೆ. ರಂಗನಾಥ್ ಸುದ್ದಿಗೋಷ್ಠಿಯಲ್ಲಿದ್ದರು.