

ಬಾಗಲಕೋಟೆ: ಬ್ರಾಹ್ಮಣ ಹಾಗೂ ಪ್ರಲ್ಹಾದ ಜೋಶಿ ಕುರಿತು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ನೀಡಿರುವ ಹೇಳಿಕೆಯಿಂದ ಬಿಜೆಪಿ ತಲ್ಲಣಗೊಂಡಿಲ್ಲ. ಗೊಂದಲವು ಮೂಡಿಲ್ಲ ಎಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು.
ನಗರದ ಬಿಟಿಡಿಎ ಸಭಾಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಕುಮಾರಸ್ವಾಮಿ ಜಾತ್ಯಾತೀತ ಜನತಾದಳ ಪಕ್ಷದವರು. ಜಾತಿಯನ್ನು ಎತ್ತಿ ಮಾತನಾಡುವದು ಎಷ್ಟು ಸಮಂಜಸ? ಈ ಹೇಳಿಕೆ ಖಂಡನೀಯ ಎಂದರು.
ಜಾತೀಯತೆಯ ಕುರಿತು ಮಾತನಾಡುವದು ಯಾರಿಗೂ ಶೋಭೆ ತರುವದಲ್ಲ. ಇದು ಅವರಿಗೆ ಶೋಭೆ ತರುವದ್ದಲ್ಲ, ಜಾತಿ, ಉಪಜಾತಿಗಳ ಬಗ್ಗೆ ಮಾತನಾಡುವದು ತಪ್ಪು, ಇವೆಲ್ಲವೂ ಸೂಕ್ಷ್ಮ ವಿಷಯವಾಗಿವೆ. ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಸ್ವಧರ್ಮ ನಿಷ್ಠೆ, ಪರಧರ್ಮ ಸಹಿಷ್ಣುತೆ, ಅದನ್ನು ಪ್ರತಿಯೊಬ್ಬರೂ ಕಲಿಯಬೇಕು ಎಂದು ಹೇಳಿದರು.
ಅರ್ಹತೆ ಇದ್ದವರು ಸಿಎಂ ಆಗಿಯೇ ಆಗುತ್ತಾರೆ. ಇದೆಲ್ಲ ಹೈಕಮಾಂಡ್‌ಗೆ ಬಿಟ್ಟ ವಿಷಯ. ಈ ಹಿಂದೆ ರಾಮಕೃಷ್ಣ ಹೆಗಡೆ, ಗುಂಡೂರಾಯರು ಸಿಎಂ ಆಗಿದ್ದಾರೆ. ನಮ್ಮ ಬಿಜೆಪಿ ಹೈಕಮಾಂಡ್ ಗಟ್ಟಿಯಾಗಿದೆ. ಸುಭದ್ರವಾಗಿದೆ. ಅವರು ನಿರ್ಣಯ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.
ಬಿ.ಎಸ್. ಯಡಿಯೂರಪ್ಪ ಅವರು ಸೈಡ್‌ಲೈನ್ ಆಗುತ್ತಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಚರಂತಿಮಠ, ಯಡಿಯೂರಪ್ಪನವರೊಡನೆ ಕೂಡಿ ಕುಮಾರಸ್ವಾಮಿ ಅವರು ಈ ಹಿಂದೆ ಸರ್ಕಾರ ರಚನೆ ಮಾಡಿ ಆಡಳಿತ ನಡೆಸಿದ್ದಾರೆ. ಅವರನ್ನು ಸಿಎಂ ಸ್ಥಾನದಲ್ಲಿ ಇರಲು ಬಿಡಲಿಲ್ಲ. ಈಗ ಯಡಿಯೂರಪ್ಪನವರ ಮೇಲೆ ಕುಮಾರಸ್ವಾಮಿಗೆ ಪ್ರೀತಿ ಬಂದಂತಿಂದೆ. ಅವರ ಓಲೈಕೆ ಮಾಡಲು, ಸಿಂಪತಿ ಗಿಟ್ಟಿಸಿಕೊಳ್ಳಲು ಇಂತಹ ಹೇಳಿಕೆ ನೀಡುತ್ತಿದ್ದಾರೆ ವಿನಹಃ ಇದರಲ್ಲಿ ಸತ್ಯವಿಲ್ಲ ಎಂದು ಹೇಳಿದರು.