

ಬಾಗಲಕೋಟೆ: ಇತ್ತೀಚಿಗೆ ನಡೆದ ಸಭೆಯೊಂದರಲ್ಲಿ ತಮ್ಮ ರಾಜಕೀಯ ವಿರೋಧಿಗಳ ವಿರುದ್ದ ಗುಡುಗಿದ್ದ ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಅವರು, ಕಾಮದೇನು ಸಂಸ್ಥೆಯ ಬಗ್ಗೆ ಟೀಕೆ ಮಾಡಿದ್ದನ್ನು ವಿರೋಧಿಸಿ ಶುಕ್ರವಾರ ಸಂಸ್ಥೆಯ ಪದಾಧಿಕಾರಿಗಳ ಶಾಸಕರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಬಾಗಲಕೋಟೆ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ರವಿ ಕುಮಟಗಿ, ಕರೊನಾ ವೇಳೆ ಜನರಿಗೆ ಸೇವೆ ಮಾಡಲು ಉದಯವಾಗಿದ್ದು ಕಾಮಧೇನು ಸಂಸ್ಥೆ. ತೀವ್ರ ಸಂಕಷ್ಟದಲ್ಲಿ ಇದ್ದ ರೈತರು ಹಾಗೂ ಜನರ ನಡುವೆ ಸೇತುವೆಯಾಗಿ ಸಂಸ್ಥೆ ಸೇವೆ ಮಾಡಿದೆ. ಲಾಭದ ಉದ್ದೇಶಕ್ಕಾಗಿ ಅಲ್ಲ. ಲಾಭ ಮಾಡಿಕೊಳ್ಳಲು ನನಗೆ ಸಾಕಷ್ಟು ವ್ಯವಹಾರಗಳು ಇವೆ. ಯಾರಿಗೆ ಏನು ಮಾತನಾಡುತ್ತಿರುವೆ ಎಂದು ತಿಳಿದುಕೊಂಡು ನಿಮ್ಮ ವರ್ತನೆ ತಿದ್ದಿಕೊಳ್ಳಿ ಎಂದು ಚುಚ್ಚಿದರು.
ಇನ್ನು ಸುದ್ದಿಗೋಷ್ಠಿಯಲ್ಲಿ ಶಾಸಕ ವೀರಣ್ಣ ಚರಂತಿಮಠ ಅವರ ಸಹೋದರ, ಬಿಜೆಪಿ ಉಚ್ಛಾಟಿತ ಮುಖಂಡ ಮಲ್ಲಿಕಾರ್ಜುನ ಚರಂತಿಮಠ ಅವರು ತೀವ್ರ ವಾಗ್ದಾಳಿ ನಡೆಸಿದರು. ವೈಯಕ್ತಿಕವಾಗಿಯೂ ಹಾಗೂ ಬಿಜೆಪಿ ಮತ್ತು ಬಿವಿವಿ ಸಂಘದ ವಿಚಾರಗಳನ್ನು ಒಂದೊಂದಾಗಿ ಹೆಕ್ಕಿ ಹೆಕ್ಕಿ ಅಣ್ಣನ ವಿರುದ್ದ ಆರೋಪಗಳ ಸುರಿಮಳೆಗೈದರು.
ಶಾಸಕರ ಹೆಸರನ್ನು ಹೇಳದೇ ಏಕವಚನ ದಲ್ಲಿಯೇ ನೇರವಾಗಿ ತಮ್ಮ ಆಕ್ರೋಶ ಹೊರಹಾಕಿದ್ದಲ್ಲದೇ ಮಾತು ಮಾತಿಗೂ ವ್ಯಂಗ್ಯ, ಲೇವಡಿ, ಚುಚ್ಚು ಮಾತುಗಳನ್ನು ಹರಿಬಿಟ್ಟು, ಅನೇಕ ಘಟನಾವಳಿಗನ್ನು ಬಿಚ್ಚಿಟ್ಟರು. ಶಾಸಕನಾಗಿ ಬಾಗಲಕೋಟೆ ಅಭಿವೃದ್ದಿ, ಕಾರ್ಯಾಧ್ಯಕ್ಷರಾಗಿ ಬಿವಿವಿ ಸಂಘದ ಅಭಿವೃದ್ದಿ ನೀವೊಬ್ಬರೆ ಮಾಡಿದ್ದಲ್ಲ ಎಂದು ನೇರವಾಗಿಯೇ ಕುಟುಕಿದರು.
ಮೂರು ಸಲ ಶಾಸಕನಾಗಿ ನಾಲ್ಕು ರಸ್ತೆ ಮಾಡಿದ್ದರೆ ಎಸ್.ಎಂ.ಜಾಮದಾರ ಅವರು ಪುನರ್ ವಸತಿ ಆಯುಕ್ತರಾಗಿ ಇಲ್ಲಿ ೪೦೦ ರಸ್ತೆ ನಿರ್ಮಾಣ ಮಾಡಿದ್ದಾರೆ. ಅಧಿಕಾರಕ್ಕೆ ಬಂದಾಗ ಆ ರಸ್ತೆ ಮೇಲೆ ಡಾಂಬರï ಹಾಕಿ, ಬಣ್ಣ ಬಳಿದಿದ್ದೀರಿ ಅಷ್ಟೆ. ಅದು ನಿರಂತರ ಕೆಲಸ. ಹಾಗೆಯೇ ಬಿವಿವಿ ಸಂಘದ ಬೆಳವಣಿಗೆಗೆ ಅನೇಕ ಹಿರಿಯರು ತ್ಯಾಗ, ದಾನ ಮಾಡಿದ್ದಾರೆ. ಸಂಘ ಹಾಗೂ ಪಕ್ಷ ಎರಡೂ ಕಡೆಗೂ ಮೋಸ ಮಾಡಿದ್ದೀರಿ ಎಂದು ಆರೋಪಿಸಿದರು.
ನೀವು ಬಂದ ಮೇಲೆ ಇಲ್ಲಿ ಅಭಿವೃದ್ದಿ ಆಗಿದೆ ಎನ್ನುತ್ತಿದ್ದೀರಿ. ಬಾಗಲಕೋಟೆ ಕ್ಷೇತ್ರ ನೀವು ಶಾಸಕರಾಗುವ ಮುಂಚೆಯೂ ಇತ್ತು. ಶಾಸಕರೂ ಇದ್ದರು. ಅವರು ಏನು ಮಾಡಿಯೇ ಇಲ್ಲವೇನು ಎಂದು ಪ್ರಶ್ನಿಸಿದರು. ೧೫ ವರ್ಷ ಶಾಸಕರಾಗಿದ್ದಾಗ ಕಿಲ್ಲಾ ನಡುಗಡ್ಡೆ ಒಂದನ್ನೇ ಸ್ಥಳಾಂತರ ಮಾಡಲು ಆಗಿಲ್ಲ ಟೀಕಿಸಿದರು.
ಎರಡು ಸಲ ಶಾಸಕರಾಗಿದ್ದ ಪಿ.ಎಚ್.ಪೂಜಾರ ಅವರು ಹಾಲಿ ಶಾಸಕರಿದ್ದಾಗಲೇ ಅವರಿಗೆ ಟಿಕೆಟ್ ತಪ್ಪಿಸಿ ನಿಮಗೆ ಕೊಟ್ಟಿದ್ದು, ಈಗ ಅದೇ ಮಾದರಿ ಆಗಲಿ ಎಂದು ನಾವು ಹೇಳಿದ್ದೇವೆ. ಪಕ್ಷ ಬಿಟ್ಟು ಹೋಗಿದ್ದವರು ಯಾರೂ ತಾವಾಗಿಯೇ ಬಂದಿಲ್ಲ. ಅವರ ಮನೆಗೆ ಹೋಗಿ ಹಾರ ಹಾಕಿ ಕರೆದುಕೊಂಡು ಬಂದಿದ್ದ ನೀನು ಎಂದು ಹಳೇ ಪೋಟೋಗಳನ್ನು ಪ್ರದರ್ಶಿಸಿದರು. ಹಾಗೆಂದು ನಾವಂತೂ ನಿಮ್ಮ ಜೊತೆ ಬರಲ್ಲ ಎಂದು ಸ್ಪಷ್ಟವಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂತೋಷ ಹೊಕ್ರಾಣಿ, ವಿಜಯ ಸುಲಾಕೆ, ಬಸವರಾಜ ಕಟಗೇರಿ, ಶಿವು ಮೇಲ್ನಾಡ ಇದ್ದರು.
ಹಿರಿಯರಿಗೂ ಹೇಳಿದ್ದೇವೆ:
ಬಾಗಲಕೋಟೆ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ. ಅಭ್ಯರ್ಥಿ ಬದಲಾವಣೆ ಮಾಡಿ ಎಂದು ನಾವು ಪಕ್ಷದ ಹಿರಿಯರ ಗಮನಕ್ಕೆ ತಂದಿದ್ದೇವೆ. ಅವರು ನಿಮ್ಮ ಕೆಲಸ ನೀವು ಮಾಡಿ ಎಂದಿದ್ದಾರೆ. ಹಿರಿಯರು ಹೇಳಿದಂತೆ ಕೇಳುತ್ತೇವೆ. ಆದರೆ, ಈ ಅಭ್ಯರ್ಥಿ ಹೊರತುಪಡಿಸಿ ಎಂದ ಅವರು, ಹಾಲಿ ಶಾಸಕರಿಗೆ ಟಿಕೆಟ್ ಕೊಟ್ಟರೆ ತಮ್ಮ ಗುಂಪಿನಲ್ಲಿ ಯಾರು ಅಭ್ಯರ್ಥಿಯಾಗಬೇಕು ಎಂದು ನಮ್ಮ ಹಿರಿಯರ ಜೊತೆ ಚರ್ಚೆ ಮಾಡುತ್ತೇವೆ ಎಂದರು.