

ಬಾಗಲಕೋಟೆ: ಅರ್ಹತೆ ಹಾಗೂ ಸಮಾಜಮುಖಿ ಆಗಿದ್ದರೆ ಬ್ರಾಹ್ಮಣರು ಸಿಎಂ ಆಗಲು ಅಡ್ಡಿಯಿಲ್ಲ. ಆದರೆ, ಯಾರೋ ವ್ಯಕ್ತಿಗಳು ಕುಳಿತು ಇಂತವರೆ ಸಿಎಂ ಆಗಬೇಕು, ಇಂತವರು ಆಗಬಾರದು ಎಂದರೆ ಅದು ಪ್ರಜಾಪ್ರಭುತ್ವ ಆಗಲ್ಲ, ಡಿಕ್ಟೇಟರಶಿಫ ಆಗುತ್ತೆ ಎಂದು ಮಂತ್ರಾಲಯ ರಾಘವೇಂದ್ರಮಠ ಪೂಜ್ಯ ಸುಬುದೇಂದ್ರಶೀರ್ಥ ಶ್ರೀಪಾದಂಗಳವರು ಹೇಳಿದ್ದಾರೆ.
ಬಾಗಲಕೋಟೆ ನಗರದಲ್ಲಿ ದಿಗ್ವಿಜಯ ಯಾತ್ರೆಗೆ ಆಗಮಿಸಿರುವ ಪೂಜ್ಯರು ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದರು.
ಬ್ರಾಹ್ಮಣ ಸಿಎಂ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆಗೆ ತೀಕ್ಷ್ಣ ಹಾಗೂ ಖಾರವಾಗಿಯೇ ಪ್ರತಿಕ್ರಿಯಿಸಿರುವ ಶ್ರೀಗಳು, ವ್ಯಕ್ತಿಗತವಾಗಿ ಯಾರು ಸಿಎಂ ಆಗಬೇಕು, ಆಗಬಾರದು ಎಂದು ನಿರ್ಣಯ ಮಾಡುವುದು ಮತದಾರರು ಹಾಗೂ ಪಕ್ಷಗಳ. ಮತದಾರರು ಪ್ರಲ್ಹಾದ ಜೋಶಿ ಆಗಬಾರದು ಎಂದರೆ ಅದರ ಬಗ್ಗೆ ವಿಚಾರ ಬೇರೆ ಎಂದರು.
ನಾವೆಲ್ಲ ಒಂದೇ ತಾಯಿಯ ಭಾರತಾಂಬೆ ಮಕ್ಕಳು. ಅದರಲ್ಲಿ ದೊಡ್ಡಮಗ, ಸಣ್ಣಮಗ, ಮಗಳು ಎನ್ನುವ ಬೇರೆ ಬೇರೆ ಪ್ರಾಂತಗಳು ಇರಬಹುದು. ಆದರೆ, ನಾವೆಲ್ಲ ಭಾರತೀಯರು ಎಂದಾಗ ಎಲ್ಲರು ಅಣ್ಣ ತಮ್ಮಂದಿರು. ಪರಸ್ಪರ ರಾಜ್ಯಗಳಲ್ಲಿ, ಜಾತಿಗಳಲ್ಲಿ, ವ್ಯಕ್ತಿಗಳಲ್ಲಿ ಭಿನ್ನಾಭಿಪ್ರಾಯಗಳು ಬಂದರೆ ಅದು ದೇಶದ ಅಭಿವೃದ್ದಿಗೆ, ಜನರ ಕಲ್ಯಾಣಕ್ಕೆ ಅಡ್ಡಿಯಾಗುತ್ತದೆ ಎಂದು ಶ್ರೀಗಳು ಕಿವಿಮಾತು ಹೇಳಿದರು.
ಜಾತಿ ರಾಜಕಾರಣ ಎಲ್ಲ ಕಡೆಗೆ ತೊಲಗಬೇಕು. ಸಂವಿಧಾನ ಇಂತವರೇ ಸಿಎಂ ಆಗಬೇಕು ಎಂದು ಎಲ್ಲೂ ಹೇಳಿಲ್ಲ. ಡಾ. ಅಂಬೇಡ್ಕರï ಅವರು ಎಲ್ಲ ಜನಾಂಗಕ್ಕೂ ಸರಿಯಾದ ಅವಕಾಶ ನೀಡಿದ್ದಾರೆ. ಇಂತ ಹೇಳಿಕೆ ನೀಡಿದರೆ ಅದು ಸಂವಿಧಾನ ವಿರೋಧಿ ಆಗುತ್ತದೆ. ಬ್ರಾಹ್ಮಣ ಸಮುದಾಯ ಎಲ್ಲರ ಕ್ಷೇಮ ಕೋರುವವರು. ಯಾರೇ ಆಗಲಿ ಬ್ರಾಹ್ಮಣರನ್ನು ನಿಂದಿಸಿದರೆ ಅದನ್ನು ಸಂಪೂರ್ಣವಾಗಿ ಖಂಡಿಸುತ್ತೇವೆ. ಯಾವ ಸಮುದಾಯವನ್ನು ಯಾರೂ ತೆಗಳಬಾರದು. ಹೀಗೆ ತೆಗಳಿದರೆ ಅದು ಸಂವಿಧಾನಕ್ಕೆ ಅಗೌರವ ಕೊಟ್ಟಂತಾಗುತ್ತದೆ. ಬ್ರಾಹ್ಮಣ ಸಮುದಾಯ ಇನ್ನೊಂದು ಸಮಾಜದ ವಿರೋಧಿಯಲ್ಲ ಎಂದರು.
ಎಚ್ಡಿಕೆ, ಎಚ್ಡಿಡಿ ದೈವ ಭಕ್ತರು : ಎಚ್.ಡಿ.ಕುಮಾರಸ್ವಾಮಿ, ದೇವೇಗೌಡರು ದೈವ ಭಕ್ತರು. ಬ್ರಾಹ್ಮಣರು, ಗುರುಹಿರಿಯರಲ್ಲಿ ಅತ್ಯಂತ ಶ್ರದ್ಧಾಭಕ್ತಿ ಇರುವಂತವರು. ಎಚ್ಡಿಕೆ ದಂಪತಿ ಇತ್ತೀಚಿಗೆ ಮಂತ್ರಾಲಯಕ್ಕೆ ಆಗಮಿಸಿ, ರಾಯರ ಸೇವೆ ಹಾಗೂ ಆಶೀರ್ವಾದ ಪಡೆದಿದ್ದರೆ. ಅವರು ಯಾವತ್ತೂ ಕೂಡ ಬ್ರಾಹ್ಮಣರ ಬಗ್ಗೆ ಹಗುರವಾಗಿ ಮಾತನಾಡಿಲ್ಲ ಎಂದು ಭಾವಿಸಿದ್ದೇವೆ. ಒಂದೊಮ್ಮೆ ಅವರು ಹಾಗೆ ಮಾತನಾಡಿದ್ದರೆ ಯಾವ ಹಿನ್ನಲೆಯಲ್ಲಿ ಮಾತನಾಡಿದ್ದಾರೆಂದು ನಾವು ಪರಿಶೀಲಿಸಬೇಕಿದೆ. ಈಗಾಗಲೇ ಅವರು ತಮ್ಮ ಮಾತಿನ ವಿವರಣೆಯನ್ನು ನೀಡಿದ್ದಾರೆ. ಇದನ್ನು ನಾವು ಒಂದು ಜಾತಿಯ ವಿಚಾರವಾಗಿ ತೆಗೆದುಕೊಂಡು ದೇಶ, ರಾಜ್ಯದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣ ಮಾಡಬಾರದು ಎಂದು ಸುಬುದೇಂದ್ರ ಶ್ರೀಪಾದಂಗಳು ಸಲಹೆ ನೀಡಿದ್ದಾರೆ.
ಹಿಂದೂ ಎಂದ ಮೇಲೆ ಹಿಂದೂತ್ವ ಆಧರಿಸಬೇಕು :
ನಾನು ಹಿಂದೂ ಆದರೆ ಹಿಂದುತ್ವ ಒಪ್ಪಲ್ಲ ಎನ್ನುವ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಮಂತ್ರಾಲಯ ಶ್ರೀಗಳು, ಈ ದ್ವಂದ್ವ ಹೇಳಿಕೆಯಲ್ಲಿ ಅರ್ಥವಿಲ್ಲ. ನಾನು ಹಿಂದೂ ಎಂದ ಮೇಲೆ ಹಿಂದೂತ್ವವನ್ನು ಆರಾಽಸಲೇಬೇಕು. ಹಿಂದುತ್ವದ ವಿಚಾರದಲ್ಲಿ ಅವರಿಗೆ ಸ್ವಲ್ಪ ಅಭಿಪ್ರಾಯಬೇಧ ಇರಬಹುದೇ ಹೊರತು ಹಿಂದೂಗಳೆಲ್ಲರೂ ಹಿಂದುತ್ವವನ್ನು ಆಧರಿಸಲೇಬೇಕು ಎಂದು ಸಿದ್ದುಗೆ ತಿರುಗೇಟು ನೀಡಿದ್ದಾರೆ.
ಹಿಂದೂಗಳಲ್ಲಿ ಇರುವುದು ಹಿಂದುತ್ವ. ನನ್ನ ತಾಯಿ ಅನ್ನುವುರು, ಅವಳು ನಿಸ್ಸಾಂತನ ಉಳ್ಳವಳು ಎನ್ನುವುದು ಎಷ್ಟೊಂದು ಅಪಹಾಸ್ಯ. ತಾಯಿ ಎಂದ ಮೇಲೆ ಅವಳಿಗೆ ನೀನು ಸಂತಾನ ಎಂದಾಯಿತಲ್ಲ ಎಂದರು. ನಾನು ಹಿಂದೂ ಎಂದ ಮೇಳೆ ಹಿಂದುತ್ವವನ್ನು ಗೌರವಿಸಬೇಕು. ಯಾವುದಾದರೂ ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ಇದ್ದರೆ ವಿಚಾರ ವಿನಿಮಯ ಮಾಡಿಕೊಂಡು ಪರಿಹರಿಸಿಕೊಳ್ಳಬೇಕು. ಹಿಂದೂ ಎಂದು ಹೇಳಿ, ಹಿಂದುತ್ವ ವಿರೋಧಿಸುತ್ತೇನೆ ಎನ್ನುವುದು ಅರ್ಥಹೀನ ಎಂದು ತಿಳಿಸಿದರು.