

ಬಾಗಲಕೋಟೆ: ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ವಿದ್ಯಾ ಸಿಂಹಾನಾಧೀಶ್ವರ ೧೦೦೮ ಸುಬಧೇಂದ್ರತೀರ್ಥ ಶ್ರೀಪಾದಂಗಳವರು ಕೈಗೊಂಡಿರುವ ದಿಗ್ವಿಜಯ ಯಾತ್ರೆಗೆ ಸೋಮವಾರ ಸಂಜೆ ಕೋಟೆನಗರಿ ಪ್ರವೇಶಿಸಿದ್ದು, ಭವ್ಯವಾಗಿ ಸ್ವಾಗತ ಕೋರಲಾಯಿತು. ಅಪಾರ ಭಕ್ತರ ಸಮೂಹದ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.
ನಗರದ ಹೊಳೇ ಆಂಜನೇಯ ದೇವಸ್ಥಾನಕ್ಕೆ ಆಗಮಿಸಿದ ಸುಬಧೇಂದ್ರತೀರ್ಥ ಶ್ರೀಪಾದಂಗಳವರು ವಿಶೇಷ ಪೂಜೆ ಸಲ್ಲಿಸಿದ ಬಳಿಕ ಆರಂಭವಾದ ಶೋಭಾಯತ್ರೆಗೆ ಪಟಾಕಿ ಸಿಡಿಸಿ ಸ್ವಾಗತಿಸಲಾಯಿತು. ಹೊಳೆ ಆಂಜನೇಯ ದೇವಸ್ಥಾನದಿಂದ ಎಂ.ಜಿ.ರಸ್ತೆ, ಸರ್ದಾರ್ ವಲ್ಲಭಬಾಯಿ ಪಟೇಲ್ ಚೌಕ್, ಕೊತ್ತಲೇಶ ದೇವಸ್ಥಾನ ಮೂಲಕ ವೇದಿಕೆಗೆ ತಲುಪಿತು. ಶ್ರೀಗಳಿಗೆ ಅಲ್ಲಲ್ಲಿ ಪುಷ್ಪ ವೃಷ್ಠಿಗೈದು ಭಕ್ತಿ ಮೆರೆಯಲಾಯಿತು.
ರ್ಣ ಕುಂಭ ಸ್ವಾಗತ, ವೇದಘೋಷಗಳು, ವಿವಿಧ ಭಜನಾ ಮಂಡಳಿಗಳು, ಕೋಲಾಟ, ಚಂಡಿ ಮೊದಲ ವಾದ್ಯ ಮೇಳಗಳ ವೈಭವ ಕಳೆಗಟ್ಟುವಂತೆ ಮಾಡಿತು. ಬೆಳ್ಳಿರಥದಲ್ಲಿ ಶ್ರೀಪಾದಂಗಳುವರು ಸಾಗುತ್ತಿದ್ದಂತೆ ಎರಡು ಬದಿಯಲ್ಲಿ ನಿಂತಿದ್ದ ಭಕ್ತ ಸಮೂಹ ಕೈ ಮುಗಿದು ನಮಿಸಿದರು. ಶ್ರೀಗಳು ಅಲ್ಲಿಂದಲೇ ಭಕ್ತರಿಗೆ ಆಶೀರ್ವಾದ ನೀಡುತ್ತಿದ್ದ ದೃಶ್ಯ ಆನಂದ ಉಂಟು ಮಾಡಿತು. ಪಂಡಿತರಿಂದ ವೇಧ ಘೋಷಗಳು ಮೊಳಗಿದವು. ಭಕ್ತರು ಹೆಜ್ಜೆ ಹಾಕುತ್ತಾ ಜಯ, ಘೋಷಣೆಗಳನ್ನು ಕೂಗಿದರು.