ಮತ್ತೇ ಶುರುವಾರ ಬೆಟ್ಟಿಂಗ್ ಭರಾಟೆ

b rural
Published on

ಲೆಕ್ಕಾಚಾರಕ್ಕೆ ಸಿಗುತ್ತಿಲ್ಲ ಬೆಂ.ಗ್ರಾಮಾಂತರ ಮಂಡ್ಯ ಫಲಿತಾಂಶಕ್ಕೂ ಬಾಜಿ ಅಂದಾಜು 50ಕೋಟಿ ಅಖಾಡ ಲೆಕ್ಕ



* ಗಂಗಾಧರ್ ಬೈರಾಪಟ್ಟಣ ರಾಮನಗರ
ಲೋಕಸಮರದ ಫಲಿತಾಂಶ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಮತದಾನ ಮುಗಿದು ಸುಮಾರು ಒಂದು ತಿಂಗಳಿಂದ ತಣ್ಣಗಿದ್ದ ಬೆಟ್ಟಿಂಗ್ ಈಗ ಮತ್ತೆ ಶುರುವಾಗಿದೆ.

ಹಣ ಮಾಡುವ ಪ್ರಮುಖ ಅಸ್ತ್ರವಾಗಿರುವ ಬಾಜಿ ಕಟ್ಟುವ ಆಟದಲ್ಲಿ ಚುನಾವಣೆ ಸಹ ಹೊರತಾಗಿಲ್ಲ. ಕ್ರಿಕೆಟ್‌ನಲ್ಲಿ ಪ್ರತಿ ಟಾಸ್‌ನಿಂದ ಆರಂಭಗೊಂಡು, ಪ್ರತಿ ಬಾಲ್‌ನ ಲೆಕ್ಕಾಚಾರದಲ್ಲಿ ಬೆಟ್ಟಿಂಗ್ ನಡೆಯುತ್ತದೆ. ಅದೇ ರೀತಿ ಈ ಲೋಕಸಭೆ ಚುನಾವಣೆಯಲ್ಲಿಯೂ ಬೂತ್‌ನಿಂದ ಆರಂಭಗೊಂಡು, ರಾಜ್ಯದಲ್ಲಿ ಯಾವ ಪಕ್ಷ ಎಷ್ಟು ಸ್ಥಾನಗಳನ್ನು ಪಡೆದುಕೊಳ್ಳಲಿದೆ ಎನ್ನುವ ಹಂತದವರೆಗೂ ಬಾಜಿ ಶುರುವಾಗಿದೆ.

ಮಂಡ್ಯದ ಲೆಕ್ಕಾಚಾರ

: ಜಿಲ್ಲೆಯ ಕನಕಪುರ ಮತ್ತು ಚನ್ನಪಟ್ಟಣ ತಾಲೂಕಿನ ಬಹುತೇಕ ಭಾಗಗಳು ಮಂಡ್ಯ ಜಿಲ್ಲೆಯ ಗಡಿಯನ್ನು ಹಂಚಿಕೊಂಡಿವೆ. ಹಿಂದೆ ಮಂಡ್ಯದಲ್ಲಿ ಸಾಕಷ್ಟು ಚುನಾವಣೆಗಳು ನಡೆದಿದ್ದರೂ, 2019 ಮತ್ತು 2024 ಚುನಾವಣೆ ಪಡೆದಷ್ಟು ಮಹತ್ವ ಬೇರೆ ಚುನಾವಣೆಗಳಿಗೆ ದೊರೆತಿರಲಿಲ್ಲ. ಕಳೆದ ಬಾರಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಮತ್ತು ಅಂಬರೀಷ್ ಪತ್ನಿ ಸುಮಲತಾ ಅವರ ಸ್ಪರ್ಧೆಯಿಂದ ರಂಗು ಪಡೆದಿದ್ದ ಕ್ಷೇತ್ರ, ಈ ಬಾರಿ ಎಚ್.ಡಿ.ಕುಮಾರಸ್ವಾಮಿ ಅವರ ಸ್ಪರ್ಧೆಯಿಂದ ಮಹತ್ವ ಪಡೆದುಕೊಂಡಿದೆ.

ಜೆಡಿಎಸ್ ಭದ್ರ ಕೋಟೆ ಮಂಡ್ಯ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೈ ವಶವಾಯಿತು. ಈ ಹಿನ್ನೆಲೆಯಲ್ಲಿ ಈ ಬಾರಿ ಕುಮಾರಸ್ವಾಮಿ ಅವರೇ ಸ್ಪರ್ಧೆ ಮಾಡಿರುವ ಕಾರಣ, ಗೆಲುವು ಯಾರ ಪಾಲಾಗಲಿದೆ ಎನ್ನುವ ಬೆಟ್ಟಿಂಗ್ ರಾಮನಗರ ಜಿಲ್ಲೆಯಲ್ಲಿಯೂ ಜೋರಾಗಿಯೇ ನಡೆದಿದೆ. ಇದರಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಹಾಟ್ ಫೇವರಿಟ್ ಆಗಿದ್ದಾರೆೆ.

ಲೆಕ್ಕಕ್ಕೆ ಸಿಗುತ್ತಿಲ್ಲ

ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರ ಈ ಬಾರಿ ಹೈ ವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದು. ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅವರ ಸ್ಪರ್ಧೆಯಿಂದ ಈ ಕ್ಷೇತ್ರದ ಚುನಾವಣೆ ಚಿತ್ರಣವೇ ಬದಲಾಯಿತು. ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರಿಗೆ ಅನಿರೀಕ್ಷಿತ ಪ್ರಬಲ ಎದುರಾಳಿ ಎದುರಾದರು.

ಮತದಾನ ಮುಗಿದಿದ್ದು, ಈಗ ಈ ಕ್ಷೇತ್ರದಲ್ಲಿ ಸೋಲು-ಗೆಲುವಿನ ಬೆಟ್ಟಿಂಗ್ ಆರಂಭಗೊಂಡಿದೆ. ಆರಂಭದಲ್ಲಿ ಮಂಜುನಾಥ್ ಅವರ ಪರವಾಗಿ ಇದ್ದ ವಾತಾವರಣ, ಕಳೆದ ಎರಡು ಮೂರು ದಿನಗಳಿಂದ ಡಿ.ಕೆ.ಸುರೇಶ್ ಅವರ ಪರವಾಗಿ ತಿರುಗಿದೆ. ಡಿ.ಕೆ.ಸುರೇಶ್ ಗೆಲುವು ಸಾಧಿಸಲಿದ್ದಾರೆ ಎಂದು ಅವರ ಬೆಂಬಲಿಗರು ಬೆಟ್ಟಿಂಗ್‌ಗೆ ಆಹ್ವಾನ ನೀಡುತ್ತಿದ್ದಾರೆ. ಇದು ಬಿಜೆಪಿ - ಜೆಡಿಎಸ್ ಪರವಾಗಿ ಬೆಟ್ಟಿಂಗ್ ಕಟ್ಟಲು ಸಿದ್ಧವಿರುವವರು ಸೋಲು-ಗೆಲುವಿನ ಲೆಕ್ಕಾಚಾರ ಸಿಗದೆ ಕೊಂಚ ಹಿಂಜರಿಯುವಂತೆ ಮಾಡಿದೆ.

ಬೂತ್ ಮಟ್ಟಕ್ಕೂ ಬೆಟ್ಟಿಂಗ್


ರಾಮನಗರ ಜಿಲ್ಲೆಯಲ್ಲಿ ಈ ಬಾರಿ ಬೂತ್‌ಮಟ್ಟಕ್ಕೂ ಸಹ ಬೆಟ್ಟಿಂಗ್ ಇಳಿದಿದೆ. ಯಾವ ಬೂತ್‌ನಲ್ಲಿ ಯಾರು ಎಷ್ಟು ಮತ ಪಡೆದುಕೊಳ್ಳಲಿದ್ದಾರೆ ಎಂದು ಲಕ್ಷಾಂತರ ರೂಪಾಯಿ ಬೆಟ್ಟಿಂಗ್ ಕಟ್ಟುತ್ತಿದ್ದಾರೆ. ಇದರ ನಂತರ ವಿಧಾನಸಭೆ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿಗೆ ಲೀಡ್ ಸಿಗಲಿದೆ. ಇಂತಿಷ್ಟೇ ಮತಗಳನ್ನು ಅಭ್ಯರ್ಥಿಗಳು ಪಡೆದುಕೊಳ್ಳಲಿದ್ದಾರೆ ಎಂದು ಬಾಜಿ ಕಟ್ಟಲಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್ ಪರವಾಗಿ 60:40 ಅನುಪಾತದಲ್ಲಿ ಕೆಲವು ಕಡೆಗಳಲ್ಲಿ ಬೆಟ್ಟಿಂಗ್ ಕಟ್ಟಲಾಗುತ್ತಿದೆ. ಹೀಗೆ ಈಗಾಗಲೇ ಸುಮಾರು 50 ಕೋಟಿ ರೂ. ಬೆಟ್ಟಿಂಗ್ ಅಖಾಡದಲ್ಲಿ ಪಣವಾಗಿ ಇಡಲಾಗಿದೆ ಎಂದು ತಿಳಿದು ಬಂದಿದೆ.

ರಂಗು ಪಡೆದುಕೊಳ್ಳಲಿದೆ
ತಿಂಗಳಿಂದ ತಣ್ಣಗಿದ್ದ ಬೆಟ್ಟಿಂಗ್ ಅಖಾಡ ಮತ ಎಣಿಕೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಮತ್ತಷ್ಟು ರಂಗು ಪಡೆದುಕೊಳ್ಳಲಿದೆ. ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರ ಫಲಿತಾಂಶದ ಮೇಲೆ ಕ್ಷೇತ್ರದ ಹೊರಗಿನವರೂ ಸಹ ಹಣ ಹೂಡಿಕೆ ಮಾಡಲು ಮುಂದೆ ಬರಲಿದ್ದಾರೆ ಎನ್ನಲಾಗುತ್ತಿದೆ. ಅಂತಿಮ ದಿನದವರೆಗೆ ಸುಮಾರು 250 ಕೋಟಿ ರೂ. ಬೆಟ್ಟಿಂಗ್‌ನಲ್ಲಿ ಹೂಡಿಕೆ ಆಗಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net