

ಬೆಳ್ತಂಗಡಿ : ಎಸ್‌ಡಿಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕ ವಿರಾಟ್ ಪದ್ಮನಾಭ ಬರೆದಿರುವ ‘ಬೆಟ್ಟದ ಹೂವು: ಆಧುನಿಕ ಭಾರತದ ಸಾಮಾಜಿಕ ರಾಮಾಯಣ’ ಶೀರ್ಷಿಕೆಯ ರಕ್ಷಾಪುಟವನ್ನು ಬೆಂಗಳೂರಿನ ಕ್ಷೇಮವನದ ಮುಖ್ಯಕಾರ್ಯನಿರ್ವಹಕಾಧಿಕಾರಿ ಶ್ರದ್ಧಾ ಅಮಿತ್ ಶನಿವಾರ ಬಿಡುಗಡೆಗೊಳಿಸಿದರು.
ಕೃತಿಯ ಲೇಖಕ ವಿರಾಟ್ ಪದ್ಮನಾಭ ‘ಬೆಟ್ಟದ ಹೂವು’ ಸಿನಿಮಾದ ಮಹತ್ವ ತಿಳಿಸಿದರು. ‘ಬೆಟ್ಟದ ಹೂವು’ ಚಲನಚಿತ್ರ ರಾಮನನ್ನು ಸಾಕ್ಷಾತ್ಕರಿಸುತ್ತಲೇ ವ್ಯಕ್ತಿತ್ವ ರೂಪಿಸಿಕೊಳ್ಳುವ ಅವಕಾಶ ತೆರೆದಿಡುತ್ತದೆ. ಗ್ರಾಮೀಣ ಅಭ್ಯುದಯದ ಸಾಧ್ಯತೆಯ ಎಳೆಗಳು ಈ ಸಿನೆಮಾದಲ್ಲಿದೆ ಎಂದರು.
ಗ್ರಾಮೀಣಾಭಿವೃದ್ಧಿ ಯೋಜನೆ ಮೂಲಕ ಸಮಾಜಕ್ಕೆ ಕೊಡುಗೆ ನೀಡುತ್ತಿರುವ ವೀರೇಂದ್ರ ಹೆಗ್ಗಡೆ ಮತ್ತು ತರಗತಿಯ ಬೋಧನೆ ಕ್ಷಣಗಳನ್ನು ಅಮೂಲ್ಯಗೊಳಿಸುವ ವಿದ್ಯಾರ್ಥಿಗಳಿಗೆ ಪುಸ್ತಕ ಅರ್ಪಿಸಿದ್ದೇನೆ. ಸ್ನೇಹ ಬುಕ್‌ಹೌಸ್‌ನ ಕೆ.ವಿ.ಪರಶಿವಪ್ಪ ಈ ಕೃತಿ ಶೀಘ್ರದಲ್ಲಿ ಹೊರತರಲಿದ್ದಾರೆ. ಕೃತಿಯ ಮುಖಪುಟದಚಿತ್ರ ವಿನ್ಯಾಸ ಸ್ಯಾನ್ರಿಟಾ ಮಾಡ್ತಾ ರೂಪಿಸಿದ್ದಾರೆ. ಮುಖಪುಟ ಮತ್ತು ರಕ್ಷಾಪುಟ ವಿನ್ಯಾಸ ಕೇಶವ ಕುಡುವಳ್ಳಿ ಅವರದ್ದಾಗಿದೆ ಎಂದರು.
ಎಸ್‌ಡಿಎಂ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎಕುಮಾರ ಹೆಗ್ಡೆ, ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ವಿಶ್ವನಾಥ ಪಿ.ಮತ್ತು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಮುಖ್ಯಸ್ಥ ಡಾ.ಭಾಸ್ಕರ ಹೆಗಡೆ ಉಪಸ್ಥಿತರಿದ್ದರು.