

ಬೆಂಗಳೂರು: ಬೆಸ್ಕಾಂ ವ್ಯಾಪ್ತಿಯ ವಿದ್ಯುತ್ ಕಂಬಗಳಲ್ಲಿ ಅಳವಡಿಸಿರುವ ಅನಧಿಕೃತ ಒಎಫ್ಸಿ ಕೇಬಲ್, ಡೇಟಾ ಕೇಬಲ್ ಹಾಗೂ ಡಿಶ್ ಕೇಬಲ್ಗಳನ್ನು 8ರೊಳಗಾಗಿ ತೆರವುಗೊಳಿಸಲು ಇಂಟರ್ನೆಟ್ ಸೇವಾ ಕಂಪನಿಗಳು ಹಾಗೂ ಟಿವಿ ಕೇಬಲ್ ಆಪರೇಟರ್ಗಳಿಗೆ ಬೆಸ್ಕಾಂ ಸೂಚಿಸಿದೆ.
ಸಂಬಂಧಪಟ್ಟವರು ಅನಧಿಕೃತವಾಗಿ ಅಳವಡಿಸಿರುವ ಕೇಬಲ್ಗಳನ್ನು ತೆರವುಗೊಳಿಸದಿದ್ದರೆ, ಬೆಸ್ಕಾಂ ಅವುಗಳನ್ನು ಯಾವುದೇ ಮುನ್ಸೂಚನೆ ನೀಡದೆ ತೆರವುಗೊಳಿಸಲಿದೆ. ಬಳಿಕ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿದೆ. ಅನಧಿಕೃತ ಕೇಬಲ್ಗಳಿಂದ ವಿದ್ಯುತ್ ಅವಡಗಳು ಸಂಭವಿಸಿದ್ದಲ್ಲಿ ಸಂಬಂಧಿಸಿದವರನ್ನೇ ನೇರ ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಸಿದೆ.
ಬೆಸ್ಕಾಂ ಕಳೆದ ವರ್ಷ ಆಗಸ್ಟ್ನಲ್ಲಿ ವಿದ್ಯುತ್ ಕಂಬಗಳಲ್ಲಿ ಅಳವಡಿಸಿರುವ ಅನಧಿಕೃತ ಕೇಬಲ್ ತೆರವು ಸಂಬಂಧ ವಿಶೇಷ ಕಾರ್ಯಾಚರಣೆ ಕೈಗೊಂಡಿತ್ತು. ಅನಧಿಕೃತ ಕೇಬಲ್ ತೆರವಿಗೆ ಒಂದು ವಾರ ಗಡುವು ನೀಡಿತ್ತು. ಈ ವಿಶೇಷ ಕಾರ್ಯಾಚರಣೆ ಹೊರತಾಗಿಯೂ ಅನಧಿಕೃತ ಕೇಬಲ್ಗಳನ್ನು ವಿದ್ಯುತ್ ಕಂಬಗಳ ಮೇಲೆ ಅಳವಡಿಸಲಾಗುತ್ತಿದೆ ಆದ್ದರಿಂದ ಬೆಸ್ಕಾಂ ಮತ್ತೆ ಈ ಗಡುವು ನೀಡಿದೆ.