

ಕಂಪ್ಲಿ: ತಾಲೂಕು ಕೇಂದ್ರವಾಗಿ ಐದು ವರ್ಷವಾದರೂ ಪಟ್ಟಣದಲ್ಲಿ ಬಿಇಒ ಕಚೇರಿ ಆರಂಭಗೊಂಡಿಲ್ಲ. ಹೀಗಾಗಿ ವಿವಿಧ ದಾಖಲೆ ಹಾಗೂ ಶೈಕ್ಷಣಿಕ ಕಾರ್ಯಕ್ಕಾಗಿ ವಿದ್ಯಾರ್ಥಿಗಳು, ಶಿಕ್ಷಕರು ಹೊಸಪೇಟೆಗೆ ಅಲೆದಾಡಬೇಕಾಗಿದೆ.
ಕಂಪ್ಲಿ ಪಟ್ಟಣ 2018ರ ಮಾ.6ರಂದು ತಾಲೂಕು ಕೇಂದ್ರವಾಗಿ ಹೊರಹೊಮ್ಮಿತು. ಎಮ್ಮಿಗನೂರು ಕ್ಲಸ್ಟರ್ ಹೊರತುಪಡಿಸಿ 99 ಶಾಲೆಗಳಿವೆ. ಇದರಲ್ಲಿ ಸರ್ಕಾರಿ ಶಾಲೆ, ಕಾಲೇಜುಗಳು 49, ಅನುದಾನಿತ ಶಾಲೆ 6, ಅನುದಾನರಹಿತ ಶಾಲೆ 42, ಮುರಾರ್ಜಿ ದೇಸಾಯಿ ವಸತಿ ಶಾಲೆ ಎರಡು ಇವೆ. ಸುಮಾರು 272 ಪ್ರಾಥಮಿಕ ಶಾಲೆ ಶಿಕ್ಷಕರು, 90 ಜನ ಪ್ರೌಢಶಾಲೆ ಶಿಕ್ಷಕರಿದ್ದಾರೆ.
ಭೌಗೋಳಿಕವಾಗಿ ಕಂಪ್ಲಿ ತಾಲೂಕು ಬಳ್ಳಾರಿ ಜಿಲ್ಲೆಯಲ್ಲಿ ಉಳಿದಿದ್ದರೂ ನೂತನ ವಿಜಯನಗರ ಜಿಲ್ಲೆಯಲ್ಲಿಯೇ ಶಿಕ್ಷಣ ಇಲಾಖೆಯ ಆಡಳಿತ ಮುಂದುವರೆದಿದೆ. 2023ರ ಏಪ್ರಿಲ್ ಮತ್ತು ಪೂರಕ ಎಸ್ಸೆಸ್ಸೆಲ್ಸಿ ಪರೀಕ್ಷೆಗಳ ಉಸ್ತುವಾರಿ ಮಾತ್ರ ಬಳ್ಳಾರಿ ಪಶ್ಚಿಮ ವಲಯದ ಬಿಇಒ ಕಚೇರಿ ನಿರ್ವಹಿಸಿದೆ. ಇಷ್ಟಲ್ಲದೆ, ಎಮ್ಮಿಗನೂರು ಕ್ಲಸ್ಟರ್ ಕಂಪ್ಲಿ ತಾಲೂಕಿಗೆ ಸೇರಿದ್ದರೂ ಬಳ್ಳಾರಿ ಪಶ್ಚಿಮ ವಲಯ ಕಚೇರಿ ವ್ಯಾಪ್ತಿಗೊಳಪಟ್ಟಿದೆ. ಇದರಿಂದಾಗಿ ತಾಲೂಕಿನ ಶೈಕ್ಷಣಿಕ ಆಡಳಿತ ಮತ್ತು ನಿರ್ವಹಣೆಯಲ್ಲಿ ತಾಂತ್ರಿಕ ತೊಡಕು ಎದುರಾಗಿದ್ದು, ಶಿಕ್ಷಕರು, ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ಹಿಂದೆ 2021ರ ಆ.12ರಂದು ಬೆಂಗಳೂರಿನ ಜಂಟಿ ನಿರ್ದೇಶಕರು ನೂತನ ತಾಲೂಕಿನಲ್ಲಿ ಬಿಇಒ ಕಚೇರಿ ಆರಂಭಿಸಲು ಹೆಚ್ಚುವರಿ ಹುದ್ದೆಗಳನ್ನು ಸ್ಥಳಾಂತರಿಸಿ ಆದೇಶ ಹೊರಡಿಸಿದ್ದರು. ಶಿಕ್ಷಕರ ಸಂಘಟನೆ, ಪ್ರಗತಿಪರ ಸಂಘಟನೆಗಳು ಸಹ ಹೋರಾಟ ನಡೆಸಿದರೂ ಬಿಇಒ ಕಚೇರಿ ಆರಂಭಕ್ಕೆ ಮುಹೂರ್ತ ಕೂಡಿ ಬಂದಿಲ್ಲ. ಶಿಕ್ಷಕರ ಸಂಘಟನೆಗಳು ಬಿಇಒ ಕಚೇರಿಗಾಗಿ ಇಲ್ಲಿನ ಐತಿಹಾಸಿಕ ಸೋಮಪ್ಪ ದೇವಸ್ಥಾನ ಬಳಿಯ ಸರ್ಕಾರಿ ಹಿಪ್ರಾ ಶಾಲೆ ಆವರಣದಲ್ಲಿ ಕಟ್ಟಡ ಗುರುತಿಸಿದ್ದರು. ಇದೀಗ ಷಾ.ಮಿಯಾಚಂದ್ ಸರ್ಕಾರಿ ಪ್ರೌಢಶಾಲೆ ಕೊಠಡಿಯನ್ನು ಬಿಇಒ ಕಚೇರಿಗೆ ನಿಯೋಜಿಸಿ ನಾಮಫಲಕ ಬರೆಸಿದ್ದಾರೆ. ಆದರೆ, ಕಾರ್ಯಾರಂಭವಾಗಿಲ್ಲ. ಪರಿಣಾಮ ಗ್ರಾಮೀಣ ವ್ಯಾಸಂಗ ದೃಢೀಕರಣ, 371(ಜೆ) ಸೇರಿ ದಾಖಲೆಗಳ ಮೇಲೆ ರುಜುಗಾಗಿ, ಶಿಕ್ಷಕರ ವೇತನ, ಮುಂಬಡ್ತಿ ಸೇರಿ ವಿವಿಧ ದಾಖಲೆ, ಶೈಕ್ಷಣಿಕ ಕಾರ್ಯಚಟುವಟಿಕೆ, ತರಬೇತಿ ಇತರ ಕಾರಣಗಳಿಗಾಗಿ ಹೊಸಪೇಟೆ ಬಿಇಒ ಕಚೇರಿಗೆ ಅಲೆಯಬೇಕಿದೆ.
ಕಂಪ್ಲಿಯಲ್ಲಿ ಬಿಇಒ ಕಚೇರಿ ಆರಂಭಕ್ಕಾಗಿ ಬೆಂಗಳೂರಿನ ಆಯುಕ್ತರ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಹಿತಿ ನೀಡಿದ್ದೇನೆ. ಬಿಇಒ ಕಚೇರಿಗಾಗಿ ಕಟ್ಟಡ ಗುರುತಿಸಿರುವ ಬಗ್ಗೆ ತಿಳಿಸಿದ್ದೇನೆ. ಬಿಇಒ ಕಚೇರಿ ಆರಂಭ ಸರ್ಕಾರದ ಮಟ್ಟದಲ್ಲಿದೆ. ಶೀಘ್ರ ಆರಂಭಕ್ಕೆ ಆದೇಶ ದೊರೆಯುವ ಸಾಧ್ಯತೆಗಳಿವೆ.ಅಂದಾನಪ್ಪ ಎಂ.ವಡಿಗೇರಿಡಿಡಿಪಿಐ. ಬಳ್ಳಾರಿ
ಕಂಪ್ಲಿಯಲ್ಲಿ ಬಿಇಒ ಕಚೇರಿ ಆರಂಭಿಸುವಂತೆ ಎಂಎಲ್‌ಸಿ ಶಶೀಲ್ ಜಿ.ನಮೋಶಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬಿಇಒ ಕಚೇರಿ ಆರಂಭಕ್ಕೆ ಮಂಜೂರಾತಿ ದೊರೆತು, ಹುದ್ದೆಗಳ ಸೃಜನೆಯಾಗಬೇಕಿದೆ. ವಿಜಯನಗರ ನೂತನ ಜಿಲ್ಲೆ ರಚನೆ ಹಿನ್ನೆಲೆಯಲ್ಲಿ ಕಂಪ್ಲಿ ತಾಲೂಕನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಬಿಇಒ ಕಚೇರಿ ಆರಂಭಕ್ಕೆ ಸರ್ಕಾರ ಹಸಿರು ನಿಶಾನೆ ತೋರಬೇಕಿದೆ.ಟಿ.ಎಂ.ಬಸವರಾಜತಾಲೂಕು ಅಧ್ಯಕ್ಷ, ಪ್ರೌಢಶಾಲೆ ಸಹಶಿಕ್ಷಕರ ಸಂಘ, ಕಂಪ್ಲಿ
ಕಂಪ್ಲಿಯಲ್ಲಿ ಬಿಇಒ ಕಚೇರಿ ಆರಂಭದ ಕುರಿತು ಬಜೆಟ್ ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇನೆ. ಸಂಬಂಧಿಸಿದ ಸಚಿವರನ್ನು ಭೇಟಿ ಮಾಡಿ ಮನವರಿಕೆ ಮಾಡುತ್ತೇನೆ.ಜೆ.ಎನ್.ಗಣೇಶ್ಶಾಸಕ, ಕಂಪ್ಲಿ