ಆಳಂದ(ಕಲಬುರಗಿ): ತಾಲೂಕಿನಲ್ಲಿ ಬುಧವಾರ ನಸುಕಿನ ಜಾವ ಸುರಿದ ಭಾರಿ ಮಳೆಗೆ ಉಕ್ಕಿ ಹರಿದ ಬೆಣ್ಣೆತೊರಾ ನದಿ ನೀರಿನಡಿ ಸಿಲುಕಿ ೧೩ ಜಾನುವಾರುಗಳು ಅಸುನೀಗಿದ್ದು, ೧೦ ಮನೆಗಳ ಗೋಡೆ ಭಾಗಶಃ ಕುಸಿದಿದೆ. ಹೊಲದ ಶೆಡ್‌ಗಳಲ್ಲಿ ಕಟ್ಟಿದ್ದ ಜಾನುವಾರುಗಳು ಉಕ್ಕಿ ಹರಿದ ಬೆಣ್ಣೆತೊರಾ ನೀರಿನಲ್ಲಿ ಸಿಲುಕಿ ಕಮಲಾನಗರದಲ್ಲಿ ಕಲ್ಯಾಣಿ ಶೇರಳೆ ಅವರ ೨ ಎತ್ತು, ಸಾವಳಗಿ(ಕೆ) ಅಶೋಕ ಪಾಟೀಲ್ ೨ ಎಮ್ಮೆ, ಬೆಳಮಗಿಯ ಸರಸ್ವತಿ ತೋಳನೂರೆ ೨ ಎಮ್ಮೆ, ಮಲ್ಲಿನಾಥ ಭಂಗೆ ೧ ಎಮ್ಮೆ, ಅಂಬಿಕಾ ಡೋಲೆ ೧ ಎತ್ತು , ಸಂಜುಕುಮಾರ ಪವಾರ್ ೧ ಆಕಳು, ಕಲ್ಯಾಣಿ ಮೊಟೆ ಆಕಳು, ಹೋರಿ ಕರು, ಚಂದ್ರಕಾAತ ಮೊಟೆ ಎಮ್ಮೆ ಅಸುನೀಗಿದರೆ, ಕೋತನಹಿಪ್ಪರಗಾದಲ್ಲಿ ಸಿಡಿಲಿಗೆ ನಾಗನಾಥ ರತ್ನಾಜಿ ಅವರ ಎಮ್ಮೆ ಬಲಿಯಾಗಿದೆ. ವರುಣಾರ್ಭಟಕ್ಕೆ ಹೆಬಳಿ, ಮುನ್ನಹಳ್ಳಿ, ಕೊಡಲಹಂಗರಗಾ, ಜಿಡಗಾ ಸೇರಿ ಕೆಲ ಗ್ರಾಮಗಳಲ್ಲಿ ಮನೆ ಗೋಡೆಗಳು ಭಾಗಶಃ ಕುಸಿದಿವೆ. ರುದ್ರವಾಡಿ-ಹೊದಲೂರ, ಬೆಳಮಗಿ, ವಿ.ಕೆ.ಸಲಗರ ರಸ್ತೆ ಸಂಚಾರ ಕಡಿತಗೊಂಡಿದೆ.