ರೈತರನ್ನು ಏಕೆ ನೇಣಿಗೆ ಹಾಕಲು ಹೊರಟಿದ್ದೀರಿ?

ಬಿಡದಿಯಿಂದ ಆರಂಭಗೊಂಡ ಎರಡನೇ ದಿನದ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಪ್ರಧಾನಿ ಎಚ್ . ಡಿ ದೇವೇಗೌಡರು.
ಬಿಡದಿಯಿಂದ ಆರಂಭಗೊಂಡ ಎರಡನೇ ದಿನದ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಪ್ರಧಾನಿ ಎಚ್ . ಡಿ ದೇವೇಗೌಡರು.
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕಿಡಿ
  • ಬಿಡದಿ ಸಮಗ್ರ ಉಪನಗರ ಯೋಜನೆ ವಿರೋಧ
  • ರೈತರ ಹೊಟ್ಟೆ ಮೇಲೆ ಹೊಡೆದು, ಯಾರಿಗೆ ಕೊಡಲು ಬಿಡದಿ ಯೋಜನೆ?

ಬಿಡದಿ/ರಾಮನಗರ

ರೈತರ ಹೊಟ್ಟೆ ಮೇಲೆ ಹೊಡೆದು, ಯಾರಿಗೆ ಕೊಡಲು ಬಿಡದಿ ಯೋಜನೆ ಮಾಡುತ್ತಿದ್ದೀರಿ ಎನ್ನುವ ಸತ್ಯವನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಒತ್ತಾಯಿಸಿದರು.

ಬಿಡದಿ ಸಮಗ್ರ ಉಪನಗರ ಯೋಜನೆ ವಿರುದ್ಧ ಹಮ್ಮಿಕೊಂಡಿದ್ದ ಪಾದಯಾತ್ರೆಯ ಎರಡನೇ ದಿನ ಪಾಲ್ಗೊಂಡು ಮಾತನಾಡಿದ ಅವರು, ದೇವೇಗೌಡ, ಎಚ್‌ಡಿಕೆ ನಂತರ ಮತ್ತೊಬ್ಬ ನಾಯಕ ಬೆಳೆಯಬಾರದೆಂದು ತಮ್ಮ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎನ್ನುವ ಅಸತ್ಯವನ್ನು ಪದೇಪದೆ ಹೇಳುವ ಮೂಲಕ ಡಿ.ಕೆ.ಶಿವಕುಮಾರ್, ಬಿಡದಿ ಯೋಜನೆ ಜಾರಿ ಮಾಡಲು ಮುಂದಾಗಿದ್ದಾರೆ. ಆದರೆ, ರಾಜ್ಯದಲ್ಲಿ ಯಾರೇ ಅಧಿಕಾರ ನಡೆಸಿದರೂ ತಕರಾರರು ಇಲ್ಲ. ಈ ಹಿಂದೆ ಸಿದ್ದರಾಮಯ್ಯ 16 ಬಜೆಟ್ ಮಂಡಿಸಿದರೂ ಅವರಿಗೆ ವಿರೋಧ ಮಾಡಲಿಲ್ಲ. ಈಗ ನೀವು ಅಧಿಕಾರಕ್ಕೆ ಬಂದು ಕೇವಲ 60 ದಿನ ಆಗಿದೆ, ನಿಮ್ಮ ವಿರುದ್ಧ ನಾವೇಕೇ ಹೋರಾಟ ಮಾಡಬೇಕು ಎಂದು ದೇವೇಗೌಡರು ಪ್ರಶ್ನಿಸಿದರು.

ರಾಜ್ಯದಲ್ಲಿ ಉಪ ಮುಖ್ಯಮಂತ್ರಿಯಾಗಿ, ಪಕ್ಷದ ರಾಜ್ಯಾಧ್ಯಕ್ಷರಾಗಿ ನೀವು ಕೆಲಸ ಮಾಡಿದ್ದೀರಿ, ಅಂದು ಜಾರಿಗೆ ತರದ ಯೋಜನೆಯನ್ನು ಈಗ ಮಾಡಲು ಹೊರಟಿರುವ ಹಿಂದಿನ ಕಾರಣ ತಿಳಿಸಿ, ರೈತರನ್ನು ಏಕೆ ನೇಣಿಗೆ ಹಾಕಲು ಹೊರಟಿದ್ದೀರಿ ಎಂದು ಟೀಕಿಸಿದರು.

ಇನ್ನೂ ಎರಡು ವರ್ಷ ಅವಕಾಶ ಇದೆ. ರಾಜ್ಯಭಾರ ಮಾಡಿ ನಮಗೆ ಅಸಮಾಧಾನ ಇಲ್ಲ. ಆದರೆ, ಕುಮಾರಸ್ವಾಮಿ ಯೋಜನೆ ಎಂದು ಸುಳ್ಳು ಹೇಳುತ್ತಾ, ಸಣ್ಣ ಹಿಡುವಳಿ ಜಮೀನಿನಲ್ಲಿಯೇ ಬದುಕು ಕಟ್ಟಿಕೊಂಡಿರುವ ರೈತರ ಮನೆ ಹಾಳು ಮಾಡಲು ಹೊರಿಟಿದ್ದೀರಿ. ಬೆಂಗಳೂರಿನ ಬಿಡಿಎನಲ್ಲಿಯೇ 20 ಸಾವಿರ ಸೈಟ್‌ಗಳು ಖಾಲಿ ಇವೆ ಎಂದು ಸ್ವತಃ ಸತೀಶ್ ಜಾರಕೀಹೊಳಿ ಅವರೇ ಹೇಳಿದ್ದಾರೆ. ವಿವಿಧ ಬಡಾವಣೆಗಳಲ್ಲಿ ಸಹಸ್ರಾರು ನಿವೇಶನಗಳು ಖಾಲಿ ಇವೆ, ಇವುಗಳನ್ನು ಖರೀದಿಸಲು ಯಾರೂ ಮುಂದೆ ಬರುತ್ತಿಲ್ಲ. ಇಂತಹ ಸನ್ನಿವೇಶದಲ್ಲಿ ಬಿಡದಿಯಲ್ಲಿ ನಮಗೆ ನಿವೇಶನ ಕೊಡಿ ಎಂದು ಬಿಡದಿ, ರಾಮನಗರ, ಬೆಂಗಳೂರಿನಿAದ ಬಂದು ಯಾರಾದರೂ ಕೇಳಿದ್ದಾರಾ ಎಂದು ದೇವೇಗೌಡರು ಪ್ರಶ್ನೆ ಮಾಡಿದರು.

ಈಗ ರೈತರಿಗೆ ಮೂರು ಕೋಟಿ ರೂ. ಪರಿಹಾರ ಕೊಡುತ್ತೇವೆ ಎಂದು ಸಿಎಂ ಹೇಳುತ್ತಿದ್ದಾರೆ. ಇಲ್ಲಿನ ರೈತರಿಗೆ ಪರಿಹಾರ ಕೊಡುವ ಬದಲು, ಕನಕಪುರದಲ್ಲಿ ಪರಿಹಾರ ಕೊಟ್ಟು ಇದೇ ಯೋಜನೆಯನ್ನು ಮಾಡಿ ನೋಡೋಣ? ಇಲ್ಲಿ ಯಾಕೆ ಬಂದು ಬಡವರ ಹೊಟ್ಟೆ ಮೇಲೆ ಹೊಡೆಯುತ್ತೀರಿ? ಇದರ ಹಿಂದಿನ ಉದ್ದೇಶವೇನು ಎಂದರು.

ದೇಹಕ್ಕೆ ವಯಸ್ಸಾಗಿದೆ

ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಲು ದೇವೇಗೌಡ, ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಬಿಡುವುದಿಲ್ಲ. ನನಗೆ ಈಗ 93 ವರ್ಷ. ಆದರೆ ಇದು ನನ್ನ ದೇಹಕ್ಕೆ ಆಗಿರೋ ವಯಸ್ಸು, ನನ್ನ ಮನಸ್ಸಿಗೆ ಅಲ್ಲ, ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ದೇವೇಗೌಡರು ಗುಡುಗಿದರು.

ಸಿಎಂ ಆಗಲು ದೆಹಲಿಯಲ್ಲಿ ಯಾರಿಗೆ ಏನು ಭರವಸೆ ಕೊಟ್ಟು ಬಂದಿದ್ದರೋ? ಯಾವ ಸಹಾಯ ಮಾಡುತ್ತೇನೆ ಎಂದಿದ್ದೀರೋ? ಇಲ್ಲಿನ ರೈತರ ಹೊಟ್ಟೆ ಮೇಲೆ ಹೊಡೆದು ಯಾರಿಗೆ, ಯಾವ ಕಂಪನಿಗೆ ಕೊಡಲಿಕ್ಕೆ, ಲೇಔಟ್ ಮಾಡಲು ಬಂದಿದ್ದೀರಿ ಎನ್ನುವ ಸತ್ಯವನ್ನು ಮುಖ್ಯಮಂತ್ರಿ ಹೇಳಬೇಕು.
| ಎಚ್.ಡಿ.ದೇವೇಗೌಡರು, ಮಾಜಿ ಪ್ರಧಾನಿ

ಯಾವ ಕಾರಣಕ್ಕೆ ಪೆನ್ ಪೇಪರ್ ಕೇಳಿದ್ದೀರಿ...!

ಚುನಾವಣಾ ಪ್ರಚಾರದ ವೇಳೆ ಜಿಲ್ಲೆಯ ಜನರಿಂದ ಪೆನ್ನು, ಪೇಪರ್ ಕೇಳಿದ್ದ ಡಿ.ಕೆ. ಶಿವಕುಮಾರ್ ಅವರೇ, ಈಗ ನೀವೇ ಸಿಎಂ ಅಧಿಕಾರದಲ್ಲಿದ್ದೀರಿ. ಆ ಪೆನ್ನು ಮತ್ತು ಪೇಪರ್ ಅನ್ನು ಯಾರ ಉದ್ದಾರಕ್ಕಾಗಿ ಬಳಸುತ್ತಿದ್ದೀರಿ. 33 ಸಾವಿರ ಕೋಟಿ ರೂಪಾಯಿ ಮಾಡಲು ಪೆನ್ನು, ಪೇಪರ್ ಬಳಸುತ್ತಿದ್ದೀರಾ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪ್ರಶ್ನಿಸಿದರು.

ಒಕ್ಕಲಿಗ ನಾಯಕರು ಸಿಎಂ ಆದರೆ ನಮ್ಮ ಕುಟುಂಬ ಸಹಿಸಲ್ಲ ಎಂದು ಹೇಳುತ್ತೀರಿ. ಆದರೆ, ದೇವೇಗೌಡರು ನಿಮಗೂ ಒಳ್ಳೆಯ ಕೆಲಸ ಮಾಡಿ ಎಂದು ಹಾರೈಸಿದ್ದಾರೆ. ನೀವು ಅಧಿಕಾರಕ್ಕೆ ಬಂದಿದ್ದಕ್ಕೆ ನಮಗೇನೂ ಹೊಟ್ಟೆಕಿಚ್ಚಿಲ್ಲ. ಆದರೆ, ನಿಮ್ಮ ಅಧಿಕಾರ ಜನಪರವಾಗಿದೆಯೇ ಎಂದು ಆತ್ಮಾವಲೋಕನ ಮಾಡಿಕೊಳ್ಳಿ. ಕನಕಪುರದಲ್ಲಿ ರೈತರಿಗೆ ಜಮೀನು ಮಾರಬೇಡಿ ಚಿನ್ನದ ಬೆಲೆ ಬರುತ್ತದೆ ಎಂದು ಹೇಳುವ ನೀವೇ ಈ ಭಾಗದ ರೈತರ ಜಮೀನನ್ನು ಕಬಳಿಸಲು ಮುಂದಾಗಿದ್ದೀರಿ. ಹಿಂದೆ ಎಕರೆಗೆ 2 ಕೋಟಿ ರೂ. ಕೊಡುವುದಾಗಿ ಹೇಳಿದ್ದವರು, ಈಗ ದಿಢೀರನೆ 3 ಕೋಟಿ ರೂ. ಕೊಡುವುದಾಗಿ ಏಕೆ ಘೋಷಿಸಿದಿರಿ ಎಂದು ಪ್ರಶ್ನೆ ಮಾಡಿದರು.

ನಿಮ್ಮ ಬಳಿ ಹಣ ಇದೆಯಾ?

ಈ ಯೋಜನೆ ಜಾರಿಗೆ ತರಲು ನಿಮ್ಮ ಬಳಿ ಹಣವಿದೆಯೆ? ಇದ್ದರೆ ದಾಖಲೆ ಬಿಡುಗಡೆ ಮಾಡಿ. 13 ಸಾವಿರ ಕೋಟಿ ಹಣ ಬೇಕೆಂದು ಹೇಳಿದ್ದೀರಿ, ಸಾಲ ಪಡೆಯಲು ಮುಂದಾಗಿದ್ದೀರಿ, ಹೀಗಿರುವಾಗ ನಿಮ್ಮ ಬೋರ್ಡ್ ನ ಖಾತೆಯಲ್ಲಿ 13 ಸಾವಿರ ಕೋಟಿ ಹಣ ಇದ್ದರೆ ದಾಖಲೆ ಪ್ರದರ್ಶನ ಮಾಡಿ ಎಂದು ಸವಾಲು ಹಾಕಿದರು.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಮಾಜಿ ಸಚಿವರಾದ ಡಿ.ಸಿ ತಮ್ಮಣ್ಣ, ಸಿ ಎಸ್ ಪುಟ್ಟರಾಜು, ಶಾಸಕರಾದ ಬಾಲಕೃಷ್ಣ , ಜಿ ಡಿ.ಹರೀಶ್ ಗೌಡ, ಶರಣï ಗೌಡ ಕಂದಕೂರ್ , ಸ್ವರೂಪ್ ಪ್ರಕಾಶ್, ರವಿಕುಮಾರ್ , ಮಾಜಿ ಶಾಸಕರಾದ ಎ ಮಂಜು, ಡಾ. ಅನ್ನದಾನಿ, ನಿಸರ್ಗ ನಾರಾಯಣಸ್ವಾಮಿ ಕೋರ್ ಕಮಿಟಿ ಅಧ್ಯಕ್ಷರಾದ ಜೆಕೆ ಕೃಷ್ಣಾರೆಡ್ಡಿ.ಎಂಎಲ್‌ಸಿ ಭೋಜೆಗೌಡ, ಸೂರಜ್, ಸೋನಿ ನಾಯಕ್, ಜಿಲ್ಲಾಧ್ಯಕ್ಷರಾದ ಜಯಮುತ್ತು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net