ನಾಗಿನಿಕೆರೆ ದುರಸ್ತಿ ಯಾವಾಗ?

 ಕೆರೆ ಬುಡದಲ್ಲಿ ರಂದ್ರದ ಮೂಲಕ ನೀರು ಹೋಗುತ್ತಿರುವುದು.
ಕೆರೆ ಬುಡದಲ್ಲಿ ರಂದ್ರದ ಮೂಲಕ ನೀರು ಹೋಗುತ್ತಿರುವುದು.
Published on
ಮಾಗಡಿ: ತಾಲೂಕಿನ ಪ್ರಸಿದ್ಧ ನಾಗಿನಿ ಕೆರೆ ನೀರು ಸೋರಿಕೆಗೆ ಸಣ್ಣ ನೀರಾವರಿ ಇಲಾಖೆಯ ಬೇಜವಾಬ್ದಾರಿಯೇ ಕಾರಣವೇ? ಇಂತಹದ್ದೊಂದು ಪ್ರಶ್ನೆ ಸಾರ್ವಜನಿಕವಾಗಿ ಕೇಳಿ ಬಂದಿದೆ.
ಹೊಯ್ಸಳರ ಕಾಲದ ತಿಪ್ಪಸಂದ್ರ ತಿಪ್ಪನಾಯಕ ದೇವ ಕಟ್ಟಿಸಿದ ಪ್ರಾಚಿನ ಕಾಲದ ಹಾವಿನಾಕಾರದ ಬೃಹತ್​ ನಾಗಿನಿ ಕೆರೆ ಮಧ್ಯಭಾಗದಲ್ಲಿ ಬೃಹತ್​ ಗಾತ್ರದ ರಂಧ್ರಗಳುಂಟಾಗಿ ನೀರಿನ ಒತ್ತಡಕ್ಕೆ ಕೆರೆ ಏರಿ ಮೇಲೆ ಹಲವೆಡೆ ಬಿರುಕು ಕಾಣಿಸಿಕೊಂಡಿದೆ. ಏರಿಯನ್ನು ಸರಿಪಡಿಸುವಂತೆ ಸ್ಥಳಿಯರು ಮನವಿ ಸಲ್ಲಿಸಿದ್ದರೂ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ನಾಗಿನಿ ಕೆರೆ, ಕೆಂಪಯ್ಯನಪಾಳ್ಯದ ಮರಡಿಗುಟ್ಟೆ ಅರಣ್ಯ ಪ್ರದೇಶದಿಂದ ನೀರು ಹರಿಯುತ್ತಿದ್ದು, ಐದಾರು ಗ್ರಾಮಗಳ ಜಲಾನಯನ ವ್ಯಾಪ್ತಿ ಹೊಂದಿದೆ.
ಸಣ್ಣನಿರಾವರಿ ಇಲಾಖೆ ಬೇಜವಾಬ್ದಾರಿ
ಕೆರೆ ಏರಿ ಬುಡದಲ್ಲಿ ನೀರು ಹೆಚ್ಚಾಗಿ ಪೋಲಾಗುತ್ತಿದೆ. ಇದೇ ರೀತಿ ಹರಿದರೆ ಬೇಸಿಗೆಯಲ್ಲಿ ಪ್ರಾಣಿ, ಪಗಳಿಗೂ ಕುಡಿಯಲು ನೀರಿಲ್ಲದಂತಾಗುತ್ತದೆ. ಕೆರೆಗಳ ಅಭಿವೃದ್ಧಿಗೆ ಸರ್ಕಾರ ಪ್ರತಿ ವರ್ಷ ಕೋಟ್ಯಂತರ ರೂ. ಅನುದಾನ ಬಿಡುಗಡೆ ಮಾಡುತ್ತದೆ. ಆದರೆ, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸದೆ ಕೆರೆ ಹಾಳಾಗುವ ಹಂತಕ್ಕೆ ತಲುಪಿರುವುದು ಶೋಚನೀಯ. ನರೇಗಾ ಯೋಜನೆಯಡಿ ಕೆರೆ ಅಭಿವೃದ್ಧಿಗೆ ಅವಕಾಶವಿದ್ದರೂ, ಗ್ರಾಪಂ ಆಡಳಿತ ಕೆರೆ ಅಭಿವೃದ್ಧಿಗೆ ಮುಂದಾಗಿಲ್ಲ.
ಕೆರೆ ಜಾಗ ಒತ್ತುವರಿ
ಕೆರೆ ಪ್ರದೇಶ ಸಾಕಷ್ಟು ಒತ್ತುವರಿಯಾಗಿದ್ದರೂ ತೆರವುಗೊಳಿಸಲು ಯಾವ ಅಧಿಕಾರಿಗಳು ಮುಂದಾಗಿಲ್ಲ. ಇದರಿಂದ ಪ್ರತಿ ವರ್ಷ ಒತ್ತುವರಿ ಮುಂದುವರಿದಿದೆ. ಕೆರೆಯಲ್ಲಿ ಅಕ್ರಮವಾಗಿ ಮಣ್ಣು ಲೂಟಿ ನಿರಂತರವಾಗಿ ನಡೆಯುತ್ತಿದೆ. ಇದರಲ್ಲಿ ರಾಜಕಾರಣಿಗಳು, ಕೆಲ ಅಧಿಕಾರಿಗಳು ಶಾಮೀಲಾಗಿದ್ದಾರೆ. ಅಕ್ರಮವಾಗಿ ಮಣ್ಣು ಲೂಟಿ ನಡೆಯುತ್ತಿರುವ ಬಗ್ಗೆ ಕುದೂರು ಪೊಲೀಸರಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ ಎಂದು ರೈತರು ಆರೋಪಿಸಿದ್ದಾರೆ.
ಕೆರೆಯೊಳಗೆ ತ್ಯಾಜ್ಯ
ಕೆರೆಯ ಬಳಿ ಹಳೆಯ ಮನೆಗಳ ತ್ಯಾಜ್ಯ, ಕೋಳಿ ಕಸ, ಕಾಫಿ, ಟೀ ಅಂಗಡಿಯ ತ್ಯಾಜ್ಯ, ಪ್ಲಾಸ್ಟಿಕ್​ ಲೋಟಗಳನ್ನು ಎಸೆಯುವುದು ಸ್ಥಳಿಯ ಗ್ರಾಮ ಪಂಚಾಯಿತಿಗೆ ಗೊತ್ತಿದ್ದರೂ ಕಸ ಹಾಕದಂತೆ ಕ್ರಮಕೈಗೊಳ್ಳಲು ಮುಂದಾಗದಿರುವುದು ದುರಂತ. ಈ ಕೆರೆಯ ನೀರು ಕುಡಿದರೆ ಸಣ್ಣ ಪುಟ್ಟ ಕಾಯಿಲೆಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಇತ್ತು. ಆದರೆ ಕೆರೆಯ ಇಂದಿನ ಪರಿಸ್ಥಿತಿಯನ್ನು ಊಹಿಸಲು ಸಾಧ್ಯವಾಗದಂತಾಗಿದೆ.
ಮೇವು ಹಾಗೂ ನೀರಿಗಾಗಿ ಕೆರೆ ಏರಿ ಮೇಲೆ ಪ್ರತಿ ದಿನ ನೂರಾರು ಜಾನುವಾರುಗಳು ಬರುತ್ತಿದ್ದವು. ಈಗ ಕೆರೆ ಏರಿ ಸಂಪೂರ್ಣ ಕುರುಚಲು ಗಿಡಗಳು ಬೆಳೆದು ನಿಂತಿದ್ದು, ವಿಷಜಂತುಗಳು ಆವರಿಸಿಕೊಂಡಿವೆ. ಸ್ವಚ್ಛತೆ ಕೈಗೊಳ್ಳಲು ಸಣ್ಣ ನೀರಾವರಿ ಇಲಾಖೆ ಮೈಮರೆತಿದೆ.
ಕೆರೆಗೆ ಹೇಮೆ ಹರಿದರೂ ಉಪಯೋಗ ಶೂನ್ಯ
ತಾಲೂಕಿನ ಕೆಲವೆಡೆ ಈಗಾಗಲೇ ಹೇಮಾವತಿ ನೀರು ಹರಿಸುವ ಪ್ರಾಯೋಗಿಕ ಕಾರ್ಯ ನಡೆಯುತ್ತಿದ್ದು, ನಾಲಾ ಪ್ರದೇಶದ ಬಳಿಯೇ ನಾಗಿನಿ ಕೆರೆಗೆ ನೀರು ಹರಿಸಲು ಚಿಂತನೆ ನಡೆದಿದೆ. ಹೀಗಿರುವಾಗ ಕೆರೆ ಏರಿ ರಂಧ್ರಗಳನ್ನು ಮುಚ್ಚದಿದ್ದರೆ ಹೇಮಾವತಿ ನೀರು ಬಿಟ್ಟರೂ ಪ್ರಯೋಜನವಾಗುವುದಿಲ್ಲ.
"

ಹಳೆಯ ಕೆರೆಯಾಗಿರುವುದರಿಂದ ನೀರು ಜಿನುಗುತ್ತಿರುವುದು ಸಾಮಾನ್ಯ. ಅಧಿಕಾರಿಗಳು ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಶ್ರೀ ದುರಸ್ತಿ ಕಾರ್ಯ ನಡೆಯಲಿದೆ.

"

ಕೋಟ್​&2 ತಿಪ್ಪಸಂದ್ರ ಹೋಬಳಿ ವ್ಯಾಪ್ತಿಗೆ ದೊಡ್ಡದಾದ ಕೆರೆ ಇದಾಗಿದೆ. ಇದು ಇತಿಹಾಸ ಪ್ರಸಿದ್ಧ ಕೆರೆಯಾಗಿದೆ. ಎಸ್​.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಸಣ್ಣನಿರಾವರಿ ಸಚಿವರಾಗಿದ್ದ ಕುಮಾರ್​ ಬಂಗಾರಪ್ಪ ಅವರು ಕೆರೆ ದುರಸ್ತಿಗೆ ಒತ್ತು ನೀಡಿದ್ದರು.

"

ಸ್ಥಳಿಯ ಕೆರೆಗಳನ್ನು ಅಭಿವೃದ್ಧಿಪಡಿಸಿದರೆ ನಾಗರಿಕರಿಗೆ ಕುಡಿಯುವ ನೀರು ಒದಗಿಸಬಹುದು. ಆದರೆ, ಇಂತಹ ಬೃಹತ್​ ಕೆರೆಯಿಂದ ನೀರು ಪೋಲಾಗುತ್ತಿರುವುದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಕಂಡರೂ ಕಾಣದಂತಿದ್ದಾರೆ. ಹೇಮಾವತಿ ನೀರನ್ನು ಈ ಕೆರೆಗೆ ಹರಿಸಿದರೆ ಎಲ್ಲಿಂದ ನಿಲ್ಲಲು ಸಾಧ್ಯ? ಕೂಡಲೇ ಸರಿಪಡಿಸದಿದ್ದರೆ ಸಣ್ಣ ನೀರಾವರಿ ಇಲಾಖೆಗೆ ಮುತ್ತಿಗೆ ಹಾಕಿ, ಅಧಿಕಾರಿಗಳಿಗೆ ಮಸಿ ಬಳಿಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.

"

ನಾಗಿನಿ ಕೆರೆ ಶೇ.70 ನೀರು ತುಂಬಿದ ವೇಳೆ ಸಾಮಾನ್ಯವಾಗಿ ಜಿನುಗುವುದು ವಾಡಿಕೆ. ಅದರಿಂದ ಕೆರೆಯ ಏರಿ ಹಾಗೂ ಕೆರೆಗೆ ಯಾವುದೇ ಅಪಾಯವಿಲ್ಲ. ಈ ಕುರಿತಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ.ಕೊಟ್ರೇಶ್​, ಎಇಇ, ಸಣ್ಣನಿರಾವರಿ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net