ಗ್ರಾಮ ಲೆಕ್ಕಾಧಿಕಾರಿ, ಸಹಾಯಕ ಲೋಕಾ ಬಲೆಗೆ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಬಿಡದಿ: ಕೆರೆ ಮಣ್ಣನ್ನು ಜಮೀನಿಗೆ ಸಾಗಿಸುವುದನ್ನು ತಡೆದು ಹಣಕ್ಕೆ ಬೇಡಿಕೆ ಇಟ್ಟಿದ್ದ ಗ್ರಾಮ ಲೆಕ್ಕಾಧಿಕಾರಿ ಹಾಗೂ ಗ್ರಾಮ ಪಂಚಾಯಿತಿ ಗ್ರಾಮ ಸಹಾಯಕ ಭಾನುವಾರ ಹಣ ಪಡೆಯುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ಹೋಬಳಿಯ ಕೆಂಚನಕುಪ್ಪೆ ವೃತ್ತ ಮತ್ತು ಮಾಯಗಾನಹಳ್ಳಿ ವೃತ್ತದ (ಪ್ರಭಾರ) ಗ್ರಾಮ ಲೆಕ್ಕಾಧಿಕಾರಿ ಚೇತನ್​ ಎಸ್​.ವಿ. ಹಾಗೂ ಮಾಯಗಾನಹಳ್ಳಿ ಗ್ರಾಪಂನ ಗ್ರಾಮ ಸಹಾಯಕ ವೆಂಕಟರಮಣ ಸ್ವಾಮಿ ಬಂಧಿತರು.
ಶಾಂತಕುಮಾರ್​ ಎಂಬುವವರು ಮಾಯಗನಹಳ್ಳಿ ಬಳಿಯ ವಸತಿ ಶಾಲೆಯ ಪಕ್ಕದಲ್ಲಿ ಜಮೀನು ಹೊಂದಿದ್ದರು. ಮಳೆಯಿಂದ ಜಮೀನಿನ ಮಣ್ಣು ಕೊಚ್ಚಿ ಹೋಗಿದ್ದರಿಂದ ಸ್ಪಲ್ಪ ದೂರದಲ್ಲಿದ್ದ ಕೆರೆಯಿಂದ ಜೆಸಿಬಿ ಬಳಸಿ ಲಾರಿಗಳ ಮೂಲಕ ಮಣ್ಣನ್ನು ಜಮೀನಿಗೆ ಸಾಗಿಸುತ್ತಿದ್ದರು. ಈ ವೇಳೆ ಗ್ರಾಮ ಲೆಕ್ಕಾಧಿಕಾರಿ ಚೇತನ್​ ಹಾಗೂ ಗ್ರಾಮ ಸಹಾಯಕ ವೆಂಕಟರಮಣ ಸ್ಥಳಕ್ಕೆ ಬಂದು ಮಣ್ಣು ಹೊಡೆಯದಂತೆ ತಡೆದರು. ಇದನ್ನು ವಿಡಿಯೋ ಮಾಡಿದ್ದ ಚೇತನ್​ ದೃಶ್ಯಗಳನ್ನು ಶಾಂತಕುಮಾರ್​ಗೆ ಕಳುಹಿಸಿ 7 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದರು.
ಈ ಪೈಕಿ ಮುಂಗಡವಾಗಿ 2 ಸಾವಿರ ರೂ.ಅನ್ನು ಫೋನ್​ಪೇ ಮೂಲಕ ಪಡೆದಿದ್ದು, ಬಾಕಿ ಹಣ ವಸೂಲಿಗೆ ಗ್ರಾಮ ಸಹಾಯಕನನ್ನು ಶಾಂತಕುಮಾರ್​ ಬಳಿ ಕಳುಹಿಸಿದ್ದ. ಈ ಬಗ್ಗೆ ಶಾಂತಕುಮಾರ್​ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಭಾನುವಾರ ಮಾಯಗಾನಹಳ್ಳಿಯಲ್ಲಿ ಗ್ರಾಮ ಸಹಾಯಕ ವೆಂಕಟರಮಣ ಬಾಕಿ 5 ಸಾವಿರ ರೂ. ಸ್ವೀಕರಿಸುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾನೆ. ಇದಾದನಂತರ ಲಂಚದ ಸೂತ್ರಧಾರ ಚೇತನ್​ನನ್ನು ಬಂಧಿಸಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ. ಲೋಕಾಯುಕ್ತ ಎಸ್​ಪಿ ಪಿ.ವಿ.ಸ್ನೇಹಾ ಮಾರ್ಗದರ್ಶನ, ಡಿವೈಎಸ್ಪಿ ಶಿವಪ್ರಸಾದ್​ ಮೇಲ್ವಿಚಾರಣೆಯಲ್ಲಿ ಸಿಪಿಐಗಳಾದ ಶ್ರೀಕುಮಾರ್​ ಎಂ., ಮತ್ತು ಸಂದೀಪ್​ ಕುಮಾರ್​ ಬಿ.ಎನ್​. ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net