ಕನಕಪುರ: ತಾಲೂಕಿನ ಚಿಕ್ಕಮುಕ್ಕೋಡ್ಲು ಹೊರವಲಯದಲ್ಲಿ ಕಾಡು ಪ್ರಾಣಿಗಳ ಬೇಟೆಗೆ ಯತ್ನಿಸುತ್ತಿದ್ದ ತಂಡದ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ತಮಿಳುನಾಡಿನ ಅಂಚಟ್ಟಿ ಗ್ರಾಮದ ದೇವರಾಜು (33), ಕೊರೆಕಲ್ (42) ಬಂಧಿತರು. ಜತೆಯಲ್ಲಿದ್ದ ಕೋಣಪ್ಪ (28) ಪರಾರಿಯಾಗಿದ್ದಾನೆ. ಜ.29ರ ರಾತ್ರಿ ಬೈಕ್ನಲ್ಲಿ ಅನುಮಾನಾಸ್ಪದವಾಗಿ ಕಾಡಂಚಿನಲ್ಲಿ ತಿರುಗಾಡುತ್ತಿರುವುದನ್ನು ಕಂಡ ವನಪಾಲಕರು ಆರೋಪಿಗಳನ್ನು ತಡೆದು ವಿಚಾರಿಸಿದಾಗ ಬೇಟೆಗೆ ಬಂದಿರುವುದು ಪತ್ತೆಯಾಗಿದೆ.
ಆರೋಪಿಗಳನ್ನು ವಶಕ್ಕೆ ಪಡೆದು ಮೂರು ಬೈಕ್ ಹಾಗೂ ಬೇಟೆಗಾಗಿ ತಂದಿದ್ದ ಎರಡು ಬ್ಯಾಟರಿ, ಉರುಳು, ಎರಡು ನಾಡಬಾಂಬು, ಚೂರಿ, ವೈರರ್, ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.