9 ವರ್ಷದಿಂದ ಈ ತಾಯಿಗೆ ಶಿಥಿಲ ಸಮುದಾಯ ಭವನವೇ ಆಸರೆ!

ಮಾಗಡಿ ತಾಲೂಕಿನ ಉಡುಕುಂಟೆ ಗ್ರಾಮದ ಲಕ್ಷ್ಮಮ್ಮ ಅವರು ಸಮುದಾಯ ಭವನದಲ್ಲಿ ವಾಸವಿರುವುದು.
ಮಾಗಡಿ ತಾಲೂಕಿನ ಉಡುಕುಂಟೆ ಗ್ರಾಮದ ಲಕ್ಷ್ಮಮ್ಮ ಅವರು ಸಮುದಾಯ ಭವನದಲ್ಲಿ ವಾಸವಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • 9 ವರ್ಷದಿಂದ ಈ ತಾಯಿಗೆ ಶಿಥಿಲ ಸಮುದಾಯ ಭವನವೇ ಆಸರೆ!
ಮಾಗಡಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಡವರಿಗೆ ಸೂರು ಕೊಡುತ್ತೇವೆಂದು ಹೇಳುತ್ತಲೇ ಬಂದಿದ್ದರೂ ಅರ್ಹರ ಪಾಲಿಗೆ ಅದಿನ್ನೂ ಮರೀಚಿಕೆಯಾಗಿದೆ ಎಂಬುದಕ್ಕೆ ಸಾಕ್ಷಿಯೋ ಎಂಬಂತೆ ವೃದ್ಧೆಯೊಬ್ಬರು ಶಿಥಿಲಗೊಂಡ ಸಾರ್ವಜನಿಕ ಸಮುದಾಯ ಭವನವನ್ನೇ ಒಂಬತ್ತು ವರ್ಷಗಳಿಂದ ಸೂರು ಮಾಡಿಕೊಂಡಿದ್ದಾರೆ.
ಮಾಗಡಿ ತಾಲೂಕು ಸೋಲೂರು ಹೋಬಳಿ ಉಡುಕುಂಟೆ ಗ್ರಾಮದ ಲಕ್ಷ್ಮಮ್ಮ(66)ಅವರೇ ಆ ನತದೃಷ್ಟೆ. ಅವರಿಗೆ ಈ ಹಿಂದೆ ಇದ್ದ ಅಲ್ಪಸ್ವಲ್ಪ ಆಸರೆಯೂ ಪತಿಯ ಮರಣದ ನಂತರ ಮರೀಚಿಕೆಯಾಗಿದೆ. ವಾಸವಿದ್ದ ಹಳೇ ಮನೆ ಕುಸಿದು ಬಿದ್ದಿದೆ. ಆ ಕ್ಷಣದಲ್ಲಿ ಬೀದಿಗೆ ಬಂದ ಲಕ್ಷ್ಮಮ್ಮ ಅಂತಿಮವಾಗಿ ಪಾಳು ಬಿದ್ದ ಸಮುದಾಯ ಭವನದ ಮೊರೆ ಹೋಗಿದ್ದಾರೆ. ಅಲ್ಲಿ ಅವರು ಆಶ್ರಯ ಪಡೆದು ಬರೋಬ್ಬರಿ 9 ವರ್ಷ ಕಳೆದಿದ್ದರೂ ಇವರ ಬದುಕಿಗೆ ದಾರಿ ತೋರಿಸಿದವರಿಲ್ಲ.
ನಿವೇಶನವಾಗಲೀ, ಅಥವಾ ವಸತಿ ಯೋಜನೆಯ ಮನೆಯಾಗಲೀ ಅವರಿಗೆ ಸಿಕ್ಕಿಲ್ಲ. ಇದ್ದೊಬ್ಬ ಮಗನೂ ಮಾನಸಿಕ ಅಸ್ವಸ್ಥ. ಹಳೆಯ ಮನೆ ಜಾಗದಲ್ಲಿ ಹೊಸ ಮನೆ ಕಟ್ಟಿಕೊಳ್ಳಲು ಶಕ್ತಿಯಿಲ್ಲ, ಹೀಗಾಗಿ ಇಲ್ಲಿಯೇ ಬಿದ್ದಿದ್ದೇನೆ’ ಎಂದು ಲಕ್ಷ್ಮಮ್ಮ ಅಳುತ್ತಾರೆ. ಅವರು ಆಶ್ರಯ ಪಡೆದಿರುವ ಸಮುದಾಯ ಭವನದ ಸ್ಥಿತಿ ಸಹ ಹದಗೆಟ್ಟಿದ್ದು, ಮಳೆ ಬಂದರೆ ಸೋರುತ್ತದೆ. ಅಪಾಯಕಾರಿ ಕಟ್ಟಡದಲ್ಲಿಯೇ ಜೀವ ಕೈಯಲ್ಲಿ ಹಿಡಿದು ಆಕೆ ವಾಸಿಸುವಂತಾಗಿದೆ.
ನೆಲೆ ಕಲ್ಪಿಸಿ: ಇಷ್ಟೊಂದು ದೀರ್ಘ ಕಾಲದಿಂದ ಸಾರ್ವಜನಿಕ ಕಟ್ಟಡದಲ್ಲಿ ಲಕ್ಷ್ಮಮ್ಮ ವಾಸಿಸುತ್ತಿದ್ದರೂ ಅಧಿಕಾರಿಗಳ ಕಣ್ಣಿಗೆ ಬೀಳದಿರುವುದು, ಆಕೆಯ ಅಳಲು ಕೇಳದಿರುವುದು ನಮ್ಮ ಆಡಳಿತ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. ಇನ್ನಾದರೂ ಸ್ಥಳೀಯ ಜನಪ್ರತಿನಿಧಿಗಳು ಮತ್ತು ದಾನಿಗಳು ಒಟ್ಟಾಗಿ ಈ ಬಡ ಜೀವಕ್ಕೆ ನೆಮ್ಮದಿಯ ನೆಲೆ ಕಲ್ಪಿಸಿಕೊಡಬೇಕಿದೆ.
ಸಹಾಯಕ್ಕೆ ಧಾವಿಸಿದ ಗ್ರಾಮಸ್ಥರು: ಸದ್ಯ ಲಕ್ಷ್ಮಮ್ಮ ಅವರ ಸಹಾಯಕ್ಕೆ ಗ್ರಾಮಸ್ಥರು ಹಾಗೂ ಶಿಕ್ಷಕರೊಬ್ಬರು ನಿಂತಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಸರ್ಕಾರ ಮತ್ತು ಸ್ವಯಂಸೇವಾ ಸಂಸ್ಥೆಗಳ ಗಮನ ಸೆಳೆಯುವ ಪ್ರಯತ್ನದಲ್ಲಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಾದರೂ ಲಕ್ಷ್ಮಮ್ಮ ಅವರ ರಕ್ಷಣೆ ಮತ್ತು ಆರ್ಥಿಕ ಭದ್ರತೆಗೆ ಕ್ರಮ ಕೈಗೊಳ್ಳಬೇಕು. ಹಾಗೆಯೇ ಧರ್ಮಸ್ಥಳ ಸಂಸ್ಥೆಗೂ ಮನವಿ ಮಾಡಿದ್ದು, ಲಕ್ಷ್ಮಮ್ಮ ಅವರಿಗೆ ಒಂದು ಸಣ್ಣ ಮನೆ ನಿರ್ಮಿಸಿಕೊಡುವಂತೆ ಒತ್ತಾಯಿಸಿದ್ದಾರೆ.
ವೃದ್ಧೆಗೆ ನಿವೇಶನ ಇದ್ದರೆ ಬಸವ ವಸತಿ ಯೋಜನೆಯಡಿ 1.50 ಲಕ್ಷ ರೂ. ನೀಡಲಾಗುವುದು. ಇದರಿಂದ ಸ್ಥಳೀಯರು ಜವಾಬ್ದಾರಿ ವಹಿಸಿಕೊಂಡು 10/20 ಅಡಿ ಮನೆ ಕಟ್ಟಿಸಿಕೊಡಬಹುದು.
-ಜಯಪಾಲ್ ತಾಪಂ ಇಒ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net