ಮನೆ ಬೀಗದ ಕೀ ಬಳಸಿ ಕದಿಯುತ್ತಿದ್ದ ಖದೀಮ ಅರೆಸ್ಟ್​

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಮಾಗಡಿ: ಮನೆಯ ಅಸಲಿ ಬೀಗದ ಕೀ ಬಳಸಿ ಕಳವು ಮಾಡುತ್ತಿದ್ದ ಖದೀಮನನ್ನು ಪಟ್ಟಣ ಪೊಲೀಸರು ಬಂಧಿಸಿದ್ದಾರೆ. ಮಾಗಡಿಯ ಕಲ್ಯಾಗೇಟ್​ ನಿವಾಸಿ ರವಿ ಬಂಧಿತ. 42 ಗ್ರಾಂ ಚಿನ್ನಾಭರಣ ಹಾಗೂ 550 ಗ್ರಾಂ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದ ಹಿನ್ನೆಲೆ: ಮಾಗಡಿ ಠಾಣೆ ವ್ಯಾಪ್ತಿಯ ಕಲ್ಯಾಗೇಟ್​ ಬಳಿಯ ಮನೆಯಲ್ಲಿ ಜೂ.3ರಂದು ಯಾರೂ ಇಲ್ಲದ ಸಮಯದಲ್ಲಿ ಕಳವು ನಡೆದಿತ್ತು. ಆದರೆ, ಆಶ್ಚರ್ಯಕರ ಸಂಗತಿಯೆಂದರೆ ಮನೆಯಲ್ಲಿ ಯಾವುದೇ ಬೀಗ ಒಡೆದಿರಲಿಲ್ಲ. 2 ವರ್ಷಗಳ ಹಿಂದೆ ಈ ಮನೆಯ ಮುಖ್ಯ ಬಾಗಿಲಿನ ಎರಡು ಅಸಲಿ ಬೀಗದ ಕೈಗಳಲ್ಲಿ ಒಂದು ಕಳೆದುಹೋಗಿತ್ತು. ಅಂದಿನಿಂದ ಇಂದಿನವರೆಗೆ ಮನೆಯಲ್ಲಿದ್ದ ನಗದು ಮತ್ತು ಒಡವೆಗಳು ಆಗಾಗ ಮಾಯವಾಗುತಿದ್ದವು. ಇದನ್ನು ಗಮನಿಸಿದ ಮನೆಯವರು ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆೆ.
ಕಳವಿನ ವಿಶಿಷ್ಟ ಶೈಲಿ
ಆರೋಪಿಯು ಎರಡು ವರ್ಷಗಳ ಹಿಂದೆಯೇ ಚಾಣಾತನದಿಂದ ಮನೆಯ ಬೀಗದ ಕೀ ಕಳವು ಮಾಡಿದ್ದ. ಮನೆಯವರು ಕೆಲಸದ ನಿಮಿತ್ತ ಹೊರಗಡೆ ಹೋದಾಗ ಯಾರೂ ಇಲ್ಲದ ಸಮಯ ನೋಡಿಕೊಂಡು ಹೊಂಚು ಹಾಕಿ ಕಾಯುತ್ತಿದ್ದ. ಕೀ ಬಳಸಿ ನಿರಾಯಾಸವಾಗಿ ಬಾಗಿಲು ತೆರೆದು ಒಳನುಗ್ಗುತ್ತಿದ್ದ. ಮನೆಯವರಿಗೆ ಅನುಮಾನ ಬಾರದಂತೆ ಪದೇಪದೆ ಕಳವು ನಡೆಸುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.
ಬೆಂಗಳೂರು ದಣ ಜಿಲ್ಲೆಯ ಪೊಲೀಸ್​ ಅಧೀಕ್ಷಕ ಆರ್​. ಶ್ರೀನಿವಾಸಗೌಡ ಅವರ ಮಾರ್ಗದರ್ಶನದಲ್ಲಿ ಅಪರ ಪೊಲೀಸ್​ ಅಧೀಕ್ಷಕ ರಾಜೇಂದ್ರ ಪ್ರಸಾದ್​ ಹಾಗೂ ಮಾಗಡಿ ಉಪವಿಭಾಗದ ಉಪಾಧೀಕ್ಷಕ ಪಿ.ರವಿ ಅವರ ನಿರ್ದೆಶನದಲ್ಲಿ ಮಾಗಡಿ ಪೊಲೀಸ್​ ಠಾಣೆಯ ಇನ್​ಸ್ಪೆಕ್ಟರ್​ ಜಿ.ಟಿ.ಶ್ರೀನಿವಾಸ ನೇತೃತ್ವದಲ್ಲಿ ಪಿಎಸ್​ಐ ಎಸ್​. ಮನೋಜ್​, ಸಿಬ್ಬಂದಿ ಬೀರಪ್ಪ, ಪ್ರಮೋದ್​, ಮುನೀಂದ್ರ, ಬಸವರಾಜ, ಮಹೇಂದ್ರ ಪವಾರ್​ ಕಾರ್ಯಾಚರಣೆ ನಡೆಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net