ಮಳೇನೇ ಇಲ್ಲ ...ಇರೋ ಮೇವ್ನೂ ದನ ಕರಾ ಮುಟ್ಟಲ್ಲ!

ಚನ್ನಪಟ್ಟಣ ತಾಲೂಕಿನ ಜಗದಾಪುರ ಬ್ಯಾಡರಹಳ್ಳಿಯಲ್ಲಿ ಸಚಿವ ಎಚ್.ಸಿ ಬಾಲಕೃಷ್ಣ ಬರ ಅಧ್ಯಯನ ನಡೆಸಿದರು.
ಚನ್ನಪಟ್ಟಣ ತಾಲೂಕಿನ ಜಗದಾಪುರ ಬ್ಯಾಡರಹಳ್ಳಿಯಲ್ಲಿ ಸಚಿವ ಎಚ್.ಸಿ ಬಾಲಕೃಷ್ಣ ಬರ ಅಧ್ಯಯನ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಸಚಿವರ ಎದುರು ಅಳಲು ತೋಡಿಕೊಂಡ ರೈತ ಕೃಷ್ಣೇಗೌಡ
  • ಚನ್ನಪಟ್ಟಣ, ಕನಕಪುರ, ಹಾರೋಹಳ್ಳಿ ತಾಲೂಕಿನ ಆಯ್ದ ಜಮೀನುಗಳಿಗೆ ಬಾಲಕೃಷ್ಣ ಭೇಟಿ
  • ಫಸಲು ನಿರೀಕ್ಷೆ ಸಾಧ್ಯವಿಲ್ಲ

ರಾಮನಗರ

`ಸಾರ್ ಮಳೇನೇ ಇಲ್ಲ. ದನಾ, ಕರಿಗೆ ಮೇವ್ಗೆ ಆಗ್ಲಿ ಅಂತಾ ಹಾಕಿರೋ ಜ್ವಾಳ, ಕಾರಾಮಣೀನೂ ಒಣ್ಗೊಗದೇ.... ಇರೋ ಮೇವ್ನೂ ದನ ಕರಾ ಮುಟ್ಟೋದಿಲ್ಲ...'

ಇದು ಚನ್ನಪಟ್ಟಣ ತಾಲೂಕು ಜಗದಾಪುರ ಬ್ಯಾಡರಹಳ್ಳಿ ಬಳಿ ಒಣಗಿದ ಭೂಮಿಯಲ್ಲಿ ರೈತ ಕೃಷ್ಣೇಗೌಡ ಅವರು ಸಚಿವ ಎಚ್.ಸಿ.ಬಾಲಕೃಷ್ಣ ಎದುರು ಅಳಲು ತೋಡಿಕೊಂಡ ಪರಿ.

ಬರ ಅಧ್ಯಯನಕ್ಕಾಗಿ ಜಿಲ್ಲಾ ಉಸ್ತುವಾರಿಯಾಗಿ ನೇಮಕಗೊಂಡಿರುವ ಸಚಿವ ಎಚ್.ಸಿ.ಬಾಲಕೃಷ್ಣ, ಸೋಮವಾರ ಜಿಲ್ಲೆಯ ಚನ್ನಪಟ್ಟಣ, ಕನಕಪುರ ಮತ್ತು ಹಾರೋಹಳ್ಳಿ ತಾಲೂಕಿನ ಆಯ್ದ ಜಮೀನುಗಳಿಗೆ ಭೇಟಿ ನೀಡಿ, ಬರ ಅಧ್ಯಯನ ನಡೆಸಿದರು.

ಮಳೆಯ ಕೊರತೆಯಿಂದಾಗಿ ಬಹುತೇಕ ಜಮೀನುಗಳಲ್ಲಿ ಬಿತ್ತನೆಯೇ ಆಗದಿರುವುದು ಮತ್ತು ಕೆಲವು ಕಡೆಗಳಲ್ಲಿ ಬಿತ್ತನೆ ಮಾಡಿದ ಬೆಳೆಗಳೂ ಒಣಗಿನಿಂತಿರುವ ದೃಶ್ಯಗಳು ಸಚಿವರ ಗಮನ ಸೆಳೆದವು.

ದನಾನೂ ಮೇಯೋಲ್ಲ: ಬ್ಯಾಡರಹಳ್ಳಿ ಗ್ರಾಮದಲ್ಲಿ ಮಾಯಿಗೇಗೌಡ, ಕೃಷ್ಣೇಗೌಡ ಅವರ ಜಮೀನುಗಳ ಪರಿಶೀಲನೆ ವೇಳೆ ಇದ್ದ ಸ್ಥಳೀಯರು ಮಳೆಯ ಕೊರತೆಯಿಂದಾಗಿ ಬೆಳೆಗಳು ಸಂಪೂರ್ಣ ನೆಲ ಕಚ್ಚಿವೆೆ. ಮಳೆ ಬಂದರೂ ಇರುವ ಬೆಳೆಯಿಂದ Àಸಲು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ದರ ಕರುಗಳು ಇದನ್ನು ತಿನ್ನುವುದಿಲ್ಲ ಎಂದು ಸಚಿವರ ಮುಂದೆ ಅಲವತ್ತುಕೊಂಡರು.

ಮಳೆಯೇ ಇಲ್ಲ

ಇದೇ ವೇಳೆ ಈ ಭಾಗದ ಮಳೆ ಪರಿಸ್ಥಿತಿಯನ್ನು ವಿವರಿಸಿದ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಅಂಬಿಕಾ ಮತ್ತು ಕೃಷಿ ಅಧಿಕಾರಿ ಪ್ರದೀಪ್, ಈ ಭಾಗದಲ್ಲಿ ಮಳೆಯೇ ಆಗಿಲ್ಲ. ಬಿದ್ದಿರುವ ಮಳೆ ಸರಿಯಾದ ಸಮಯಕ್ಕೆ ಬೀಳದ ಕಾರಣದಿಂದಾಗಿ ಬಿತ್ತನೆ ಕಾರ್ಯಕ್ಕೂ ಹಿನ್ನಡೆಯಾಗಿದೆ. ಈ ಭಾಗದಲ್ಲಿ ರಾಗಿಯನ್ನು ಬೆಳೆಯುತ್ತಾರಾದರೂ, ಈವರೆಗೂ ರಾಗಿ ಬಿತ್ತನೆ ಕಾರ್ಯವೂ ಆಗಿಲ್ಲ. ಬಿತ್ತನೆ ಕಾರ್ಯ ಸಂಪೂರ್ಣವಾಗಿ ಶೂನ್ಯ ಎಂದು ತಿಳಿಸಿದರು.

ನಂತರ ಅಧ್ಯಯನ ತಂಡವು ಕನಕಪುರ ತಾಲೂಕು ಸಾತನೂರು ಹೋಬಳಿಯ ದಾಳಿಂಬ, ಕಸಬಾ ಹೋಬಳಿಯ ಶಿವನಹಳ್ಳಿ, ಹಾರೋಹಳ್ಳಿ ತಾಲೂಕಿನ ತಟ್ಟೇಕೆರೆ, ಕಾಡು ಜಕ್ಕಸಂದ್ರ, ಮಾರಸಂದ್ರ ಗ್ರಾಮಗಳಲ್ಲಿ ಬರ ಪರಿಸ್ಥಿತಿ ಅಧ್ಯಯನ ಮಾಡಿತು.

ಯರ‍್ಯಾರು ಇದ್ದರು?

ಈ ವೇಳೆ ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್, ವಿಧಾನ ಪರಿಷತ್ ಸದಸ್ಯ ಎಸ್.ರವಿ, ಮಾಜಿ ಶಾಸಕ ಕೆ.ರಾಜು, ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಎಸ್.ಗಂಗಾಧರ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಂಜುನಾಥ್, ಜಿಲ್ಲಾಧಿಕಾರಿ ಯಶವಂತ್ ವಿ ಗುರುಕರ್, ಜಿಪಂ ಸಿಇಒ ಅನ್ಮೋಲ್ ಜೈನ್, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್, ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಶಾಂತಪ್ರಿಯ ಮುಂತಾದವರು ಇದ್ದರು.

ಬರ ನಾಚಿಸಿದ ಭರ್ಜರಿ ಸ್ವಾಗತ

ಬರ ಅಧ್ಯಯನಕ್ಕೆ ಚನ್ನಪಟ್ಟಣ ತಾಲೂಕಿಗೆ ಬಂದ ಸಚಿವ ಬಾಲಕೃಷ್ಣ ಅವರಿಗೆ ಕ್ಷೇತ್ರದ ಶಾಸಕರಾದಿಯಾಗಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಭರ್ಜರಿಯಾಗಿಯೇ ಸ್ವಾಗತ ಕೋರುವ ಮೂಲಕ ಬರವೇ ನಾಚುವಂತೆ ಮಾಡಿದರು. ಸಚಿವರಾದ ನಂತರ ಮೊದಲ ಬಾರಿಗೆ ಬಂದ ಬಾಲಕೃಷ್ಣ ಅವರನ್ನು ಜಾನಪದ ಕಲಾ ತಂಡಗಳು, ಪಟಾಕಿ ಸಿಡಿತ, ಬೃಹತ್ ಸೇಬಿನ ಹಾರದೊಂದಿಗೆ ಖುದ್ದು ಶಾಸಕ ಸಿ.ಪಿ.ಯೋಗೇಶ್ವರ್ ಅವರೇ ನಿಂತು ಸ್ವಾಗತಿಸಿದ್ದು ವಿಶೇಷವಾಗಿತ್ತು. ನಗರದ ಪರಿವೀಕ್ಷಣ ಮಂದಿರ ಬಳಿ ಬರುತ್ತಿದ್ದಂತೆ ಇದೆಲ್ಲವೂ ಬೇಡ ಎನ್ನುತ್ತಲೇ ಕಾರಿಗೆ ಏರಲು ಮುಂದಾಗಿದ್ದ ಬಾಲಕೃಷ್ಣ ಅವರನ್ನು ಬಲವಂತವಾಗಿಯೇ ವೇದಿಕೆಗೆ ಕರೆತಂದು, ಶಾಲು-ಹಾರದೊಂದಿಗೆ ಸನ್ಮಾನಿಸಿದರು.

ತಹಸೀಲ್ದಾರ್ ತರಾಟೆಗೆ

ಜಗದಾಪುರ ಗ್ರಾಮದಲ್ಲಿ ಬರ ಅಧ್ಯಯನಕ್ಕೆ ಸಚಿವರು ತೆರಳಿದ್ದ ವೇಳೆ ಮಹಿಳೆಯೊಬ್ಬರು ತಹಸೀಲ್ದಾರ್ ಗಿರೀಶ್ ವಿರುದ್ಧ ಜಮೀನು ವಿವಾದವೊಂದಕ್ಕೆ ಸಂಬಂಧಿಸಿದಂತೆ ಆರೋಪ ಮಾಡಿದರು. ಇದೇ ವೇಳೆ ಶಾಸಕ ಸಿ.ಪಿ. ಯೋಗೇಶ್ವರ್ ಸಹ ತಹಸೀಲ್ದಾರ್ ವಿರುದ್ಧ ಬೇಸರ ವ್ಯಕ್ತಪಡಿಸಿದರು. ತಹಸೀಲ್ದಾರ್ ವಿರುದ್ಧ ಇತ್ತೀಚೆಗೆ ಇಲಾಖೆ ವಿಚಾರವಾಗಿ ದೂರುಗಳು ಬರುತ್ತಿವೆ. ಇದರಿಂದ ರೈತರಿಗೆ ಬಡವರಿಗೆ ತೊಂದರೆ ಆಗುತ್ತಿದೆ. ಈ ವಿಚಾರವನ್ನು ಸಿಎಂ ಗಮನಕ್ಕೂ ತಂದಿದ್ದೇನೆ. ಇವರನ್ನು ವರ್ಗಾವಣೆ ಅಲ್ಲ, ಅಮಾನತು ಮಾಡಬೇಕು ಎಂತಲೂ ಒತ್ತಾಯ ಮಾಡಿದ್ದೇನೆ ಎಂದು ಸಚಿವರ ಮುಂದೆಯೇ ಆಕ್ರೋಶ ವ್ಯಕ್ತಪಡಿಸಿದರು.

ನನ್ನ ಬಾಮೈದುನನ ಜಮೀನಿನಲ್ಲಿ ನಾನು ಕೃಷಿ ಮಾಡುತ್ತಿದ್ದೇನೆ. ಈ ಬಾರಿ ಸುಮಾರು 10 ಸಾವಿರ ಖರ್ಚು ಮಾಡಿದರೂ ಇರುವ ಬೆಳೆ ದನಗಳಿಗೂ ಆಗುವುದಿಲ್ಲ. ಮಳೆ ಕೃಷಿ ಮಾಡಲು ಆಗುವಷ್ಟು ಇಲ್ಲದಂತೆ ಆಗಿದೆ. ಮುಂದೇನು ಮಾಡುವುದೋ ಗೊತ್ತಿಲ್ಲ.

| ಕೃಷ್ಣೇಗೌಡ, ರೈತ ಬ್ಯಾಡರಹಳ್ಳಿ

ಮಳೆ ಕೊರತೆ ಆಗಿ ಹೆಚ್ಚಿನ ಕಡೆಗಳಲ್ಲಿ ಬಿತ್ತನೆಯೇ ಆಗಿಲ್ಲ. ಆಗಸ್ಟ್ನ ಉಳಿದ ದಿನಗಳಲ್ಲಿ ಮಳೆ ಬರುವ ನಿರೀಕ್ಷೆ ಇದೆ. ಮೂರು ತಿಂಗಳ ರಾಗಿ ಬೆಳೆ ಬಿತ್ತನೆಗೆ ಅವಕಾಶ ಇದ್ದು, ಮಳೆ ಬಿದ್ದರೆ ಬಿತ್ತನೆ ರಾಗಿ ಪೂರೈಕೆಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ.

| ಎಚ್.ಸಿ.ಬಾಲಕೃಷ್ಣ, ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net