ಚರಂಡಿಯಲ್ಲಿ ಮಣ್ಣು ಮತ್ತು ಕಸಕಡ್ಡಿ ತುಂಬಿ ಹೋಗಿದ್ದರೂ ಸಹ, ಅದರ ತೆರವಿಗೆ ಗ್ರಾಪಂ ಯಾವುದೇ ಕ್ರಮ ಕೈಗೊಳ್ಳದಿರುವುದು ಸ್ಥಳಿಯರ ಆಕ್ರೋಶಕ್ಕೆ ಕಾರಣವಾಗಿದೆ. ಹೇಳಿಗೆಹಳ್ಳಿಯ ಪ್ರಮುಖ ರಸ್ತೆಗಳ ಬದಿಯ ಚರಂಡಿಗಳಲ್ಲಿ ಸಂಪೂರ್ಣವಾಗಿ ಹೂಳು ತುಂಬಿರುವುದರಿಂದ ಕೊಳಚೆ ನೀರು ಸರಾಗವಾಗಿ ಮುಂದಕ್ಕೆ ಹೋಗಲಾಗದೆ ಒಂದೇ ಕಡೆ ನಿಂತು, ಸೊಳ್ಳೆಗಳ ಉತ್ಪತ್ತಿ ಕೇಂದ್ರವಾಗಿ ಮಾರ್ಪಟ್ಟಿದೆ. ಪರಿಣಾಮ ಚರಂಡಿಯಿಂದ ಬರುವ ಗಬ್ಬು ವಾಸನೆಯಿಂದ ಸ್ಥಳಿಯ ನಿವಾಸಿಗಳು ಮತ್ತು ಹಾದಿಹೋಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಷ್ಟೇ ಅಲ್ಲದೆ ಈ ಕಲುಷಿತ ವಾತಾವರಣದಿಂದ ಗ್ರಾಮಸ್ಥರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದು, ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.