ದ್ವಿತಳಿ ಚಾಕಿ ಬೆಲೆ ಗಗನಮುಖಿ

ರಾಮನಗರ ಸಿಲ್ಕ್ ಮಾರ್ಕೆಟ್ ಸಂಗ್ರಹ ಚಿತ್ರ
ರಾಮನಗರ ಸಿಲ್ಕ್ ಮಾರ್ಕೆಟ್ ಸಂಗ್ರಹ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ವಾತಾವರಣ ವೈಪರೀತ್ಯ ಎಫೆಕ್ಟ್​
  • ರೇಷ್ಮೆ ಬೆಳೆಗಾರರಿಗೆ ಸಂಕಷ್ಟ
  • ಆತಂಕ ಬೇಡ ಎಂದ ಇಲಾಖೆ
ರಾಮನಗರ
ಒಂದೆಡೆ ರೇಷ್ಮೆ ಗೂಡಿಗೆ ನಿರೀಕ್ಷೆಗೂ ಮೀರಿದ ಬೆಲೆಯ ಸಂಭ್ರಮವಿದ್ದರೂ ಮತ್ತೊಂದೆಡೆ ಅನಿರೀಕ್ಷಿತವಾಗಿ ದ್ವಿತಳಿ ಚಾಕಿಯ ಬೆಲೆ ಏರಿಕೆ ರೇಷ್ಮೆ ಬೆಳೆಗಾರರನ್ನು ಸಂಕಷ್ಟಕ್ಕೆ ದೂಡಿದೆ.
ವಾತಾವರಣ ವೈಪರೀತ್ಯದ ಕಾರಣದಿಂದಾಗಿ ರೇಷ್ಮೆ ಬಿತ್ತನೆ ಗೂಡಿನ ಇಳುವರಿ ಕುಂಠಿತವಾದ ಪರಿಣಾಮ ಚಾಕಿ ಬೆಲೆ ಗಗನಮುಖಿಯಾಗಿದ್ದು, ರೈತರು ತೊಂದರೆಗೆ ಒಳಗಾಗಿದ್ದಾರೆ. 5,000-5,500 ರೂ.ವರೆಗೆ ಇದ್ದ 100 ಮೊಟ್ಟೆಯ ದ್ವಿತಳಿ ಚಾಕಿ ದರ ಬರೋಬ್ಬರಿ 12 ಸಾವಿರ ರೂ.ಗೆ ತಲುಪಿದ ಪರಿಣಾಮ ರೈತರು ರೇಷ್ಮೆ ಗೂಡಿನ ಬೆಲೆ ಏರಿಕೆ ಖುಷಿಯನ್ನು ಅನುಭವಿಸಲು ಸಾಧ್ಯವಾಗದಂತೆ ಆಗಿದೆ.

ಸಮಸ್ಯೆ ಏನಾಗಿದೆ?

ದ್ವಿತಳಿ ರೇಷ್ಮೆ ಮೊಟ್ಟೆ ಉತ್ಪಾದನೆಗೆ ಹೆಣ್ಣು ಚಿಟ್ಟೆಗಳನ್ನು ಒದಗಿಸುವ ಮೈಸೂರು ತಳಿಯ ಹಳದಿ ರೇಷ್ಮೆ ಗೂಡಿನ ಉತ್ಪಾದನೆ ಮತ್ತು ಗಂಡು ಚಿಟ್ಟೆ ಒದಗಿಸುವ ಸಿಎಸ್​ಆರ್​ 2 ತಳಿ ಗೂಡು ಉತ್ಪಾದನೆ ಆಗಬೇಕು. ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ಮತ್ತು ತುಮಕೂರು ಜಿಲ್ಲೆಯ ಕುಣಿಗಲ್​ ತಾಲೂಕು ಹಳದಿ ಬಿತ್ತನೆ ಗೂಡುಗಳನ್ನು ಬೆಳೆಯುವ ಪ್ರದೇಶವಾಗಿದ್ದರೆ, ಹಾಸನ ಜಿಲ್ಲೆ, ಮಂಡ್ಯದ ಕೆ.ಆರ್​.ಪೇಟೆ, ತುಮಕೂರು ಜಿಲ್ಲೆಯ ತುರುವೇಕೆರೆ, ಚಿಕ್ಕನಾಯಕನಹಳ್ಳಿ, ತಿಪಟೂರು, ಬೆಂಗಳೂರು ನಗರ ಜಿಲ್ಲೆಯ ಆನೇಕಲ್​ನಲ್ಲಿ ಸಿಎಸ್​ಆರ್​&2 ಬಿತ್ತನೆಗೂಡು ಬೆಳೆಯಲಾಗುತ್ತದೆ. ಚಳಿಗಾಲದ ಕಾರಣದಿಂದಾಗಿ ಉತ್ಪಾದನೆ ಕುಂಠಿತವಾಗಿ, ಆವಕ ಕಡಿಮೆ ಆದ ಕಾರಣ ಬಿತ್ತನೆ ಗೂಡುಗಳ ಬೆಲೆ ಏಕಾಏಕಿ ಹೆಚ್ಚಳವಾಗಿದೆ.
ಸಾಮಾನ್ಯವಾಗಿ 1.40 ಲಕ್ಷ ಮೊಟ್ಟೆಗಳ ಉತ್ಪಾದನೆ ಆಗುವ ಜಾಗದಲ್ಲಿ ಸುಮಾರು 80 ಸಾವಿರದಷ್ಟು ಮೊಟ್ಟೆ ಉತ್ಪಾದನೆಯೇ ಕುಸಿತ ಕಂಡಿದೆ. ಇದಕ್ಕೆ 40&50 ಸಾವಿರ ಕೆಜಿ ಗೂಡಿನ ಕೊರತೆಯೂ ಕಾರಣ ಎನ್ನಲಾಗುತ್ತಿದೆ. ಇದರಿಂದಾಗಿ ಪ್ರತಿ ಕೆಜಿ ಬಿತ್ತನೆ ಗೂಡಿನ ಬೆಲೆೆ ಸುಮಾರು 5 ಸಾವಿರ ರೂ. ದಾಟಿದೆ. ಇದರಿಂದಾಗಿ ಚಾಕಿ ಕೇಂದ್ರಗಳಿಗೆ ಬೇಕಾದ ಮೊಟ್ಟೆಗಳನ್ನು ಪೂರೈಕೆ ಮಾಡಲು ಸಾಧ್ಯವಾಗದೇ ಚಾಕಿ ಬೆಲೆ ಏರಿಕೆ ಆಗಿದೆ ಎನ್ನಲಾಗುತ್ತಿದೆ.


ಕುಂಠಿತಕ್ಕೆ ಕಾರಣವೇನು?

ಬಿತ್ತನೆಗೂಡಿನ ಆವಕ ಕಡಿಮೆ ಆಗಲು ಈ ವರ್ಷ ದಾಖಲಾದ ಚಳಿ. ಕಳೆದ 40 ವರ್ಷಗಳ ಹಿಂದಿನ ದಾಖಲೆಯನ್ನು ಸರಿಗಟ್ಟಿದೆ. ಈ ಬಾರಿ 14 ಡಿಗ್ರಿ ಸೆಂಟಿಗ್ರೇಡ್​ ಚಳಿ ದಾಖಲಾಗಿದ್ದರಿಂದ ಹಿಪ್ಪು ನೇರಳೆ ಸೊಪ್ಪು ಬೆಳವಣಿಗೆಯೂ ಕುಂಠಿತವಾಗಿದೆ. ಇದರ ಜತೆಗೆ ಈ ಬಾರಿ ಮಾವು ಉತ್ತಮವಾಗಿ ಹೂವು ಕಚ್ಚಿದ್ದರ ಪರಿಣಾಮ, ಮಾವು ಬೆಳೆಯನ್ನು ಉಳಿಸಿಕೊಳ್ಳಲು ಔಷಧ ಸಿಂಪಡಿಸಿ ರೇಷ್ಮೆ ಬೆಳೆಯಲು ಹಿಂದೇಟು ಹಾಕಿದ ಕಾರಣಕ್ಕೆ ಎನ್ನುವುದು ರೇಷ್ಮೆ ಇಲಾಖೆ ಅಧಿಕಾರಿಗಳ ಅಭಿಪ್ರಾಯ.


ಎಲ್ಲವೂ ಸರಿ ಹೋಗುತ್ತಿದೆಯೇ?

ಚಾಕಿ ಬೆಲೆ 100ಕ್ಕೆ 12 ಸಾವಿರ ರೂ. ತಲುಪಿರುವುದು ನಿಜ. ಆದರೆ, ಈಗ ಎಲ್ಲವೂ ಹಳಿಗೆ ಬರುತ್ತಿದೆ ಎನ್ನುವುದು ರೇಷ್ಮೆ ಇಲಾಖೆ ಅಧಿಕಾರಿಗಳ ಹೇಳಿಕೆ. ಶೇ.50ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ರೇಷ್ಮೆ ಬೆಳೆಯಲು ಹಿಂದೇಟು ಹಾಕಿದ ಕಾರಣಕ್ಕೆ, ಆವಕ ಕುಸಿದಿತ್ತು. ಆದರೆ ಮತ್ತೆ ರೈತರ ಮನವೊಲಿಸಿ, ಬೆಳೆಯಲು ಪ್ರೋತ್ಸಾಹ ನೀಡಿದ ಕಾರಣಕ್ಕೆ ರೈತರು ಹಿಂದಿನಂತೆ ರೇಷ್ಮೆ ಬೆಳೆಯಲು ಮುಂದಾಗಿದ್ದಾರೆ. ಇದರಿಂದಾಗಿ ಕೊರತೆ ಕಡಿಮೆ ಆಗಿದೆ. ಈಗಾಗಲೇ 1.26 ಲಕ್ಷ ಮೊಟ್ಟೆಗಳ ಉತ್ಪಾದನೆಯಾಗಿದೆ. ಇದು ಹಂತ ಹಂತವಾಗಿ ಹೆಚ್ಚಳವಾಗುತ್ತದೆ, ರೈತರು ಆತಂಕ ಪಡುವ ಅಗತ್ಯವಿಲ್ಲ ಎನ್ನುವ ಭರವಸೆ ಅಧಿಕಾರಿಗಳ ವಲಯದಿಂದ ಬಂದಿದೆ.

ರೈತರ ನೋವೇನು?

ಒಂದೆಡೆ ಬಿತ್ತನೆ ಗೂಡು ಉತ್ಪಾದನೆ ಕುಸಿತವಾಗಿದ್ದರೂ, ಇತ್ತ ಮಾರುಕಟ್ಟೆ ಬಳಕೆಗೆ ಬೇಕಿರುವ ರೇಷ್ಮೆ ಬೆಳೆಯುವ ರೈತರು ನೋವೇ ಬೇರೆ. ಕಳೆದ ಹಲವಾರು ವರ್ಷಗಳಿಂದಲೂ ಥ್ರಿಪ್ಸ್​, ಎಲೆ ಸುರಳಿ ರೋಗದಿಂದ ಹಿಪ್ಪು ನೇರಳೆ ಸೊಪ್ಪು ಸರಿಯಾಗಿ ಬೆಳೆಯದೇ ಹೆಚ್ಚಿನ ಬೆಳೆ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಈ ಬಾರಿ ಉತ್ತಮ ಸೊಪ್ಪು ಬಂದಿದೆ. ಚಾಕಿ ಖರೀದಿಸಿ ಹೆಚ್ಚಿನ ಉತ್ಪಾದನೆ ಮಾಡಲು ಹೋದರೆ ಏಕಾಏಕಿ ಚಾಕಿ ಬೆಲೆ 12 ಸಾವಿರ ರೂ. ದಾಟಿದೆ, ಇದರಿಂದ ರೈತರು ರೇಷ್ಮೆ ಬೆಳೆಯುವುದಕ್ಕಿಂತ ಸುಮ್ಮನಿದ್ದರೆ ಒಳಿತು ಎನ್ನುವ ಮಾತು ಆಡುತ್ತಿದ್ದಾರೆ.

ಒಂದು ಗಂಡು, ಎರಡು ಹೆಣ್ಣು

ದ್ವಿತಳಿ ಮೊಟ್ಟೆ ಉತ್ಪಾದನೆಗೆ ಬಳಸುವ ಮೈಸೂರು ತಳಿ ಎರಡು ಹೆಣ್ಣು ಚಿಟ್ಟೆಗಳಿಗೆ, ಸಿಎಸ್​ಆರ್​ &2 ತಳಿಯ ಒಂದು ಗಂಡು ಚಿಟ್ಟೆಯನ್ನು ಬಳಸಲಾಗುತ್ತದೆ. ಇದರಿಂದಾಗಿ ಮೈಸೂರು ತಳಿಯ ಹಳದಿ ರೇಷ್ಮೆ ಬಿತ್ತನೆ ಗೂಡಿನ ಉತ್ಪಾದನೆ ಪ್ರಮಾಣ ಸಿಎಸ್​ಆರ್​&2ರ ತಳಿಯ ಗೂಡಿಗಿಂತ ಒಂದುಪಟ್ಟು ಹೆಚ್ಚು ಇರಲೇಬೇಕು. ನಂತರ 2:1ರ ಅನುಪಾತದಲ್ಲಿ ಚಿಟ್ಟೆಗಳ ಮಿಲನ ನಂತರ ಪಡೆಯುವ ಮೊಟ್ಟೆಗಳನ್ನು ಚಾಕಿ ಕೇಂದ್ರಗಳಿಗೆ ನೀಡಲಾಗುತ್ತದೆ. ಇಲ್ಲಿ 10 ದಿನಗಳ ಕಾಲ ಸಾಕಿ, ಎರಡನೇ ಜ್ವರದಿಂದ ರೈತರಿಗೆ ಮಾರಾಟ ಮಾಡಲಾಗುತ್ತದೆ.
ಹವಾಮಾನ ವೈಪರೀತ್ಯ ಮತ್ತು ವಿವಿಧ ಕಾರಣಗಳಿಂದ ಬಿತ್ತನೆ ಗೂಡಿನ ಉತ್ಪಾದನೆಯಲ್ಲಿ ಕುಂಠಿತವಾಗಿತ್ತು. ಇದರಿಂದಾಗಿ ಚಾಕಿ ಬೆಲೆ ಏರಿಕೆ ಆಗಿದೆ. ಈಗ ಎಲ್ಲವೂ ಹಳಿಗೆ ಬರುತ್ತಿದ್ದು, ಚಾಕಿ ಬೆಲೆಯೂ ಇಳಿಕೆ ಆಗಲಿದೆ.
> ರಾಚಪ್ಪ
ಜಂಟಿ ನಿರ್ದೇಶಕರು, ರೇಷ್ಮೆ ಬಿತ್ತನೆ ವಲಯ
===
ಈ ಬಾರಿ ಉತ್ತಮ ಹಿಪ್ಪು ನೇರಳೆ ಸೊಪ್ಪು ಇದೆ. ಆದರೆ ದ್ವಿತಳಿ ಚಾಕಿ ಬೆಲೆ 12 ಸಾವಿರ ರೂ. ಬಂದಿರುವ ಕಾರಣ ರೇಷ್ಮೆ ಬೆಳೆಯದೇ ಸುಮ್ಮನಾಗಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಇಲಾಖೆ ಕೂಡಲೇ ಗಮನ ಹರಿಸಿ ಸಮಸ್ಯೆ ಪರಿಹರಿಸಲಿ.
> ಸ್ವಾಮಿ, ಲಕ್ಕೋಜನಹಳ್ಳಿ
ರೇಷ್ಮೆ ಬೆಳೆಗಾರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net