ಈ ನಡುವೆ ಕಾಡಂಚಿನಲ್ಲಿರುವ ರೈತರ ಮಾವಿನ ತೋಟಗಳೂ ಬೆಂಕಿಯ ಜ್ವಾಲೆ ವ್ಯಾಪಿಸಿ ಸುಟ್ಟುಭಸ್ಮವಾಗುತ್ತಿವೆ. ಜಿಲ್ಲೆ ಬೆಟ್ಟ ಗುಡ್ಡಗಳ ಪ್ರದೇಶ. ಒಂದು ಕಡೆ ಹೆಬ್ಬಂಡೆಗಳಿದ್ದರೆ ಮತ್ತೊಂದು ಭಾಗದಲ್ಲಿ ಸಣ್ಣಸಣ್ಣ ಗುಡ್ಡ, ಅರಣ್ಯ ಪ್ರದೇಶ ಜಿಲ್ಲೆಯಲ್ಲಿದೆ. ಹೆಚ್ಚಿನ ಪ್ರದೇಶ ಮಳೆಯಾಶ್ರಿತÀವಾಗಿರುವ ಕಾರಣ ಮಳೆಗಾಲ ಬಿಟ್ಟರೆ ಬೇಸಿಗೆಯಲ್ಲಿ ಬೆಟ್ಟಗುಡ್ಡ ಪ್ರದೇಶಗಳಲ್ಲಿ ಬೆಳೆದ ಹುಲ್ಲು, ಸಣ್ಣಸಣ್ಣ ಗಿಡಗಳು ಒಣಗಿ ನಿಲ್ಲುತ್ತವೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ಕಿಡಿಗೇಡಿಗಳು ಗುಡ್ಡಪ್ರದೇಶಕ್ಕೆ ಬೆಂಕಿ ಹಾಕಿ ವಿಕೃತಿ ಮೆರೆಯುತ್ತಾರೆ. ಇದರಿಂದ ಮೊಲ, ಹಾವು, ನವಿಲು, ಕಾಡುಕೋಳಿ ಸೇರಿದಂತೆ ನೂರಾರು ಪ್ರಾಣಿ ಪಕ್ಷಿಗಳು, ಬಿಲ, ಪೊಟರೆಗಳಲ್ಲಿ ವಾಸಿಸುವ ಹಾವು, ಅಪರೂಪದ ಚಿಟ್ಟೆ ಪತಂಗಗಳು, ಮತ್ತಿತರ ಕೀಟಗಳು ಸುಟ್ಟು ಕರಕಲಾಗುತ್ತಿವೆ.