ಬಿಡದಿ ಬೈರಮಂಗಲ ಗ್ರಾಮದಲ್ಲಿ ಸಮಗ್ರ ಉಪನಗರ ಯೋಜನೆ ಕೈ ಬಿಡುವಂತೆ ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸಿದರು. ಹೋರಾಟಗಾರ್ತಿ ಚುಕ್ಕಿ ನಂಜುಂಡಸ್ವಾಮಿ, ರೈತ ಹೋರಾಟಗಾರರಾದ ಕೆ.ಟಿ.ಗಂಗಾಧರ್, ಅನೂಸಯಮ್ಮ, ಯಶವಂತ್, ಸುಭಾಷ್ ಶಿರಬೂರು, ಮಂಜು ಕಿರಣ್, ಹೋರಾಟ ಸಮಿತಿಯ ರಾಮಣ್ಣ, ಮಂಡಲಹಳ್ಳಿ ನಾಗರಾಜು, ಪ್ರಕಾಶ್, ಅಶ್ವತ್ಥ್ ಇದ್ದರು.
Published on:
Copied
Follow Us
ಬಿಡದಿ: ರೈತ ಹುತಾತ್ಮ ದಿನ ಜು.21ರಂದು ನಡೆಯಲಿದ್ದು, ಭೂ ಸ್ವಾಧಿನ ವಿರೋಧಿ ದಿನ ಎಂದು ಎಲ್ಲ ಜಿಲ್ಲೆಯಲ್ಲಿಯೂ ಪ್ರತಿಭಟನೆ ಮಾಡಲಾಗುವುದು ಎಂದು ರೈತ ಹೋರಾಟಗಾರ್ತಿ ಚುಕ್ಕಿ ನಂಜುಂಡಸ್ವಾಮಿ ತಿಳಿಸಿದರು.
ಬೈರಮಂಗಲ ಗ್ರಾಮದಲ್ಲಿ ಸಮಗ್ರ ಉಪನಗರ ಯೋಜನೆ ಕೈ ಬಿಡುವಂತೆ ಒತ್ತಾಯಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಶನಿವಾರ ಭಾಗಿಯಾಗಿ ಅವರು ಮಾತನಾಡಿದರು. ರೈತರ ಹೋರಾಟಕ್ಕೆ ರಾಜಕೀಯ ಬೆರೆಸಬಾರದು. ರೈತರು ಪಾತೀತವಾಗಿ ಹೋರಾಟ ಮಾಡಿ. ನಮ್ಮ ತಂದೆಯ ಪೋಟೋ ಹಾಕಿಕೊಂಡು ಹೋರಾಟ ಮಾಡುತ್ತಿದ್ದೀರಿ. ಒಂದು ವೇಳೆ ನೀವು ರಾಜಕೀಯ ಬೆರೆಸುವುದಾದರೆ ನಮ್ಮ ತಂದೆಯ ೋಟೊವನ್ನು ಬ್ಯಾನರ್ ನಿಂದ ತೆಗೆಯಿರಿ ಎಂದು ಬೇಸರದ ಮಾತುಗಳನ್ನಾಡಿದರು.
ಪ್ರೊ. ನಂಜುಂಡಸ್ವಾಮಿ ಅವರು ಬದುಕಿದ್ದರೆ ಇಲ್ಲಿ ಯಾವೊಬ್ಬ ರಾಜಕೀಯ ನಾಯಕರು ರೈತರ ಹೆಸರು ಹೆೇಳಿಕೊಂಡು ಬರುತ್ತಿರಲಿಲ್ಲ. ಇಲ್ಲಿನ ರೈತರು ತಮ್ಮ ಜಮೀನುಗಳನ್ನು ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದ್ದಾರೆ. ಈ ಹೋರಾಟದಲ್ಲಿ ಎಲ್ಲ ರೈತರು ಒಟ್ಟಾಗಿ ಭಾಗಿಯಾಗಿ ಸರ್ಕಾರದ ಈ ಕುಚೇಷ್ಟೆಗೆ ತಕ್ಕ ಉತ್ತರ ಕೊಡಬೇಕು. ಹಾಗಾಗಿ ಯಾವುದೇ ಕಾರಣಕ್ಕೂ ಟೌನ್ಶಿಪ್ಗೆ ಭೂಮಿ ಕೊಡಬಾರದು, ನಿಮ್ಮ ಜತೆಗೆ ನಾವಿದ್ದೇವೆ ಎಂದು ಧೈರ್ಯ ತುಂಬಿದರು.
ರೈತ ಮುಖಂಡ ಹೊನ್ನೂರು ಪ್ರಕಾಶ್ ಮಾತನಾಡಿ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರೈತರ ಭೂಮಿಯನ್ನು ಕಾಪೋರ್ರೇಟ್ ಕಂಪನಿಗಳಿಗೆ ಕೊಡುವ ದಲ್ಲಾಳಿಯಾಗಿದ್ದಾರೆ. ರಾಜಕಾರಣಿಗಳು ಬೆಳೆ ನಡುವಿನ ಕಳೆ ಇದ್ದಂತೆ. ಅದನ್ನು ಕಿತ್ತುಹಾಕಿ ಗೊಬ್ಬರ ಮಾಡಬೇಕು ಎಂದರು.
ಪಾದಯಾತ್ರೆ:
ರಾಜ್ಯದ 15ಕ್ಕೂ ಹೆಚ್ಚು ಜಿಲ್ಲೆಗಳಿಂದ ವಿವಿಧ ರೈತ ಪರ ಸಂಘಟನೆಗಳ ಮುಖಂಡರು ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ಸೂಚಿಸಲು ಆಗಮಿಸಿದ್ದರು. ಬೈರಮಂಗಲ ಕ್ರಾಸ್ನಿಂದ ಬೈರಮಂಗಲ ಗ್ರಾಮದ ವರೆಗೆ ಬೃಹತ್ ಪಾದಯಾತ್ರೆ ಮಾಡಿದರು.
ಮಾತಿನ ಚಕಮಕಿ
ಬೈರಮಂಗಲ ಗ್ರಾಮದಲ್ಲಿ ಯೋಜನೆ ಪರ ವಿರೋಧ ಪ್ರತಿಭಟನೆಗಳು ನಡೆಯುತ್ತಿವೆ. ಯೋಜನೆ ವಿರೋಧಿಸಿ ಬೈರಮಂಗಲ ಗ್ರಾಮಕ್ಕೆ ಬಂದ ಹೊರ ಜಿಲ್ಲೆಯ ರೈತ ಹೋರಾಟಗಾರರನ್ನು ಹಾಗೂ ರೈತರು ಬಂದಿದ್ದ ವಾಹನಗಳನ್ನು ಯೋಜನೆ ಪರವಾಗಿರುವ ರೈತರು ತಡೆಯಲು ಮುಂದಾದರು, ಹೊರಗಡೆಯಿಂದ ನೀವು ಏಕೆ ಬರುತ್ತೀರಿ ಎಂದು ಪ್ರಶ್ನೆ ಮಾಡಿದರು. ಯೋಜನೆ ಪರ- ಯೋಜನೆ ವಿರುದ್ಧ ರೈತರ ನಡುವೆ ಘೋಷಣೆ ಕೂಗಿದರು. ಈ ವೇಳೆ ರೈತರು ಹಾಗೂ ಪೊಲೀಸರ ನಡುವೆ ತಳ್ಳಾಟ ನೂಕಾಟ, ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಇದೇ ವೇಳೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿಕೊಂಡಿದ್ದ ಪೊಲೀಸರು ಎರಡೂ ಕಡೆಯವರನ್ನ ಸಮಾಧಾನ ಪಡಿಸಿದ್ದರು.
ಯೋಜನೆ ವಿರೋಧಿಸಿ ಬೈರಮಂಗಲ ಗ್ರಾಮಕ್ಕೆ ಬಂದ ಹೊರ ಜಿಲ್ಲೆಯ ರೈತ ಹೋರಾಟಗಾರರನ್ನು ಯೋಜನೆ ಪರವಾಗಿರುವ ರೈತರ ಮಾತಿನ ಚಕಮಕಿ ನಡೆಯಿತು.